ಕರ್ನಾಟಕದಲ್ಲಿ ದ್ವಿಭಾಷಾ ನೀತಿ ಜಾರಿಗೆ ಆಗ್ರಹಿಸಿ ಕರವೇ ಪ್ರತಿಭಟನೆ


ಸಪ್ತಸಾಗರ ವಾರ್ತೆ,ವಿಜಯಪುರ, ಜು. 9 : ಕರ್ನಾಟಕದ ಶಿಕ್ಷಣ ವ್ಯವಸ್ಥೆಯಲ್ಲಿ ದ್ವಿಭಾಷಾ ನೀತಿಯನ್ನು ಜಾರಿಗೆ ತರಬೇಕೆಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಪದಾಧಿಕಾರಿಗಳು, ಕಾರ್ಯಕರ್ತರು ಬುಧವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.
ಕರ್ನಾಟಕ ರಕ್ಷಣಾ ವೇದಿಕೆ ಪದಾಧಿಕಾರಿಗಳ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಈ ಬಗ್ಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಕರವೇ ಜಿಲ್ಲಾಧ್ಯಕ್ಷ ಎಂ.ಸಿ.ಮುಲ್ಲಾ ಮಾತನಾಡಿ, ಕರ್ನಾಟಕ ರಾಜ್ಯದ ಪಠ್ಯಕ್ರಮದಲ್ಲಿ ಸಾಧಾರಣವಾಗಿ ಕನ್ನಡವನ್ನು ಪ್ರಥಮ ಭಾಷೆಯಾಗಿ ಕನ್ನಡವನ್ನು, ದ್ವಿತೀಯ ಭಾಷೆಯಾಗಿ ಇಂಗ್ಲಿಷನ್ನು ಮತ್ತು ತೃತೀಯ ಭಾಷೆಯಾಗಿ ಹಿಂದಿಯನ್ನು ಕಲಿಸಲಾಗುತ್ತಿದೆ. ರಾಜ್ಯ ಪಠ್ಯಕ್ರಮದಲ್ಲಿ ಓದುವ ಮಕ್ಕಳು ಮೂರನೇ ಭಾಷೆಯಾಗಿ ಹಿಂದಿ ಕಲಿಯುವುದು ಕಡ್ಡಾಯವಾಗಿದೆ. ಮಾತ್ರವಲ್ಲ, ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ನೂರು ಅಂಕಗಳಿಗೆ ಹಿಂದಿ ಪರೀಕ್ಷೆಯನ್ನು ಕಡ್ಡಾಯವಾಗಿ ಬರೆಯಬೇಕಿದೆ. ತೃತೀಯ ಭಾಷೆಯಾದ ಹಿಂದಿಯು ಕರ್ನಾಟಕದ ವಿದ್ಯಾರ್ಥಿಗಳಿಗೆ ಅನಗತ್ಯವಾದ ಒತ್ತಡವನ್ನು