ಅ.2ರಂದು ಭೂ ಮಾಪಕರ, ಅ.4ರಂದು ಗ್ರಾಮ ಆಡಳಿತಾಧಿಕಾರಿ ಪರೀಕ್ಷೆ

53 ಕೇಂದ್ರಗಳಲ್ಲಿ 20,808 ಅಭ್ಯರ್ಥಿಗಳು; ಪರೀಕ್ಷಾ ಅಕ್ರಮ ತಡೆಗೆ ಕಟ್ಟುನಿಟ್ಟಿನ ಕ್ರಮ: ಡಿಸಿ ಡಾ. ಆನಂದ ಕೆ.

ಸಪ್ತಸಾಗರ ವಾರ್ತೆ,ವಿಜಯಪುರ, ಸೆ.28: ಭೂ ಮಾಪಕರು ಹಾಗೂ ಗ್ರಾಮ ಆಡಳಿತಾಧಿಕಾರಿ ಹುದ್ದೆಗಳ ನೇಮಕಾತಿ ಪರೀಕ್ಷೆಗಳನ್ನು ಯಾವುದೇ ಗೊಂದಲ, ಲೋಪ ಹಾಗೂ ಅಕ್ರಮಗಳಿಗೆ ಅವಕಾಶವಿಲ್ಲದಂತೆ ಸುಸೂತ್ರವಾಗಿ ಮತ್ತು ಪಾರದರ್ಶಕವಾಗಿ ನಡೆಸಲು ಅಗತ್ಯವಿರುವ ಎಲ್ಲ ಪೂರ್ವಸಿದ್ಧತೆಗಳನ್ನು ಪೂರ್ಣಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ಆನಂದ ಕೆ. ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ಸೋಮವಾರ ನಡೆದ ಪರೀಕ್ಷಾ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಅಕ್ಟೋಬರ್ 2ರಂದು ಭೂ ಮಾಪಕರ ನೇಮಕಾತಿ ಪರೀಕ್ಷೆ ನಡೆಯಲಿದ್ದು, ಬೆಳಿಗ್ಗೆ ಹಾಗೂ ಮಧ್ಯಾಹ್ನ ಎರಡು ಪತ್ರಿಕೆಗಳಲ್ಲಿ ಪರೀಕ್ಷೆ ನಡೆಯಲಿದೆ. ವಿಜಯಪುರ ನಗರದ 18 ಪರೀಕ್ಷಾ ಕೇಂದ್ರಗಳಲ್ಲಿ ಒಟ್ಟು 6,956 ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.
ಅಕ್ಟೋಬರ್ 4ರಂದು ಗ್ರಾಮ ಆಡಳಿತಾಧಿಕಾರಿ ನೇಮಕಾತಿ ಪರೀಕ್ಷೆ ನಡೆಯಲಿದ್ದು, ವಿಜಯಪುರ ನಗರದಲ್ಲಿ 49, ಕವಲಗಿಯಲ್ಲಿ 2, ತಿಡಗುಂದಿಯಲ್ಲಿ 1 ಹಾಗೂ ಬಬಲೇಶ್ವರದಲ್ಲಿ 1 ಸೇರಿದಂತೆ ಒಟ್ಟು 53 ಪರೀಕ್ಷಾ ಕೇಂದ್ರಗಳಲ್ಲಿ 20,808 ಅಭ್ಯರ್ಥಿಗಳು ಪರೀಕ್ಷೆ ಬರೆಯಲು ನೋಂದಾಯಿಸಿಕೊಂಡಿದ್ದಾರೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಅಭ್ಯರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ಪರೀಕ್ಷಾ ನಿಯಮಗಳ ಪಾಲನೆ ಕಡ್ಡಾಯವಾಗಿದೆ. ಜಿಲ್ಲೆಗೆ ಒಬ್ಬ ಮಾಸ್ಟರ್ ಟ್ರೇನರ್ ನೇಮಕವಾಗಿದ್ದು, ಪರೀಕ್ಷಾ ಸಿದ್ಧತೆ ಕುರಿತು ಈಗಾಗಲೇ ತರಬೇತಿ ನೀಡಲಾಗಿದೆ. ಪ್ರತಿ ಪರೀಕ್ಷಾ ಕೇಂದ್ರದ ಅಧೀಕ್ಷಕರು ಹಾಗೂ ಮೇಲ್ವಿಚಾರಕರು ತಮ್ಮ ಕರ್ತವ್ಯ ಮತ್ತು ಜವಾಬ್ದಾರಿಗಳನ್ನು ಸ್ಪಷ್ಟವಾಗಿ ಅರಿತು ಕಾರ್ಯನಿರ್ವಹಿಸಬೇಕು ಎಂದರು.
ಈ ಬಾರಿ ಹಿರಿಯ ಅಧಿಕಾರಿಗಳನ್ನು ಫ್ಲೈಯಿಂಗ್ ಸ್ಕ್ವಾಡ್ ಆಗಿ ನಿಯೋಜಿಸಲಾಗಿದ್ದು, ಪ್ರತಿ ಪರೀಕ್ಷಾ ಕೇಂದ್ರದಲ್ಲೂ ವೆಬ್‌ಕಾಸ್ಟಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ಪ್ರಶ್ನೆಪತ್ರಿಕೆಗಳನ್ನು ನಿಗದಿತ ಸಮಯಕ್ಕೆ ಸುರಕ್ಷಿತವಾಗಿ ಕೇಂದ್ರಗಳಿಗೆ ತಲುಪಿಸುವ ವ್ಯವಸ್ಥೆ ಮಾಡಬೇಕು. ಪರೀಕ್ಷೆ ಆರಂಭಕ್ಕೂ ಮುನ್ನ ಗೌಪ್ಯ ಸಾಮಗ್ರಿ ಸೇರಿದಂತೆ ಎಲ್ಲ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಬೇಕು ಎಂದು ಸೂಚಿಸಿದರು.
ಪರೀಕ್ಷಾ ಪ್ರಕ್ರಿಯೆಯಲ್ಲಿ ಕಟ್ಟುನಿಟ್ಟಿನ ಗೌಪ್ಯತೆ ಹಾಗೂ ಭದ್ರತೆ ಕಾಯ್ದುಕೊಳ್ಳಲು ಪರೀಕ್ಷಾ ಕೇಂದ್ರಗಳ ಪ್ರವೇಶದ್ವಾರ, ಸಾಮಗ್ರಿ ಸಂಗ್ರಹಣಾ ಸ್ಥಳ ಹಾಗೂ ಪರೀಕ್ಷಾ ಕೊಠಡಿಗಳಲ್ಲಿ ಸಿಸಿಟಿವಿ ಕ್ಯಾಮೆರಾ ಮತ್ತು ಜಾಮರ್‌ಗಳನ್ನು ಅಳವಡಿಸಲಾಗುತ್ತಿದೆ. ಗೌಪ್ಯ ಸಾಮಗ್ರಿಗಳ ಸಾಗಾಣಿಕೆಗೆ ತ್ರಿ-ಸದಸ್ಯ ಮಾರ್ಗಾಧಿಕಾರಿಗಳ ತಂಡ ಹಾಗೂ ಪ್ರತಿ ನಾಲ್ಕರಿಂದ ಐದು ಪರೀಕ್ಷಾ ಕೇಂದ್ರಗಳಿಗೆ ಐದು ಸದಸ್ಯರ ಫ್ಲೈಯಿಂಗ್ ಸ್ಕ್ವಾಡ್‌ಗಳನ್ನು ನಿಯೋಜಿಸಲಾಗಿದೆ ಎಂದು ತಿಳಿಸಿದರು.

