ಸಪ್ತಸಾಗರ ವಾರ್ತೆ, ಹುಬ್ಬಳ್ಳಿ, ಫೆ. 3:
ಕಳೆದ ದಶಕದಲ್ಲಿ ಬಜೆಟ್ ಹಂಚಿಕೆ ಮತ್ತು ನಿರಂತರ ಹೂಡಿಕೆಯಲ್ಲಿ ನಡೆದ ಐತಿಹಾಸಿಕ ಹೆಚ್ಚಳದಿಂದ ಕರ್ನಾಟಕವು ರೈಲ್ವೆ ಮೂಲಸೌಕರ್ಯದಲ್ಲಿ ಅಭೂತಪೂರ್ವ ಪರಿವರ್ತನೆಗೆ ಸಾಕ್ಷಿಯಾಗಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಮತ್ತು ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಅವರು ಹೇಳಿದರು.
ರೈಲ್ವೆ ಸಚಿವ ನವದೆಹಲಿಯಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ 2026-27ರ ಬಜೆಟ್ ಮುಖ್ಯಾಂಶಗಳ ಬಗ್ಗೆ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದರು.
2009–14ರ ಅವಧಿಯಲ್ಲಿ ₹835 ಕೋಟಿಯಾಗಿದ್ದ ರಾಜ್ಯಕ್ಕೆ ಸರಾಸರಿ ವಾರ್ಷಿಕ ರೈಲ್ವೆ ಬಜೆಟ್ ಹಂಚಿಕೆ, 2026–27ರಲ್ಲಿ ₹7,748 ಕೋಟಿಗೆ ಏರಿಕೆಯಾಗಿದ್ದು, ಸುಮಾರು ಒಂಬತ್ತು ಪಟ್ಟು ಹೆಚ್ಚಳವಾಗಿದ್ದು ರಾಜ್ಯದಲ್ಲಿ ರೈಲು ಸಾರಿಗೆಯ ವೇಗವಾದ ಆಧುನೀಕರಣಕ್ಕೆ ಕಾರಣವಾಗಿದೆ. ಈ ಹೆಚ್ಚಿದ ಹೂಡಿಕೆಯ ಪರಿಣಾಮವಾಗಿ ಕರ್ನಾಟಕದಾದ್ಯಂತ ಸುಮಾರು ₹52,950 ಕೋಟಿ ಮೌಲ್ಯದ ರೈಲ್ವೆ ಮೂಲಸೌಕರ್ಯ ಕಾಮಗಾರಿಗಳು ಪ್ರಸ್ತುತ ಪ್ರಗತಿಯಲ್ಲಿವೆ. ಇವು ಹೊಸ ರೈಲು ಹಳಿ ನಿರ್ಮಾಣ, ನಿಲ್ದಾಣಗಳ ಸಮಗ್ರ ಪುನರಾಭಿವೃದ್ಧಿ ಮತ್ತು ಪ್ರಮುಖ ಸುರಕ್ಷತಾ ಸುಧಾರಣೆಗಳನ್ನು ಒಳಗೊಂಡಿದ್ದು, ರಾಜ್ಯದ ಎಲ್ಲ ಭಾಗಗಳಲ್ಲಿ ಸಮತೋಲಿತ ಅಭಿವೃದ್ಧಿಯನ್ನು ಖಚಿತಪಡಿಸುತ್ತಿವೆ ಎಂದು ಅವರು ತಿಳಿಸಿದರು.
ಅಮೃತ್ ನಿಲ್ದಾಣ ಯೋಜನೆಯಡಿಯಲ್ಲಿ ಪ್ರಯಾಣಿಕರ ಅನುಭವವನ್ನು ಆಧುನಿಕ ಹಾಗೂ ವಿಶ್ವಮಟ್ಟದ ಸೌಲಭ್ಯಗಳ ಮೂಲಕ ಮರುರೂಪಿಸಲಾಗುತ್ತಿದೆ. ₹2,110 ಕೋಟಿ ವೆಚ್ಚದಲ್ಲಿ ಕರ್ನಾಟಕದ 61 ನಿಲ್ದಾಣಗಳನ್ನು ಸಂಪೂರ್ಣ ಪುನರಾಭಿವೃದ್ಧಿಗೆ ಗುರುತಿಸಲಾಗಿದೆ. ಬಾಗಲಕೋಟೆ, ಧಾರವಾಡ, ಗದಗ, ಗೋಕಾಕ್ ರೋಡ್ ಮತ್ತು ಮುನಿರಾಬಾದ್ ನಿಲ್ದಾಣಗಳಲ್ಲಿ ಕಾಮಗಾರಿಗಳು ಪೂರ್ಣಗೊಂಡಿದ್ದು, ಬಾದಾಮಿ, ಆಳ್ನಾವರ್, ಕೊಪ್ಪಳ ಮತ್ತು ಬಂಟವಾಳ ನಿಲ್ದಾಣಗಳು ಉದ್ಘಾಟನೆಗೆ ಸಿದ್ಧವಾಗಿವೆ. ಈ ನಿಲ್ದಾಣಗಳು ಪ್ರಯಾಣಿಕರಿಗೆ ಸುಧಾರಿತ ಸೌಲಭ್ಯಗಳು, ಉತ್ತಮ ವ್ಯವಸ್ಥೆ ಮತ್ತು ಆಧುನಿಕ ಪ್ರಯಾಣ ವಾತಾವರಣವನ್ನು ಒದಗಿಸುತ್ತವೆ ಎಂದು ಹೇಳಿದ್ದಾರೆ.