ಒಡ್ಡುತ್ತಿದೆ. ವಿದ್ಯಾರ್ಥಿಗಳು ತೃತೀಯ ಭಾಷೆಯಾದ ಹಿಂದಿಯಲ್ಲಿ ಅನುತ್ತೀರ್ಣ ಆಘಾತಕಾರಿಯಾಗಿದೆ. ಇದು ಹಿಂದಿಯ ಕಡ್ಡಾಯ ಶಿಕ್ಷಣದಿಂದ ವಿದ್ಯಾರ್ಥಿಗಳಿಗೆ ಉಂಟಾಗುತ್ತಿರುವ ಶೈಕ್ಷಣಿಕ ಹೊರೆಯನ್ನು ಸ್ಪಷ್ಟವಾಗಿ ತೋರಿಸುತ್ತದೆ. ಹಿಂದಿ ಹೇರಿಕೆಗೆ ಕನ್ನಡದ ಮಕ್ಕಳ ಭವಿಷ್ಯ ಬಲಿಯಾಗುತ್ತಿದೆ. ತ್ರಿಭಾಷಾ ಸೂತ್ರದ ಕುರಿತು ರಾಷ್ಟ್ರಕವಿ ಕುವೆಂಪು ಅವರು ಹಿಂದೆಯೇ ತೀಕ್ಷ್ಯವಾದ ವಿರೋಧವನ್ನು ಸಾರಿದ್ದರು. ಕರ್ನಾಟಕದ ಶಾಲೆಗಳಲ್ಲಿ ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳನ್ನು ಕಡ್ಡಾಯಗೊಳಿಸುವ ದ್ವಿಭಾಷಾ ನೀತಿಯನ್ನು ಜಾರಿಗೆ ತರಬೇಕು. ತೃತೀಯ ಭಾಷೆಯಾದ ಹಿಂದಿಯನ್ನು ಪಠ್ಯಕ್ರಮದಿಂದ ಹೊರಗಿಡಬೇಕು ಎಂದು ಒತ್ತಾಯಿಸಿದರು . ರಾಜ್ಯ ಮತ್ತು ಕೇಂದ್ರೀಯ ಶಿಕ್ಷಣ ವ್ಯವಸ್ಥೆ ಶಾಲೆಗಳಿಗೆ ಏಕರೂಪದ ದ್ವಿಭಾಷಾ ನೀತಿಯನ್ನು ಜಾರಿಗೊಳಿಸಬೇಕು. ಸಿಬಿಎಎಸ್ ಇ, ಐಸಿಎಸ್ ಇ ಶಾಲೆಗಳಲ್ಲೂ ಪ್ರಥಮ ಭಾಷೆಯಾಗಿ ಕನ್ನಡವನ್ನೇ ಕಡ್ಡಾಯಗೊಳಿಸಬೇಕು. ಕನ್ನಡ ಮಾಧ್ಯಮ ಶಾಲೆಗಳನ್ನು ಬಲಪಡಿಸಿ. ಉತ್ತಮ ಗುಣಮಟ್ಟದ ಇಂಗ್ಲಿಷ್ ಶಿಕ್ಷಣವನ್ನು ನೀಡಬೇಕು. ಕರ್ನಾಟಕದ ಶಿಕ್ಷಣ ವ್ಯವಸ್ಥೆಯು ರಾಜ್ಯದ ಭಾಷಿಕ ಆಸ್ಮಿತೆಯನ್ನು ಗೌರವಿಸುವ, ವಿದ್ಯಾರ್ಥಿಗಳ ಶೈಕ್ಷಣಿಕ ಯಶಸ್ಸನ್ನು ಖಾತ್ರಿಪಡಿಸುವ ಮತ್ತು ಜಾಗತಿಕ ಸ್ಪರ್ಧೆಗೆ ಸಿದ್ಧವಾಗಿರುವಂತಹ ಒಂದು