200 ಮೀಟರ್ ವ್ಯಾಪ್ತಿಯಲ್ಲಿ ಝೆರಾಕ್ಸ್ ಅಂಗಡಿಗಳು ಬಂದ್

ಪರೀಕ್ಷಾ ಕೇಂದ್ರಗಳ ಸುತ್ತಲಿನ 200 ಮೀಟರ್ ವ್ಯಾಪ್ತಿಯ ಝೆರಾಕ್ಸ್ ಅಂಗಡಿಗಳನ್ನು ಮುಚ್ಚಿಸಲು ಹಾಗೂ ಪೊಲೀಸ್ ಸಿಬ್ಬಂದಿಯ ನೆರವಿನಿಂದ ಅನಗತ್ಯ ಜನದಟ್ಟಣೆ ನಿಯಂತ್ರಿಸಲು ಕ್ರಮ ಕೈಗೊಳ್ಳಬೇಕು. ಕೇಂದ್ರಗಳಲ್ಲಿ ಆಸನ, ಕುಡಿಯುವ ನೀರು, ಗಾಳಿ-ಬೆಳಕು ಹಾಗೂ ನಿರಂತರ ವಿದ್ಯುತ್ ವ್ಯವಸ್ಥೆ ಸಮರ್ಪಕವಾಗಿರುವುದನ್ನು ಮುಂಚಿತವಾಗಿಯೇ ಪರಿಶೀಲಿಸಬೇಕು ಎಂದರು.
ಪರೀಕ್ಷಾ ಕೊಠಡಿಯೊಳಗೆ ಮೊಬೈಲ್, ಬ್ಲೂಟೂತ್, ವಾಚ್, ಕ್ಯಾಲ್ಕುಲೇಟರ್, ಜಿಪಿಎಸ್ ಸಾಧನ, ಪೆನ್ಸಿಲ್, ಲಾಗ್ ಟೇಬಲ್, ಮಾಸ್ಕ್ ಹಾಗೂ ಆಹಾರ ಪದಾರ್ಥಗಳನ್ನು ತರಲು ಅವಕಾಶವಿಲ್ಲ. ಧಾರ್ಮಿಕ ಉಡುಪು ಧರಿಸುವ ಅಭ್ಯರ್ಥಿಗಳು ಎರಡು ಗಂಟೆ ಮುಂಚಿತವಾಗಿ ಪರೀಕ್ಷಾ ಕೇಂದ್ರಕ್ಕೆ ಆಗಮಿಸಬೇಕು. ಪ್ರತಿ 100 ಅಭ್ಯರ್ಥಿಗಳಿಗೆ ಒಬ್ಬರಂತೆ ಹೋಮ್‌ಗಾರ್ಡ್ ಹಾಗೂ ಪೊಲೀಸ್ ಸಿಬ್ಬಂದಿಯ ಸಮ್ಮುಖದಲ್ಲಿ ತಪಾಸಣೆ ನಡೆಸಿದ ಬಳಿಕವೇ ಪ್ರವೇಶ ನೀಡಲಾಗುವುದು ಎಂದು ತಿಳಿಸಿದರು.
ಪರೀಕ್ಷಾ ಅಕ್ರಮಗಳನ್ನು ತಡೆಗಟ್ಟಲು ವಿಶೇಷ ಕಾಯ್ದೆ ಜಾರಿಯಲ್ಲಿದ್ದು, ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಯೋಜನಾಬದ್ಧವಾಗಿ ಹಾಗೂ ಆತ್ಮವಿಶ್ವಾಸದಿಂದ ಪರೀಕ್ಷೆ ನಡೆಸಬೇಕು ಎಂದು ಡಿಸಿ ಸೂಚಿಸಿದರು.

