ಕ್ರೀಡಾ ಸ್ಫೂರ್ತಿ ಮೆರೆಯೋಣ : ಮಹೇಶ ಪೋತದಾರ

ಸಪ್ತಸಾಗರ ವಾರ್ತೆ,ವಿಜಯಪುರ, ಮಾ.29 :
ಜೀವನದಲ್ಲಿ ಸೋಲು ಗೆಲುವು ಹೇಗೆ ನಡೆಯುತ್ತಿದೆಯೂ ಹಾಗೆ ಕ್ರೀಡಾ ಕ್ಷೇತ್ರದಲ್ಲಿಯೂ ಸೋಲು ಗೆಲುವು ನಡೆಯುತ್ತಿರುತ್ತದೆ. ಸೋಲು ಗೆಲುವಿನ ನಡುವೆ ಕ್ರೀಡಾ ಸ್ಫೂರ್ತಿ ಮೆರೆಯೋಣ ಎಂದು ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಮಹೇಶ ಪೋತದಾರ ಹೇಳಿದರು.
ನಗರದ ಜಲನಗರ ಮೈದಾನದಲ್ಲಿ ದಲಿತ ವಿದ್ಯಾರ್ಥಿ ಪರಿಷತ್ ಹಾಗೂ ಜಿಲ್ಲೆಯ ವಿವಿಧ ಪ್ರಗತಿಪರ ಸಂಘ ಸಂಸ್ಥೆಗಳು ಆಯೋಜನೆ ಮಾಡಿರುವ “ಅಂಬೇಡ್ಕರ್ ಹಬ್ಬ” ಪ್ರಯುಕ್ತ ವಸತಿ ನಿಲಯದ ವಿದ್ಯಾರ್ಥಿಗಳಿಗೆ ಆಯೋಜಿಸಲಾದ ಮಹಾನಾಯಕ ಕ್ರಿಕೆಟ್ ಟೂರ್ನಮೆಂಟ್ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ದಲಿತ ವಿದ್ಯಾರ್ಥಿ ಪರಿಷತ್ ನಾಡಿನಲ್ಲಿ ವಿದ್ಯಾರ್ಥಿಗಳ ಪರ ಧ್ವನಿಯಾಗಿ ಸಾಗುತ್ತಿದೆ ಮತ್ತು ಬಹಳ ವಿಭಿನ್ನವಾಗಿ ಸಮುದಾಯಗಳಿಗೆ ಕಾರ್ಯಕ್ರಮಗಳನ್ನು ಆಯೋಜನೆ ಮಾಡುತ್ತ ಬರುತ್ತಿರುವುದು ಸ್ವಾಗತಾರ್ಹ. ಈಗ ನಾಲ್ಕು ದಿನಗಳ ಅಂಬೇಡ್ಕರ್ ಹಬ್ಬದ ಪ್ರಯುಕ್ತ ವಿದ್ಯಾರ್ಥಿಗಳಿಗೆ ವಿಭಿನ್ನ ಕಾರ್ಯಕ್ರಮಗಳನ್ನು ಆಯೋಜನೆ ಮಾಡುತ್ತಿರುವುದು ಖುಷಿ ನೀಡಿದೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸಮಾಜ ಕಲ್ಯಾಣ ಇಲಾಖೆ ತಾಲ್ಲೂಕ ಸಹಾಯಕ ನಿರ್ದೇಶಕ ಬಿ. ಜೆ. ಇಂಡಿ ಅವರು ಮಾತನಾಡಿ, ಅಂಬೇಡ್ಕರ್ ಹಬ್ಬ ಪ್ರಯುಕ್ತ ದಲಿತ ವಿದ್ಯಾರ್ಥಿ ಪರಿಷತ್ ಸಂಘಟನೆಯು ಪ್ರತಿ ವರ್ಷ ವಸತಿ ನಿಲಯದ ವಿದ್ಯಾರ್ಥಿಗಳಿಗೆ ಮಹಾನಾಯಕ ಕ್ರಿಕೆಟ್ ಟೂರ್ನಾಮೆಂಟ್ ಆಯೋಜನೆ ಮಾಡುವ ಮೂಲಕ ವಿದ್ಯಾರ್ಥಿಗಳಲ್ಲಿ ಕ್ರೀಡಾ ಸ್ಫೂರ್ತಿ ತುಂಬುವ ಕೆಲಸ ಮಾಡುತ್ತಿರುವುದು ಶ್ಲಾಘನೀಯವಾಗಿದೆ ಎಂದರು.
ಈ ವೇಳೆ ದಲಿತ ವಿದ್ಯಾರ್ಥಿ ಪರಿಷತ್ತಿನ ಜಿಲ್ಲಾ ಸಹ ಸಂಚಾಲಕ ಮಹಾದೇವ ಚಲವಾದಿ, ನಗರ ಘಟಕದ ಸಂಚಾಲಕ ಹುಚ್ಚಪ್ಪ ಬಾವಿಮನಿ, ಮುಖಂಡರಾದ ಶಂಕರ ಬಸರಗಿ, ಯುವರಾಜ್ ಓಲೆಕಾರ್, ಸಂದೇಶ ಕುಮಟಗಿ, ಆಕಾಶ ಮಾದರ, ಆದಿತ್ಯ ಅಲ್ಲದೇ ವಿವಿಧ ವಸತಿ ನಿಲಯದಿಂದ ಬಂದಿದೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Share this