ಪ್ಲಾಸ್ಟಿಕ್ ಮಾಲಿನ್ಯವನ್ನು ಮುಕ್ತಗೊಳಿಸೋಣ: ಸಿ.ಎಂ. ಮಾಲಿಪಾಟೀಲ ಅಭಿಮತ

ಸಪ್ತಸಾಗರ ವಾರ್ತೆ,ವಿಜಯಪುರ,ಸೆ. 11: ನಮ್ಮ ಸುತ್ತಮುತ್ತಲಿನ ಭೂಮಿ ಹಾಗೂ ನೖಸರ್ಗಿಕ ಸಂಪನ್ಮೂಲಗಳನ್ನು ರಕ್ಷಣೆ ಮಾಡಿ ಮುಂದಿನ ಪೀಳಿಗೆಯಲ್ಲಿ ಪರಿಸರದ ಕುರಿತು ಜಾಗೃತಿ ಮೂಡಿಸುವ ಕಾರ್ಯವಾಗಬೇಕಾಗಿದೆ. ೨೦೨೫ರ ಪರಿಸರ ದಿನಾಚರಣೆಯ ಉದ್ದೇಶದಂತೆ ಪ್ಲಾಸ್ಟಿಕ್ ಮಾಲಿನ್ಯವನ್ನು ಮುಕ್ತಗೊಳಿಸುವುದಾಗಿದ್ದು, ಅದರಂತೆ ನಾವು ನೀವೆಲ್ಲರೂ ಮಾದರಿಯಾಗಿ ನಡೆದುಕೊಳ್ಳೋಣ ಎಂದು ಖ್ಯಾತ ಉದ್ದಿಮೆದಾರರೂ, ಸಮಾಜ ಸೇವಕರಾದ ಸಿ.ಎಂ. ಮಾಲಿಪಾಟೀಲ ಅಭಿಪ್ರಾಯಪಟ್ಟರು.
ವಿಜಯಪುರ ನಗರದ ಅಥಣಿ ರಸ್ತೆಯಲ್ಲಿರುವ ಪರಿಸರ ಜಾಗೃತಿ ವೇದಿಕೆಯ ಸಭಾಂಗಣದಲ್ಲಿ ಪರಿಸರ ಜಾಗೃತಿ ವೇದಿಕೆಯ ೧೭ನೇ ವರ್ಷದ ವರ್ಷಾಚರಣೆಯನ್ನು ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ನಿವೃತ್ತ ಬ್ಯಾಂಕ್ ಅಧಿಕಾರಿ ಜಗದೀಶ ಗಲಗಲಿ ಅವರು, ಮಾನವನಿಗೆ ಪರಿಸರವು ಅತ್ಯಮೂಲ್ಯ ಕೊಡುಗೆ ನೀಡಿದ್ದು, ಎಲ್ಲವನ್ನು ಗೌರವಿಸಲು ಮತ್ತು ಕೃತಜ್ಞರಾಗಿರಲು ಮತ್ತು ಅದನ್ನು ರಕ್ಷಿಸುವ ಪ್ರತಿಜ್ಞೆಯನ್ನು ತಗೆದುಕೊಳ್ಳೋಣ ಎಂದರು.
ಪರಿಸರ ಜಾಗೃತಿಯ ಕುರಿತು ವಿಶೇಷ ಉಪನ್ಯಾಸ ನೀಡಿದ ಖ್ಯಾತ ಇತಿಹಾಸ ಸಂಶೋಧಕ ಡಾ. ಆನಂದ ಕುಲಕರ್ಣಿ ಮಾತನಾಡಿ, ಹೆಚ್ಚು ಹೆಚ್ಚು ಗಿಡಮರಗಳನ್ನು ನೆಡುವುದು, ನೀರನ್ನು ಉಳಿಸುವುದು, ಮರುಬಳಕೆ ಮಾಡುವುದು, ವನ್ಯಜೀವಿಗಳು ಮತ್ತು ಪ್ರಾಣಿಗಳನ್ನು ಉಳಿಸುವುದು ಇವು ಪರಿಸರಕ್ಕೆ ಕಾರಣವಾದ ಅಂಶಗಳು. ಇಂತಹ ಆಲೋಚನೆ ನಮ್ಮ ಮುಂದಿನ ಪೀಳಿಗೆಗೆ ಬಿಟ್ಪು ಹೋಗುವ ಸಂಕಲ್ಪ ಮಾಡೋಣ. ವಿಜಯಪುರದ ಐತಿಹಾಸಿಕ ಹಿನ್ನೆಲೆಯನ್ನು ಹೊಂದಿದ ಕೆರೆ-ಭಾವಿಗಳ, ಸ್ಮಾರಕಗಳ ಸಂರಕ್ಷಣೆಯ ಜೊತೆಗೆ ಪರಿಸರ ಪ್ರೇಮವನ್ನು ಮೆರೆದು ಮಾದರಿಯಾಗೋಣ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಎಕ್ಸಲೆಂಟ್ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಶರಣಗೌಡ ಪಾಟೀಲ ಮಾತನಾಡಿ, ಪರಿಸರ ಜಾಗೃತಿಯಲ್ಲಿ ಯುವಕರು ವಹಿಸಬೇಕಾದ ಪಾತ್ರ ಕುರಿತು ತಿಳಿಸಿದರು.
ಅಭಿಯಂತರ ಉಮಾಶಂಕರ ಪತ್ತಾರ ಅವರನ್ನು ವೇದಿಕೆಯಲ್ಲಿ ವಿಶೇಷವಾಗಿ ಗೌರವಿಸಿ ಸನ್ಮಾನಿಸಲಾಯಿತು.
ಪ್ರೊ.ಮಹಾದೇವ ರೆಬಿನಾಳ ಸ್ವಾಗತಿಸಿದರು. ಪರಿಸರ ಜಾಗೃತಿ ವೇದಿಕೆಯ ಸಂಚಾಲಕ ಅಂಬಾದಾಸ ಜೋಶಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಮಾಧವ ಗುಡಿ ನಿರೂಪಿಸಿದರು. ಸುಭಾಸ ಕನ್ನೂರ ವಂದಿಸಿದರು.
ಕಾರ್ಯಕ್ರಮದಲ್ಲಿ ಜಿ. ಬಿ. ದಿಡ್ಡಿಮನಿ, ಸಿ. ವಿ. ಹಿರೇಮಠ, ಸುರೇಶ ಖೋತ, ಗುಂಡಪ್ಪಗೌಡ ಕುಂಬಾರ ಹಾಗೂ ಪರಿಸರ ಜಾಗೃತಿ ವೇದಿಕೆಯ ಅನೇಕ ಪದಾಧಿಕಾರಿಗಳು ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

Share