ಗಾನ ಕೋಗಿಲೆ ಎಸ್. ಜಾನಕಿ ನಿಧನ: ಕರ್ನಾಟಕ ಕಲಾ ಸಂಘದ ಸಂತಾಪ

ಸಪ್ತಸಾಗರ ವಾರ್ತೆ,ವಿಜಯಪುರ, ಜು.12: ಭಾರತೀಯ ಚಿತ್ರರಂಗದ ಅಪ್ರತಿಮ ಹಿನ್ನೆಲೆ ಗಾಯಕಿ, ಗಾನ ಕೋಗಿಲೆ ಎಸ್. ಜಾನಕಿ ಅವರ ನಿಧನಕ್ಕೆ ಕರ್ನಾಟಕ ಕಲಾ ಸಂಘ ತೀವ್ರ ಸಂತಾಪ ವ್ಯಕ್ತಪಡಿಸಿದೆ.
ಸಂಘದ ಅಧ್ಯಕ್ಷ ಬಾಬುರಾವ ಕುಲಕರ್ಣಿ ಅವರು ಸಂತಾಪ ಸಂದೇಶದಲ್ಲಿ, ಸಂಗೀತದ ಔಪಚಾರಿಕ ಶಿಕ್ಷಣವಿಲ್ಲದಿದ್ದರೂ ಅಪಾರ ಪ್ರತಿಭೆ, ಸಂಗೀತದ ಮೇಲಿನ ಅಪಾರ ಪ್ರೀತಿ ಹಾಗೂ ನಿರಂತರ ಪರಿಶ್ರಮದಿಂದ ಸುಮಾರು ಆರು ದಶಕಗಳ ಕಾಲ ಭಾರತೀಯ ಚಿತ್ರರಂಗದಲ್ಲಿ ಅಮೋಘ ಸಾಧನೆ ಮಾಡಿದ ಎಸ್. ಜಾನಕಿ ಅವರು ಸುಮಾರು 48 ಸಾವಿರಕ್ಕೂ ಅಧಿಕ ಹಾಡುಗಳನ್ನು ವಿವಿಧ ಭಾರತೀಯ ಭಾಷೆಗಳಲ್ಲಿ ಹಾಡಿ ಅಸಂಖ್ಯಾತ ಸಂಗೀತಾಭಿಮಾನಿಗಳ ಹೃದಯ ಗೆದ್ದಿದ್ದಾರೆ ಎಂದು ತಿಳಿಸಿದ್ದಾರೆ.
ಅವರು ನಾಲ್ಕು ರಾಷ್ಟ್ರೀಯ ಪ್ರಶಸ್ತಿ, 32 ರಾಜ್ಯ ಪ್ರಶಸ್ತಿಗಳು, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಹಾಗೂ ಮೈಸೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಸೇರಿದಂತೆ ಅನೇಕ ಗೌರವಗಳಿಗೆ ಭಾಜನರಾಗಿದ್ದರು. ಕನ್ನಡ ಚಿತ್ರರಂಗಕ್ಕೆ ಅವರು ನೀಡಿದ ಕೊಡುಗೆ ಅನನ್ಯವಾಗಿದ್ದು, ‘ಚಂದನದ ಗೊಂಬೆ’, ‘ಬಯಲುದಾರಿ’ ಸೇರಿದಂತೆ ಹಲವು ಚಿತ್ರಗಳ ಹಾಡುಗಳು ಹಾಗೂ ‘ಹೇಮರೆಡ್ಡಿ ಮಲ್ಲಮ್ಮ’ ಚಿತ್ರದ “ಶಿವ ಶಿವ ಎನ್ನದ ನಾಲಿಗೆ ಏಕೆ” ಹಾಡು ಕನ್ನಡಿಗರ ಮನದಲ್ಲಿ ಅಜರಾಮರವಾಗಿದೆ ಎಂದು ಸ್ಮರಿಸಿದ್ದಾರೆ.
ಡಾ. ರಾಜ್‌ಕುಮಾರ್ ಅವರೊಂದಿಗೆ 200ಕ್ಕೂ ಹೆಚ್ಚು ಯುಗಳ ಗೀತೆಗಳನ್ನು ಹಾಡಿರುವ ಎಸ್. ಜಾನಕಿ, ಮೂಲತಃ ತೆಲುಗು ಭಾಷಿಕರಾಗಿದ್ದರೂ ಕನ್ನಡ ನಾಡು ಹಾಗೂ ಮೈಸೂರಿನೊಂದಿಗೆ ವಿಶೇಷ ಬಾಂಧವ್ಯ ಹೊಂದಿದ್ದರು. ತಮ್ಮ ಜೀವನದ ಅಂತಿಮ ದಿನಗಳನ್ನು ಮೈಸೂರಿನಲ್ಲಿಯೇ ಕಳೆದಿರುವುದು ಕನ್ನಡಿಗರೊಂದಿಗೆ ಅವರ ಆತ್ಮೀಯತೆಯನ್ನು ತೋರಿಸುತ್ತದೆ ಎಂದು ಹೇಳಿದ್ದಾರೆ.
ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ಬಳಿಕ ಇದೀಗ ಎಸ್. ಜಾನಕಿ ಅವರಂತಹ ಕರ್ಣಮಧುರ ಗಾಯಕಿಯನ್ನು ಕಳೆದುಕೊಂಡಿರುವುದು ಭಾರತೀಯ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ಸುಮಧುರ ಕಂಠ ಮತ್ತು ಭಾವಪೂರ್ಣ ಗಾಯನ ಸಂಗೀತಾಸಕ್ತರ ಮನದಲ್ಲಿ ಎಂದೆಂದಿಗೂ ಚಿರಸ್ಥಾಯಿಯಾಗಿ ಉಳಿಯಲಿದೆ ಎಂದು ಬಾಬುರಾವ ಕುಲಕರ್ಣಿ ತಿಳಿಸಿದ್ದಾರೆ.
ಕರ್ನಾಟಕ ಕಲಾ ಸಂಘದ ಸದಸ್ಯರಾದ ರಾಜಶೇಖರ ಕಲ್ಮಠ, ಡಾ. ಬಿ.ಎಸ್. ಕಳ್ಳಿಮಠ, ಕಲ್ಯಾಣರಾವ್ ದೇಶಪಾಂಡೆ, ವಸಂತರಾವ ಕೊರ್ತಿ, ಪ್ರಕಾಶ ಇನಾಮದಾರ, ಬಿ.ಎಸ್. ಸಜ್ಜನ, ದಾನೇಶ ಅವಟಿ, ಡಾ. ಯಲಗೋಡ, ಪ್ರಕಾಶ ಆರ್. ಕುಲಕರ್ಣಿ, ರಾಮಚಂದ್ರ ದೀಕ್ಷಿತ, ಎಂ.ವಿ. ಸಿಂಧೆ, ಆನಂದ ಎಂ. ಕುಲಕರ್ಣಿ, ಉಲ್ಲಾಸ ಪಾಟೀಲ ಹಾಗೂ ಸುಧೀಂದ್ರ ರಾಘವೇಂದ್ರ ಜಕಾತಿ ಸೇರಿದಂತೆ ಹಲವರು ಎಸ್. ಜಾನಕಿ ಅವರ ನಿಧನಕ್ಕೆ ಶೋಕ ವ್ಯಕ್ತಪಡಿಸಿದ್ದಾರೆ.

Share this