ವ್ಯವಸ್ಥೆಯಾಗಿರಬೇಕು. ತ್ರಿಭಾಷಾ ನೀತಿಯಿಂದ ಕರ್ನಾಟಕದ ವಿದ್ಯಾರ್ಥಿಗಳಿಗೆ ಉಂಟಾಗುತ್ತಿರುವ ಅನಗತ್ಯ ಒತ್ತಡವನ್ನು ತೆಗೆದುಹಾಕಿ, ತಮಿಳುನಾಡು ಮತ್ತು ಮಹಾರಾಷ್ಟ್ರದಂತಹ ರಾಜ್ಯಗಳ ದ್ವಿಭಾಷಾ ನೀತಿಯನ್ನು ಅನುಸರಿಸುವ ಮೂಲಕ ಕರ್ನಾಟಕವು ತನ್ನ ಭಾಷಿಕ ಗುರುತನ್ನು ರಕ್ಷಿಸಬೇಕು ಎಂದು ಹೇಳಿದರು. ಕರ್ನಾಟಕದ ಸಾಂಸ್ಕೃತಿಕ ಮತ್ತು ಭಾಷಿಕ ಆಸ್ಮಿತೆಯಲ್ಲಿ ಈ ನೆಲದ ನುಡಿಯಾದ ಕನ್ನಡವು ಕೇಂದ್ರ ಸ್ಥಾನವನ್ನು ಹೊಂದಿದೆ. ಬದಲಾದ ಕಾಲಘಟ್ಟದಲ್ಲಿ ಇಂಗ್ಲಿಷ್ ಭಾಷೆಯು ಜಾಗತಿಕ ವ್ಯವಹಾರಗಳಿಗೆ, ಉನ್ನತ ಶಿಕ್ಷಣ ಮತ್ತು ವೃತ್ತಿ ನಿರ್ವಹಣೆಗೆ ಅಗತ್ಯವಾಗಿದ್ದು, ಆದರೆ, ಹಿಂದಿ ಓದಿಸುವುದರಿಂದ ಕರ್ನಾಟಕದ ವಿದ್ಯಾರ್ಥಿಗಳಿಗೆ ಯಾವುದೇ ಪ್ರಯೋಜನವಿಲ್ಲ. ತ್ರಿಭಾಷಾ ನೀತಿಯಿಂದ ಕರ್ನಾಟಕಕ್ಕೆ ಯಾವ ಲಾಭವೂ ಇಲ್ಲ. ಇದರಿಂದ ಒಬ್ಬನೇ ಒಬ್ಬ ಕನ್ನಡಿನಿಗೂ ಉದ್ಯೋಗ ದೊರೆತಿಲ್ಲ.
ರಾಜ್ಯ ಸಂಚಾಲಕ, ಸಂತೋಷ ಪಾಟೀಲ ಡಂಬಳ ಮಾತನಾಡಿ, ತಮಿಳುನಾಡು 1968ರಿಂದಲೇ ತ್ರಿಭಾಷಾ ನೀತಿಯನ್ನು ತಿರಸ್ಕರಿಸಿ, ತಮಿಳು ಮತ್ತು ಇಂಗ್ಲಿಷ್ ಭಾಷೆಗಳನ್ನು ಒಳಗೊಂಡ ದ್ವಿಭಾಷಾ ನೀತಿಯನ್ನು ಯಶಸ್ವಿಯಾಗಿ ಜಾರಿಗೆ ತಂದಿದೆ. ಇತ್ತೀಚೆಗೆ ಮಹಾರಾಷ್ಟ್ರ ಸರ್ಕಾರವು ಸಹ ತ್ರಿಭಾಷಾ ನೀತಿಯನ್ನು ರದ್ದುಗೊಳಿಸಿ, ಮರಾಠಿ ಮತ್ತು ಇಂಗ್ಲಿಷ್ ಭಾಷೆಗಳನ್ನು ಕಡ್ಡಾಯಗೊಳಿಸುವ ನಿರ್ಧಾರವನ್ನು ಕೈಗೊಂಡಿದೆ. ಈ ರಾಜ್ಯಗಳು