ಸಪ್ತಸಾಗರ ವಾರ್ತೆ,ಇಂಡಿ, ಏ. 20: ಬಸವಣ್ಣನವರು ವಚನಗಳ ಮೂಲಕ ಸ್ವಾಸ್ಥ್ಯ ಸಮಾಜಕ್ಕೆ ಬೇಕಾದ ನೀತಿಸೂತ್ರಗಳ ಸಂದೇಶ ನೀಡಿದ್ದು, ಅವು ಇಡೀ ಜಗತ್ತಿನ ಮನುಕುಲಕ್ಕೆ ನೀಡಿದಂತಹ ಜೀವನ ಸಂವಿಧಾನ, ಸಾಮಾಜಿಕ ನೀತಿ ಸಂಹಿತೆ ಎಂದು ಶಿಕ್ಷಕ ಸಂತೋಷ ಬಂಡೆ ಹೇಳಿದರು.
ಸೋಮವಾರ ತಾಲೂಕಿನ ಹಿರೇರೂಗಿ ಗ್ರಾಮದ ಯುಬಿಎಸ್ ಶಾಲೆಯಲ್ಲಿ ಹಮ್ಮಿಕೊಂಡ ಬಸವ ಜಯಂತಿ ಆಚರಣೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಕಾಯಕ, ದಾಸೋಹ ತತ್ವಗಳು ಬಸವಣ್ಣನವರ ಶ್ರೇಷ್ಠ ಕೊಡುಗೆಗಳು. ಅವರ ಶರಣ ಸಂಸ್ಕೃತಿ ಇಡೀ ವಿಶ್ವಕ್ಕೆ ಆದರ್ಶ ಮಾನವ ಸಂಸ್ಕೃತಿಯಾಗಿದೆ. ನುಡಿದಂತೆ ನಡೆದ ಅವರು ಇಂದಿಗೂ ಆದರ್ಶಪ್ರಾಯ ಎಂದು ಹೇಳಿದರು.
ಭಕ್ತಿ, ಜ್ಞಾನ ಮತ್ತು ಸಮಾಜ ಪರಿವರ್ತನೆಯ ಸಂದೇಶ ಸಾರಿದ ಬಸವಣ್ಣನವರ ತತ್ವಗಳು ಮನುಷ್ಯನ ಬದುಕಿಗೆ ದಾರಿದೀಪ. ದುಡಿಮೆಯಿಲ್ಲದೆ ಸಂಪತ್ತು ಗಳಿಸಬೇಕೆಂಬ ಇಂದಿನ ಸಮಾಜಕ್ಕೆ ಕಾಯಕವೇ ಕೈಲಾಸ ಎಂಬ ಸಂದೇಶ ಎಂದೆಂದೂ ಅನ್ವಯವಾಗುವ ಒಂದು ದಿವ್ಯ ಮಂತ್ರವಾಗಿದೆ ಎಂದು ಹೇಳಿದರು.
ಮುಖ್ಯ ಶಿಕ್ಷಕ ಕೆ.ಐ. ಮಕಾನದಾರ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಾನವ ಸಮುದಾಯಕ್ಕೆ ಮತ್ತು ದಿಕ್ಕುಗೆಟ್ಟ ಜಗತ್ತಿಗೆ ಬಸವಾದಿ ಶರಣರ ವಚನ ಸಾಹಿತ್ಯ ದಿವ್ಯಶಕ್ತಿ ಆಗಿದೆ. ಬಸವಣ್ಣನವರು ಕಂಡ ವರ್ಣರಹಿತ, ಜಾತಿರಹಿತ ಸಮಾನತೆಯ ಸಮಾಜ ನಮ್ಮೆಲ್ಲರ ಇಂದಿನ ಆಶಯ ಆಗಬೇಕಿದೆ ಎಂದು ಹೇಳಿದರು.
ಶಿಕ್ಷಕರಾದ ನಿಂಗಪ್ಪ ನಾವದಗಿ, ಶಾಂತೇಶ ಹಳಗುಣಕಿ ಉಪಸ್ಥಿತರಿದ್ದರು.
ಕಾಯಕ, ದಾಸೋಹ ಬಸವಣ್ಣನವರ ಶ್ರೇಷ್ಠ ಕೊಡುಗೆ-ಸಂತೋಷ ಬಂಡೆ


