ಸಪ್ತಸಾಗರ ವಾರ್ತೆ, ವಿಜಯಪುರ ಜ. 16 :
ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನ ಮಾಹಿತಿ ರೈತರ ಮನೆ ಬಾಗಿಲಿಗೆ ತಲುಪಲು ಡಿಜಿಟಲ್ ಮಾಧ್ಯಮ ಕ್ಷೇತ್ರ ಅತ್ಯಂತ ಸಹಕಾರಿಯಾಗಲಿದೆ ಎಂದು ನಿವೃತ್ತ ಸಹ ವಿಸ್ತರಣಾ ನಿರ್ದೇಶಕ ಡಾ. ರವೀಂದ್ರ ಬೆಳ್ಳಿ ಹೇಳಿದರು.
ವಿಜಯಪುರ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಕೃಷಿ ಇಲಾಖೆ ಹಾಗೂ ಆತ್ಮ ಯೋಜನೆಯ ಅಧಿಕಾರಿಗಳಿಗೆ ಶುಕ್ರವಾರ ಹಮ್ಮಿಕೊಂಡ ತರಬೇತಿ ಕಾರ್ಯಕ್ರಮ ಸಮಾರೋಪ ಸಮಾರಂಭದಲ್ಲಿ ಪ್ರಮಾಣಪತ್ರ ವಿತರಿಸಿ ಮಾತನಾಡಿದರು. ಇಂದು ಕೃಷಿ ಮತ್ತು ಕೃಷಿ ಸಂಬಂಧಿತ ಕ್ಷೇತ್ರಗಳಲ್ಲಿ ಅನೇಕ ಆವಿಷ್ಕಾರಗಳಾಗುತ್ತಿವೆ. ಅವುಗಳನ್ನು ರೈತರ ಮನೆ ಬಾಗಿಲಿಗೆ ತಲುಪಿಸುವ ಜವಾಬ್ದಾರಿ ಅಧಿಕಾರಿಗಳ ಮೇಲೆ ಇದೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಡಿಜಿಟಲ್ ಮಾಧ್ಯಮ ಮೂಲಕ ಮಾಹಿತಿಯನ್ನು ರೈತರಿಗೆ ತಲುಪಿಸಿದಲ್ಲಿ ಕೃಷಿಯಲ್ಲಿ ಕ್ರಾಂತಿಕಾರಕ ಬದಲಾವಣೆಗಳನ್ನು ತರಲು ಸಾಧ್ಯವಿದೆ ಎಂದರು.
ಸಂಪನ್ಮೂಲ ವ್ಯಕ್ತಿಗಳಾಗಿ ಬೆಂಗಳೂರಿನಿಂದ ಆಗಮಿಸಿದ ಸೃಷ್ಟಿ ಮೀಡಿಯಾ ಸಂಸ್ಥಾಪಕ ಡಾ. ಬಿ ಎನ್ ಅಂಬರೀಶ್ ಮಾತನಾಡಿ, ಕೃಷಿ ಇಲಾಖೆಯ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ರೈತರಿಗೆ ತಲುಪಿಸಲು ಕೃಷಿ ಇಲಾಖೆ ಸನ್ನದ್ದವಾಗುತ್ತಿದೆ.
ಕೃಷಿ ವಿಸ್ತರಣೆ ಕ್ಷೇತ್ರಕ್ಕೆ ವರದಾನವಾಗಿರುವ ಡಿಜಿಟಲ್ ಮಾಧ್ಯಮದ ಬಳಕೆಯನ್ನು ಪ್ರೋತ್ಸಾಹಿಸಲು ಇಲಾಖೆ ಸಿಬ್ಬಂದಿಗೆ 5 ದಿನಗಳ ಕೌಶಲ್ಯ ತರಬೇತಿ ಕಾರ್ಯಕ್ರಮವನ್ನು ವಿಜಯಪುರ ಕೃಷಿ ತರಬೇತಿ ಸಂಸ್ಥೆಯಲ್ಲಿ ಹಮ್ಮಿಕೊಂಡಿತ್ತು. ಡಿಜಿಟಲ್ ಮಾಧ್ಯಮವು ಕೃಷಿ ವಿಸ್ತರಣೆಯಲ್ಲಿ ಮಹತ್ವದ ಪರಿವರ್ತನಾ ಪಾತ್ರ ವಹಿಸಿದೆ. ಮೊಬೈಲ್ ಆಪ್‌ಗಳು, ಸಾಮಾಜಿಕ ಜಾಲತಾಣಗಳು, ಯೂಟ್ಯೂಬ್ ಮತ್ತು