ತಮ್ಮ ಭಾಷಿಕ ಗುರುತನ್ನು ರಕ್ಷಿಸುವುದರ ಜೊತೆಗೆ ಶೈಕ್ಷಣಿಕ ಗುಣಮಟ್ಟವನ್ನು ಕಾಪಾಡಿಕೊಂಡಿವೆ, ಕರ್ನಾಟಕವು ಈ ಉದಾಹರಣೆಗಳಿಂದ ಸ್ಪೂರ್ತಿಯನ್ನು ಪಡೆದು, ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಿಗೆ ಆದ್ಯತೆ ನೀಡುವ ದ್ವಿಭಾಷಾ ನೀತಿಯನ್ನು ಜಾರಿಗೆ ತರಬೇಕಾಗಿದೆ. ಕರ್ನಾಟಕದ ರಾಜ್ಯ ಪಠ್ಯಕ್ರಮದಲ್ಲಿ ವಿದ್ಯಾರ್ಥಿಗಳು ಐದು ವಿಷಯಗಳನ್ನು (ಮೂರು ವಿಷಯಗಳು ಮತ್ತು ಎರಡು ಭಾಷೆಗಳು) ಎಸ್‌ಎಸ್‌ಎಲ್ಸಿ ಪರೀಕ್ಷೆಯಲ್ಲಿ ಬರೆಯುತ್ತಾರೆ. ಆದರೆ, ತೃತೀಯ ಭಾಷೆಯಾದ ಹಿಂದಿಯನ್ನು ಕಡ್ಡಾಯವಾಗಿ ಓದಬೇಕಾದ ಒತ್ತಡವು ವಿದ್ಯಾರ್ಥಿಗಳಿಗೆ ಅನಗತ್ಯ ಹೊರೆಯಾಗಿದೆ. ಇದಕ್ಕೆ ವ್ಯತಿರಿಕ್ತವಾಗಿ, ಕೇಂದ್ರೀಯ ಶಿಕ್ಷಣ ವ್ಯವಸ್ಥೆ ಶಾಲೆಗಳಲ್ಲಿ ಕೇವಲ ಎರಡು ಭಾಷೆಗಳನ್ನು ಕಡ್ಡಾಯವಾಗಿ ಓದಿಸಲಾಗುತ್ತದೆ. ಎಸ್ ಎಸ್ ಎಲ್ ಸಿ ಪರೀಕ್ಷೆಗಳಲ್ಲಿ ಎರಡು ಭಾಷೆಗಳಿಗೆ ಮಾತ್ರ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಈ ತಾರತಮ್ಮವು ರಾಜ್ಯ ಪಠ್ಯಕ್ರಮದ ವಿದ್ಯಾರ್ಥಿಗಳಿಗೆ ಅನ್ಯಾಯವನ್ನುಂಟು ಮಾಡುತ್ತಿದೆ. ಇದರಿಂದಾಗಿ, ಕನ್ನಡ ಮಾಧ್ಯಮದ ವಿದ್ಯಾರ್ಥಿಗಳು ಗಣಿತ, ವಿಜ್ಞಾನ ಮುಂತಾದ ವಿಷಯಗಳಿಗೆ ಹೆಚ್ಚಿನ ಸಮಯವನ್ನು ನೀಡಲು ವಿಫಲರಾಗುತ್ತಿದ್ದಾರೆ. ಈ ಆಸಮಾನತೆಯನ್ನೂ ಸಹ ರಾಜ್ಯ ಸರ್ಕಾರ ಗಂಭೀರವಾಗಿ ಗಮನಿಸಬೇಕಿದೆ ಎಂದರು.