ಪ್ರೀಮಿಯಂ ರೈಲು ಸೇವೆಗಳ ವಿಸ್ತರಣೆಯಿಂದ ರಾಜ್ಯದ ಒಳಗೂ ಹೊರಗೂ ಸಂಪರ್ಕದಲ್ಲಿ ಗಮನಾರ್ಹ ಸುಧಾರಣೆ ಕಂಡುಬಂದಿದೆ. ಪ್ರಸ್ತುತ ಕರ್ನಾಟಕದಲ್ಲಿ 12 ಜೋಡಿ ವಂದೇ ಭಾರತ್ ಎಕ್ಸ್ಪ್ರೆಸ್ ಮತ್ತು 3 ಜೋಡಿ ಅಮೃತ್ ಭಾರತ್ ಎಕ್ಸ್ಪ್ರೆಸ್ ರೈಲುಗಳು ಕಾರ್ಯನಿರ್ವಹಿಸುತ್ತಿದ್ದು, ಪ್ರಯಾಣದ ವೇಗ, ಆರಾಮ ಮತ್ತು ದಕ್ಷತೆಯನ್ನು ಹೆಚ್ಚಿಸಿವೆ ಎಂದು ನುಡಿದರು.
ಜಾಲ ವಿಸ್ತರಣೆ ಮತ್ತು ವಿದ್ಯುದೀಕರಣ ಕಾರ್ಯಗಳು ವೇಗವಾಗಿ ಮುನ್ನಡೆಯುತ್ತಿವೆ. 2014ರಿಂದ ರಾಜ್ಯದಲ್ಲಿ ಸುಮಾರು 1,750 ಕಿ.ಮೀ ಹೊಸ ರೈಲು ಹಳಿಗಳನ್ನು ನಿರ್ಮಿಸಲಾಗಿದೆ, ಇದು ಶ್ರೀಲಂಕಾದ ಸಂಪೂರ್ಣ ರೈಲು ಜಾಲದ ಉದ್ದಕ್ಕಿಂತ ಹೆಚ್ಚಾಗಿದೆ. ರಾಜ್ಯದಲ್ಲಿ ಶೇ.97ರಷ್ಟು ವಿದ್ಯುದೀಕರಣ ಸಾಧಿಸಲಾಗಿದ್ದು, 3,368 ಕಿ.ಮೀ ರೈಲು ಮಾರ್ಗಗಳನ್ನು ವಿದ್ಯುದೀಕರಣಗೊಳಿಸಲಾಗಿದೆ. ಜೊತೆಗೆ, ಸುರಕ್ಷತೆ ಮತ್ತು ಸುಗಮ ರಸ್ತೆ–ರೈಲು ಸಂಪರ್ಕಕ್ಕಾಗಿ 707 ಫ್ಲೈಓವರ್ಗಳು ಮತ್ತು ಅಂಡರ್ಪಾಸ್ಗಳನ್ನು ನಿರ್ಮಿಸಲಾಗಿದೆ ಎಂದು ಹೇಳಿದ್ದಾರೆ.
ರೈಲು ಸುರಕ್ಷತೆಯ ಕ್ಷೇತ್ರದಲ್ಲಿ ‘ಕವಚ್’ ಎಂಬ ಅತ್ಯಾಧುನಿಕ ರೈಲು ಘರ್ಷಣೆ ತಪ್ಪಿಸುವ ವ್ಯವಸ್ಥೆಯನ್ನು ಹಂತ ಹಂತವಾಗಿ ಅಳವಡಿಸಲಾಗುತ್ತಿದೆ. ಈಗಾಗಲೇ 132 ಮಾರ್ಗ ಕಿಲೋಮೀಟರ್ಗಳಲ್ಲಿ ಕವಚ್ ಕಾರ್ಯಾರಂಭಗೊಂಡಿದ್ದು, ಸುಮಾರು 1,500 ಮಾರ್ಗ ಕಿಲೋಮೀಟರ್ಗಳಲ್ಲಿ ಕಾಮಗಾರಿಗಳು ಪ್ರಗತಿಯಲ್ಲಿವೆ ಮತ್ತು ಟೆಂಡರ್ ಹಂತದಲ್ಲಿವೆ. ಒಟ್ಟು 3,610 ಮಾರ್ಗ ಕಿಲೋಮೀಟರ್ಗಳಿಗೆ ಕವಚ್ ಅಳವಡಿಕೆಗೆ ಮಂಜೂರಾಗಿದೆ ಎಂದು ವಿವರಿಸಿದರು.