ಪರೀಕ್ಷಾ ಕರ್ತವ್ಯ ಗಂಭೀರವಾಗಿ ನಿರ್ವಹಿಸಿ: ಎಸ್ಪಿ

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಮಾತನಾಡಿ, ಪರೀಕ್ಷಾ ಕಾರ್ಯವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಬೇಕು. ಪರೀಕ್ಷಾರ್ಥಿಗಳ ಭವಿಷ್ಯಕ್ಕೆ ಸಂಬಂಧಿಸಿದ ಮಹತ್ವದ ಪರೀಕ್ಷೆಯಾಗಿರುವುದರಿಂದ ಯಾವುದೇ ಕಾರಣಕ್ಕೂ ಕರ್ತವ್ಯದಲ್ಲಿ ಲೋಪವಾಗದಂತೆ ಎಚ್ಚರಿಕೆ ವಹಿಸಬೇಕು ಎಂದರು.
ಕೊಠಡಿ ಮೇಲ್ವಿಚಾರಕರ ಜವಾಬ್ದಾರಿ ಅತ್ಯಂತ ಪ್ರಮುಖವಾಗಿದ್ದು, ಪರೀಕ್ಷಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಸಲಹೆ ನೀಡಿದರು.
ಅಪರ ಜಿಲ್ಲಾಧಿಕಾರಿ ಡಾ. ಔದ್ರಾಮ ಮಾತನಾಡಿ, ಹಿರಿಯ ಅಧಿಕಾರಿಗಳನ್ನು ಫ್ಲೈಯಿಂಗ್ ಸ್ಕ್ವಾಡ್‌ಗಳಾಗಿ ನಿಯೋಜಿಸಲಾಗಿದ್ದು, ಅವರಿಗೆ ನಾಲ್ಕರಿಂದ ಐದು ಪರೀಕ್ಷಾ ಕೇಂದ್ರಗಳ ಜವಾಬ್ದಾರಿ ನೀಡಲಾಗಿದೆ. ಪರೀಕ್ಷೆ ಆರಂಭಕ್ಕೂ ಮುನ್ನವೇ ಕೇಂದ್ರಗಳಿಗೆ ಭೇಟಿ ನೀಡಿ ಯಾವುದೇ ಗೊಂದಲಗಳಿದ್ದರೆ ತಕ್ಷಣ ಪರಿಹರಿಸಬೇಕು ಎಂದರು.
ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ರಾಜಶೇಖರ ಡಂಬಳ ಮಾತನಾಡಿ, ಪರೀಕ್ಷಾ ಕೇಂದ್ರಗಳಲ್ಲಿ ಗಾಳಿ-ಬೆಳಕಿನ ವ್ಯವಸ್ಥೆ ಸಮರ್ಪಕವಾಗಿರಬೇಕು. ಅಭ್ಯರ್ಥಿಗಳಿಗೆ ಗೊಂದಲವಾಗದಂತೆ ಹಾಲ್ ಹೊರಭಾಗದಲ್ಲಿ ನೋಂದಣಿ ಸಂಖ್ಯೆಯನ್ನು ದೊಡ್ಡದಾಗಿ ಮುದ್ರಿಸಿ ಅಂಟಿಸಬೇಕು ಎಂದು ಸೂಚಿಸಿದರು.
ಸಭೆಯಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಕೆ.ಎ. ಉಪ್ಪಾರ, ಖಜಾನೆ ಇಲಾಖೆಯ ಉಪ ನಿರ್ದೇಶಕ ಆನಂದ ಮುಚ್ಚಂಡಿ, ಡಿವೈಎಸ್ಪಿ ನಾಗರಾಜ, ಮಾಸ್ಟರ್ ತರಬೇತಿದಾರ ಎಲ್.ಜಿ. ಕುಂಬಾರ, ಜಗದೀಶ ಗುಲಗಂಜಿ ಸೇರಿದಂತೆ ವಿವಿಧ ಪರೀಕ್ಷಾ ಕೇಂದ್ರಗಳ ಉಪ ಮುಖ್ಯ ಅಧೀಕ್ಷಕರು ಹಾಗೂ ಸಂಬಂಧಿಸಿದ ಅಧಿಕಾರಿಗಳು ಉಪಸ್ಥಿತರಿದ್ದರು.

Share this