ಈ ಸಂರ್ದರ್ಭದಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ ಅಶೋಕ ಹಾರಿವಾಳ ಮಾತನಾಡಿ, ತೃತೀಯ ಭಾಷೆಯನ್ನು ತೆಗೆದು ಹಾಕುವುದರಿಂದ ವಿದ್ಯಾರ್ಥಿಗಳು ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳ ಜೊತೆಗೆ ಇತರ ವಿಷಯಗಳ ಮೇಲೆ ಹೆಚ್ಚಿನ ಗಮನವನ್ನು ಕೇಂದ್ರೀಕರಿಸಬಹುದು. ಕನ್ನಡ ಭಾಷೆಗೆ ಆದ್ಯತೆ ನೀಡುವುದರಿಂದ ಕರ್ನಾಟಕದ ಭಾಷಿಕ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ನಾವು ಮುಂದಿನ ಪೀಳಿಗೆಗೆ ಉಳಿಸಿದಂತಾಗುತ್ತದೆ. ದ್ವಿಭಾಷಾ ನೀತಿಯು ಶಿಕ್ಷಣ ಸಂಪನ್ಮೂಲಗಳನ್ನು ಕನ್ನಡ ಮತ್ತು ಇಂಗಿಷ್ ಕೇಂದ್ರೀಕರಿಸಲು ಅನುವು ಮಾಡಿಕೊಡುತ್ತದೆ. ಇದರಿಂದ ಶಿಕ್ಷಣದ ಗುಣಮಟ್ಟ ಸುಧಾರಿಸುತ್ತದೆ. ಉತ್ತರ ಭಾರತದ ರಾಜ್ಯಗಳಾದ ಉತ್ತರ ಪ್ರದೇಶ ಮತ್ತು ಬಿಹಾರದಂತಹ ರಾಜ್ಯಗಳು ದ್ವಿಭಾಷಾ ನೀತಿಯನ್ನು ಅನುಸರಿಸುತ್ತವೆ. ಕರ್ನಾಟಕಕ್ಕೂ ಇದೇ ರೀತಿಯ ಸಮಾನತೆಯನ್ನು ಒದಗಿಸಬೇಕು. ಕನ್ನಡಿಗರು ನಮ್ಮದಲ್ಲದ ನುಡಿಯನ್ನು ಯಾಕೆ ಕಡ್ಡಾಯವಾಗಿ ಕಲಿಯಬೇಕು? ಯಾರದೋ ಹುನ್ನಾರಕ್ಕೆ ಕನ್ನಡಿಗರೇಕೆ ಬಲಿಯಾಗಬೇಕು ಎಂದು ಪ್ರಶ್ನಿಸಿದರು.
ಈ ಸಂದರ್ಭದಲ್ಲಿ ಮಹಾದೇವ ರಾವಜಿ, ರಾಜು ಕಂಬಾಗಿ, ರವಿ ಕಿತ್ತೂರ, ದಸ್ತಗೀರ ಸಾಲೋಟಗಿ, ಫಯಾಜ್ ಕಲಾದಗಿ, ಮುತ್ತು ಹಿರೇಮಠ, ಜೈಭೀಮ ಮುತ್ತಗಿ, ಅನುರಾಧಾ ಕಲಾಲ, ಕಸ್ತೂರಿ ಪೂಜಾರಿ, ಶ್ರೀಕಾಂತ ಬಿಜಾಪುರ, ಎಚ್.ಎಸ್.ಕಬಾಡೆ, ಸಾಧಿಕ ಜಾನ್ವೇಕರ, ದಾದಾಪೀರ ಮುಜಾವರ, ಆಸೀಫ್ ಪೀರವಾಲೆ, ದಯಾನಂದ ಸಾವಳಗಿ, ವಿನೋದ ದಳವಾಯಿ, ಮಲ್ಲನಗೌಡ ಪಾಟೀಲ, ಬಸವರಾಜ ಬಿ.ಕೆ., ವಿಜಯಕುಮಾರ ಯಂಭತ್ನಾಳ, ಮಂಜುನಾಥ ಹಿರೇಮಠ, ನಿಸಾರ ಬೇಪಾರಿ, ಹನಮಂತ ಟಕ್ಕಳಕಿ, ತಾಜೋದ್ದೀನ ಕಲೀಫಾ, ಅಮೀನ ಅಗಸಿಮನಿ, ಕವಿತಾ ಸಾವಳಗಿ, ಐ.ಸಿ.ಪಠಾಣ, ರಾಜು ಇಜೇರಿ, ಮೊಹ್ಮದ ಮುಲ್ಲಾ, ಇಮ್ತಿಯಾಜ ಮುಲ್ಲಾ, ಪಿದಾ ಕಲಾದಗಿ, ಬಸಲಿಂಗ ಮಡಿವಾಳ, ಆನಂದ ಬಿರಾದಾರ, ಮನೋಹರ ತಾಜವ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

Share