ಸಪ್ತಸಾಗರ ವಾರ್ತೆ ವಿಜಯಪುರ, ಮೇ. 21:
ಭಯೋತ್ಪಾದನೆಯು ಇಡೀ ಮಾನವಕುಲಕ್ಕೆ ದೊಡ್ಡ ಶಾಪವಾಗಿದ್ದು, ಜನರಲ್ಲಿ ಶಾಂತಿ, ಏಕತೆ, ಸಾಮರಸ್ಯ, ಮಾನವೀಯತೆಯನ್ನು ಜೀವಂತವಾಗಿಟ್ಟಾಗ ಭಯೋತ್ಪಾದನೆಯನ್ನು ನಿಗ್ರಹಿಸಲು ಸಾಧ್ಯ ಎಂದು ಶಿಕ್ಷಕ ಸಾಹಿತಿ ಸಂತೋಷ ಬಂಡೆ ಹೇಳಿದರು.
ಗುರುವಾರ ತಾಲೂಕಿನ ನಾಗಠಾಣ ಗ್ರಾಮದ ಶ್ರೀ ಮಲ್ಲಿಕಾರ್ಜುನ ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆಯಲ್ಲಿ ಹಮ್ಮಿಕೊಂಡ ರಾಷ್ಟ್ರೀಯ ಭಯೋತ್ಪಾದನಾ ವಿರೋಧಿ ದಿನದ ಕಾರ್ಯಕ್ರಮದಲ್ಲಿ ‘ಭಯೋತ್ಪಾದನೆ- ಮಾನವೀಯತೆಗೆ ಮಾರಕ’ ಕುರಿತು ಅವರು ಮಾತನಾಡಿದರು.
ಯುವ ಜನತೆಗೆ ದೇಶಭಕ್ತಿ, ಸತ್ಯ, ಅಹಿಂಸೆಯ ಮೌಲ್ಯ ತಿಳಿಸಿಕೊಟ್ಟು, ಅವರು ತಪ್ಪು ದಾರಿಗೆ ಹೋಗದಂತೆ ಎಚ್ಚರ ವಹಿಸಬೇಕಾಗಿದ್ದು ಎಲ್ಲರ ಕರ್ತವ್ಯ. ಎಲ್ಲ ಧರ್ಮ ಮತ್ತು ಸಂಸ್ಕೃತಿಯ ಜನರನ್ನು ಗೌರವಿಸಿ. ಸಮಾಜದಲ್ಲಿ ಶಾಂತಿ-ಸೌಹಾರ್ದತೆ ಕಾಪಾಡಬೇಕು ಎಂದು ಹೇಳಿದರು.
ಶಿಕ್ಷಕ ಸಿದ್ದು ರತ್ನಾಕರ ಮಾತನಾಡಿ, ಜಾಗತಿಕ ಶಾಂತಿ, ಸುರಕ್ಷತೆಗೆ ಭಯೋತ್ಪಾದನೆ ನಿರ್ಮೂಲನೆ ಅತ್ಯಗತ್ಯ. ಭಯೋತ್ಪಾದನೆ ಮುಕ್ತ ಸಮಾಜ ನಿರ್ಮಾಣಕ್ಕಾಗಿ ಪ್ರತಿಯೊಬ್ಬರು ಕಾಳಜಿ ವಹಿಸಬೇಕು ಎಂದು ಹೇಳಿದರು.
ಸಂಸ್ಥೆಯ ಅಧ್ಯಕ್ಷ ಶಂಕರ ಹುಣಶ್ಯಾಳ ಅಧ್ಯಕ್ಷತೆ ವಹಿಸಿ ಮಾತನಾಡಿ, ಭಯೋತ್ಪಾದನೆಯು ಮಾನವೀಯತೆ ಮತ್ತು ವಿಶ್ವ ಶಾಂತಿಗೆ ಬೆದರಿಕೆಯಾಗಿದ್ದು, ದೇಶದ ರಕ್ಷಣೆ ಮತ್ತು ಶಾಂತಿ ಕಾಪಾಡುವ ನಿಟ್ಟಿನಲ್ಲಿ ಪ್ರತಿಯೊಬ್ಬ ಪ್ರಜೆಯ ಜಾಗರೂಕತೆಯೇ ಅತ್ಯಂತ ಬಲವಾದ ಅಸ್ತ್ರವಾಗಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಭಯೋತ್ಪಾದನೆ ವಿರೋಧಿ ದಿನದ ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ಕಾರ್ಯದರ್ಶಿ ಸುನಂದಾ ಹುಣಶ್ಯಾಳ, ಶಿಕ್ಷಕರಾದ ರೇಣುಕಾ ಭಜಂತ್ರಿ, ವೀರೇಶ ಹುಣಶ್ಯಾಳ ಹಾಗೂ ಪಾಲಕರು, ಮಕ್ಕಳು ಭಾಗವಹಿಸಿದ್ದರು.
ಭಯೋತ್ಪಾದನೆ ಮುಕ್ತ ಸಮಾಜ ನಿರ್ಮಾಣಕ್ಕಾಗಿ ಎಲ್ಲರೂ ಕೈಜೋಡಿಸಿ-ಸಂತೋಷ ಬಂಡೆ