ನೈಋತ್ಯ ರೈಲ್ವೆಯ ಅಧೀನದಲ್ಲಿರುವ ಗೋವಾದಲ್ಲಿಯೂ ರೈಲ್ವೆ ಮೂಲಸೌಕರ್ಯದಲ್ಲಿ ಸ್ಥಿರವಾದ ಬೆಳವಣಿಗೆ ಕಂಡುಬರುತ್ತಿದೆ. 2026–27ರಲ್ಲಿ ಗೋವಾಕ್ಕೆ ಸರಾಸರಿ ವಾರ್ಷಿಕ ₹515 ಕೋಟಿ ಬಜೆಟ್ ಹಂಚಿಕೆ ಮಾಡಲಾಗಿದೆ. ಪ್ರಸ್ತುತ ₹4,344 ಕೋಟಿ ಮೌಲ್ಯದ ಕಾಮಗಾರಿಗಳು ಪ್ರಗತಿಯಲ್ಲಿದ್ದು, ಸಾಮರ್ಥ್ಯ ವೃದ್ಧಿ, ನಿಲ್ದಾಣ ಪುನರಾಭಿವೃದ್ಧಿ ಮತ್ತು ಸುರಕ್ಷತಾ ಸುಧಾರಣೆಗಳ ಮೇಲೆ ಒತ್ತು ನೀಡಲಾಗಿದೆ. ಅಮೃತ್ ನಿಲ್ದಾಣ ಯೋಜನೆಯಡಿಯಲ್ಲಿ ಗೋವಾದ ಮೂರು ನಿಲ್ದಾಣಗಳನ್ನು ₹65 ಕೋಟಿ ವೆಚ್ಚದಲ್ಲಿ ಪುನರಾಭಿವೃದ್ಧಿ ಮಾಡಲಾಗುತ್ತಿದೆ. ಎರಡು ಜೋಡಿ ವಂದೇ ಭಾರತ್ ಎಕ್ಸ್ಪ್ರೆಸ್ ರೈಲುಗಳು ಕಾರ್ಯನಿರ್ವಹಿಸುತ್ತಿವೆ. 2014ರಿಂದ 24 ಕಿ.ಮೀ ಹೊಸ ರೈಲು ಹಳಿ ನಿರ್ಮಾಣವಾಗಿದ್ದು, 171 ಕಿ.ಮೀ ವಿದ್ಯುದೀಕರಣದೊಂದಿಗೆ ಶೇ.91ರಷ್ಟು ವಿದ್ಯುದೀಕರಣ ಸಾಧಿಸಲಾಗಿದೆ. ಜೊತೆಗೆ 11 ಫ್ಲೈಓವರ್ಗಳು ಮತ್ತು ಅಂಡರ್ಪಾಸ್ಗಳನ್ನು ನಿರ್ಮಿಸಲಾಗಿದೆ. ₹4,730 ಕೋಟಿ ಅಂದಾಜು ವೆಚ್ಚದಲ್ಲಿ 312 ಕಿ.ಮೀ ಉದ್ದದ ಹೊಸಪೇಟೆ–ವಾಸ್ಕೋ ಡಿ ಗಾಮಾ ಜೋಡಿಮಾರ್ಗ ಯೋಜನೆ ಮಂಜೂರಾಗಿದ್ದು, ಇದು ಸಾಮರ್ಥ್ಯ ವೃದ್ಧಿಗೆ ಮಹತ್ವದ ಉತ್ತೇಜನ ನೀಡಲಿದೆ ಎಂದಿದ್ದಾರೆ.
ಈ ವಿಡಿಯೋ ಕಾನ್ಫರೆನ್ಸ್ನಲ್ಲಿ ನೈಋತ್ಯ ರೈಲ್ವೆಯ ಹೆಚ್ಚುವರಿ ಪ್ರಧಾನ ವ್ಯವಸ್ಥಾಪಕ ಪಿ. ಅನಂತ್ ಅವರು ಮಾತನಾಡಿದರು. ಈ ಸಂದರ್ಭದಲ್ಲಿ ಬೆಂಗಳೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಅಶುತೋಷ್ ಕುಮಾರ್ ಸಿಂಗ್, ಹುಬ್ಬಳ್ಳಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕಿ ಬೇಲಾ ಮೀನಾ, ಮೈಸೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಮುದಿತ್ ಮಿತ್ತಲ್ ಹಾಗೂ ವಿವಿಧ ವಿಭಾಗಗಳ ಪ್ರಧಾನ ಮುಖ್ಯಸ್ಥರು ವರ್ಚುವಲ್ ಮೂಲಕ ಭಾಗವಹಿಸಿದ್ದರು.
ಕರ್ನಾಟಕವು ರೈಲ್ವೆ ಮೂಲ ಸೌಕರ್ಯದಲ್ಲಿ ಅಭೂತಪೂರ್ವ ಪರಿವರ್ತನೆಗೆ ಸಾಕ್ಷಿ