ಸಂದೇಶ ಸೇವೆಗಳ ಮೂಲಕ ರೈತರಿಗೆ ಬೆಳೆ ನಿರ್ವಹಣೆ, ಹವಾಮಾನ ಮುನ್ಸೂಚನೆ, ಮಾರುಕಟ್ಟೆ ಬೆಲೆ, ಕೀಟರೋಗ ನಿಯಂತ್ರಣ ಹಾಗೂ ಹೊಸ ತಂತ್ರಜ್ಞಾನಗಳ ಮಾಹಿತಿ ತ್ವರಿತವಾಗಿ ಲಭ್ಯವಾಗುತ್ತದೆ. ರೈತರು ತಮ್ಮ ಸಮಸ್ಯೆಗಳನ್ನು ಫೋಟೋ ಅಥವಾ ವೀಡಿಯೊ ಮೂಲಕ ಹಂಚಿಕೊಂಡು ತಜ್ಞರಿಂದ ತಕ್ಷಣದ ಮಾರ್ಗದರ್ಶನ ಪಡೆಯುವ ದ್ವಿಮಾರ್ಗ ಸಂವಹನವೂ ಸಾಧ್ಯವಾಗಿದೆ. ಇದರಿಂದ ಜ್ಞಾನ ಅಂತರ ಕಡಿಮೆಯಾಗಿ, ಆಧುನಿಕ ಕೃಷಿ ಪದ್ಧತಿಗಳ ಅಳವಡಿಕೆ ಹೆಚ್ಚಿ, ವಿಜ್ಞಾನಿಗಳು–ವಿಸ್ತರಣಾಧಿಕಾರಿಗಳು–ರೈತರ ನಡುವಿನ ಸಂಪರ್ಕ ಬಲವಾಗುತ್ತಿದ್ದು, ಉತ್ಪಾದಕತೆ ಮತ್ತು ಜೀವನಮಟ್ಟ ಸುಧಾರಣೆಗೆ ಸಹಕಾರಿಯಾಗುತ್ತಿದೆ ಎಂದರು.
ಉಪ ಕೃಷಿ ನಿರ್ದೇಶಕ ಡಾ. ಎಸ್. ಜಿ. ರಾಧಾಕೃಷ್ಣ ಮಾತನಾಡಿ, ರೈತರ ತರಬೇತಿ ಕೇಂದ್ರದಲ್ಲಿ ವಿಡಿಯೋ ಸಂಪನ್ಮೂಲ ವ್ಯಕ್ತಿ ಎಂಬ ವಿನೂತನ ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿದ್ದು, ಇದರ ಅಡಿಯಲ್ಲಿ ವಿವಿಧ ಜಿಲ್ಲೆಗಳಿಂದ ಆಗಮಿಸಿದ ಅಧಿಕಾರಿಗಳಿಗೆ ವಿಡಿಯೋ ನಿರ್ಮಾಣ ಹೇಗೆ ಮಾಡಬೇಕೆಂಬ ತರಬೇತಿ ನೀಡಿದ್ದು, ರೈತರು ಇದನ್ನು ಹೇಗೆ ಅಳವಡಿಸಬೇಕೆಂಬುದನ್ನು ಸಂಪನ್ಮೂಲ ವ್ಯಕ್ತಿಗಳು ಕಲಿಸಿಕೊಡುತ್ತಾರೆ ಎಂದರು. ಸಹಾಯಕ ಕೃಷಿ ನಿರ್ದೇಶಕ ಡಾಕ್ಟರ್ ಎಚ್. ವೈ. ಸಿಂಗೇಗೋಳ ಮಾತನಾಡಿ, ತರಬೇತಿ ಸಮಯದಲ್ಲಿ ಅನೇಕ ವಿಷಯಗಳನ್ನು ಪ್ರಾಯೋಗಿಕವಾಗಿ ತಿಳಿಸಿಕೊಟ್ಟಿದ್ದು, ಇದರ ಸದುಪಯೋಗವನ್ನು ಅಧಿಕಾರಿಗಳು ಪಡೆದುಕೊಳ್ಳಬೇಕೆಂದರು.
ಉಪ ಕೃಷಿ ನಿರ್ದೇಶಕ ಡಾ. ಶರಣಗೌಡ ರಂಗನಗೌಡ, ಸಹಾಯಕ ಕೃಷಿ ನಿರ್ದೇಶಕಿ ವಿಜಯಲಕ್ಷ್ಮಿ ಚೌಹಾಣ್, ಫಾತಿಮಾ ಸುತಾರ್, ಪಾರ್ವತಿ ಪಾಟೀಲ್, ಡಾ. ಕುಮುದಾ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಆಗಮಿಸಿದ ಕೃಷಿ ಅಧಿಕಾರಿಗಳು ಉಪಸ್ಥಿತರಿದ್ದರು.
ಕೃಷಿಯಲ್ಲಿ ಸಂವಹನ ಕಲೆ ಕ್ರಾಂತಿಯಾಗಲಿ


