ವಿಜಯಪುರ- ಚಿಕ್ಕಲಕಿ ಬಸ್ ಗೆ ಚಾಲನೆ

ಸಪ್ತಸಾಗರ ವಾರ್ತೆ, ವಿಜಯಪುರ, ಸೆ. 16: ನಗರದಿಂದ ಚಿಕ್ಕಲಕಿ ಕ್ರಾಸ್ ವರೆಗೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹೊಸದಾಗಿ ಎರಡು ಗ್ರಾಮೀಣ ಸಾರಿಗೆ ಬಸ್ ಸಂಚಾರಕ್ಕೆ ಇಂದು ಮಂಗಳವಾರ ಯಕ್ಕುಂಡಿ‌ ಗ್ರಾಮದಲ್ಲಿ ಚಾಲನೆ ನೀಡಲಾಯಿತು.
ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿಂಗರಿಸಲಾಗಿದ್ದ ಎರಡು ಬಸ್ಸುಗಳ ಸಂಚಾರಕ್ಕೆ ತಾಲೂಕು ಗ್ಯಾರಂಟಿ ಯೋಜನೆಗಳ‌ ಸಮಿತಿ‌ ಅಧ್ಯಕ್ಷ ಮಲ್ಲು ದಳವಾಯಿ ಮತ್ತು ಬ್ಲಾಕ್ ಕಾಂಗ್ರೆಸ್ ಈರಗೊಂಡ ಬಿರಾದಾರ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮಲ್ಲು ದಳವಾಯಿ, ಸಚಿವ ಎಂ. ಬಿ. ಪಾಟೀಲ‌ ಅವರ ಸೂಚನೆಯಂತೆ ಈ ಗ್ರಾಮೀಣ ಸಾರಿಗೆ ನೂತನ ಬಸ್ಸುಗಳ ಸೇವೆ ಪ್ರಾರಂಭವಾಗಿದೆ.‌ ಇದರಿಂದ ಈ ಮಾರ್ಗದಲ್ಲಿ ಬರುವ ಚಿಕ್ಕಲಕಿ ಕ್ರಾಸ್, ಅರ್ಜುಣಗಿ, ಯಕ್ಕುಂಡಿ, ಬಬಲೇಶ್ವರ, ಸಾರವಾಡ, ವಿಜಯಪುರ ಹಾಗೂ ಸುತ್ತಮುತ್ತಲಿನ ವಿದ್ಯಾರ್ಥಿಗಳು, ರೈತರು, ಕಾರ್ಮಿಕರು ಹಾಗೂ‌ ಸಾರ್ವಜನಿಕರಿಗೆ ಅನುಕೂಲವಾಗಲಿದೆ. ಸಚಿವರಿಗೆ ಹಾಗೂ ಸಾರಿಗೆ ಇಲಾಖೆಗೆ ಕೃತಜ್ಞತೆ ಸಲ್ಲಿಸುವುದಾಗಿ‌ ತಿಳಿಸಿದರು.
ಈರನಗೌಡ ಬಿರಾದಾರ ಮಾತನಾಡಿ, ಈ ಬಸ್ಸುಗಳ ಸಂಚಾರ ಎಲ್ಲರಿಗೂ ಸಂತಸ ತಂದಿದೆ ಎಂದು‌ ಹೇಳಿದರು.
ಈ ಸಂದರ್ಭದಲ್ಲಿ ತಾಲೂಕಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸದಸ್ಯರಾದ ಲಾಲಸಾಬ ಜಮಾದಾರ, ಗ್ರಾ ಪಂ ಅಧ್ಯಕ್ಷ ರಫೀಕ ಸೋನಾರ, ಸದಸ್ಯರಾದ ಗುರು ಜೈನಾಪೂರ, ಸಿದರಾಯ ಬಿರಾದಾರ, ಬಸು ಕಾಲಿಬಾಗ, ಗೌಡಪ್ಪ ಬಿರಾದಾರ, ಮುಖಂಡರಾದ ಬಾಬುಗೌಡ ಪಾಟೀಲ, ಚನ್ನಪ್ಪ ಕೊಪ್ಪದ, ಶೇಖಪ್ಪ ಕೊಪ್ಪದ, ಪ್ರಭುಗೌಡ ಪಾಟೀಲ, ಅಶ್ಪಾಕ ಜಾಗೀರದಾರ, ಜುಬ್ರಾಯಿಲ್ ಮೊಕಾಲೆ,‌ ರವಿ ಕಾಂಬಳೆ, ನಾಗರಾಜ ಕುಲಕರ್ಣಿ, ಮುದಕನಗೌಡ ಪಾಟೀಲ, ಗುರುಬಸಪ್ಪ ತೆವರಟ್ಟಿ, ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಕ ನಾರಾಯಣಪ್ಪ ಕುರುಬರ, ಡಿಟಿಓ ಎಂ. ಎಸ್. ಹಿರೇಮಠ, ಡಿಪೋ-1ರ ಮ್ಯಾನೇಜರ್ ಎಸ್. ಎ. ಬಿರಾದಾರ, ಎ. ಟಿ. ಎಂ ಜೆ. ಕೆ.‌ ಹುಗ್ಗೆನವರ ಸೇರಿದಂತೆ ಯಕ್ಕುಂಡಿ, ಹೊಕ್ಕುಂಡಿ, ಕಾತ್ರಾಳ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಮುಖಂಡರು ಉಪಸ್ಥಿತರಿದ್ದರು.

Share