ಜಿಲ್ಲಾ ಕಸಾಪದಲ್ಲಿ ಪರಿಸರ ಸ್ನೇಹಿ ಗಣೇಶೋತ್ಸವ ಹಾಗೂ ಸಾಮರಸ್ಯ ಕುರಿತು ಚಿಂತನಾಗೋಷ್ಠಿ
ಸಪ್ತಸಾಗರ ವಾರ್ತೆ,ವಿಜಯಪುರ, ಸೆ. 13:
ಭಾರತವು ಹಲವು ಧರ್ಮ, ಜಾತಿ ಹಾಗೂ ಸಂಸ್ಕೃತಿಗಳ ವೈವಿಧ್ಯತೆಯನ್ನು ಹೊಂದಿರುವ ದೇಶವಾಗಿದ್ದು, ‘ವಿವಿಧತೆಯಲ್ಲಿ ಏಕತೆ’ ಎಂಬುದು ನಮ್ಮ ಹೆಗ್ಗುರುತಾಗಿದೆ. ಜಾತಿ, ಧರ್ಮದ ಭೇದ ಮರೆತು ಎಲ್ಲರೂ ಸೌಹಾರ್ದತೆ ಹಾಗೂ ಸಹಬಾಳ್ವೆಯಿಂದ ಬದುಕುವುದು ಇಂದಿನ ಅಗತ್ಯವಾಗಿದೆ. ಇದರೊಂದಿಗೆ ಪರಿಸರ ಸಂರಕ್ಷಣೆಯ ಜವಾಬ್ದಾರಿಯನ್ನೂ ಪ್ರತಿಯೊಬ್ಬರೂ ಅರಿತುಕೊಳ್ಳಬೇಕು ಎಂದು ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಹಾಗೂ ನಗರಸಭೆಯ ಮಾಜಿ ಅಧ್ಯಕ್ಷ ಪರಶುರಾಮ ರಜಪೂತ ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಭಾನುವಾರ ಜಿಲ್ಲಾ, ತಾಲೂಕು ಹಾಗೂ ನಗರ ಘಟಕಗಳ ಸಹಯೋಗದಲ್ಲಿ ಆಯೋಜಿಸಿದ್ದ ವಿವಿಧ ದತ್ತಿ ಉಪನ್ಯಾಸ ಹಾಗೂ ಚಿಂತನಾಗೋಷ್ಠಿಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಪರಿಸರ ಸ್ನೇಹಿ ಮಣ್ಣಿನ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸುವ ಮೂಲಕ ಹಬ್ಬದ ಸಂಭ್ರಮದ ಜತೆಗೆ ಜಲಮೂಲಗಳು ಹಾಗೂ ಪರಿಸರವನ್ನು ಸಂರಕ್ಷಿಸುವ ಕಾರ್ಯಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಅವರು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಂಗ್ರೆಸ್ ಮುಖಂಡೆ ಶ್ರೀದೇವಿ ಉತ್ಲಾಸರ ಮಾತನಾಡಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಯಾವುದೇ ಜಾತಿ, ಧರ್ಮಕ್ಕೆ ಸೀಮಿತವಾಗದೆ ಎಲ್ಲರನ್ನೂ ಒಳಗೊಂಡ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತಿದೆ. ಹೊಸ ಪ್ರತಿಭೆಗಳು, ಯುವ ಲೇಖಕರು, ಕವಿಗಳು ಹಾಗೂ ಕವಯಿತ್ರಿಯರಿಗೆ ಅವಕಾಶ ಕಲ್ಪಿಸುವ ಮೂಲಕ ಜಿಲ್ಲೆಯಲ್ಲಿ ನಿರಂತರವಾಗಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸುತ್ತಿರುವುದು ಹೆಮ್ಮೆಯ ಸಂಗತಿ ಎಂದರು.
ಸಾಮರಸ್ಯವೇ ರಾಷ್ಟ್ರ ಪ್ರಗತಿಯ ಆಧಾರ
‘ಸಾಮರಸ್ಯ ಹಾಗೂ ಸೌಹಾರ್ದತೆಯ ಮಹತ್ವ’ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದ ವೈದ್ಯ ಹಾಗೂ ಸಾಹಿತಿ ಡಾ. ಅಮೀರುದ್ದೀನ ಖಾಜಿ, ಸಮಾಜದಲ್ಲಿ ಪರಸ್ಪರ ನಂಬಿಕೆ, ಪ್ರೀತಿ ಹಾಗೂ ಸಹೋದರತ್ವದ ಭಾವನೆ ಹೆಚ್ಚಬೇಕು. ಜನರು ಒಗ್ಗಟ್ಟಿನಿಂದ ಕಾರ್ಯ ನಿರ್ವಹಿಸಿದಾಗ ಮಾತ್ರ ರಾಷ್ಟ್ರದ ಸಮಗ್ರ ಪ್ರಗತಿ ಸಾಧ್ಯ. ಸಾಮರಸ್ಯ ಮತ್ತು ಸೌಹಾರ್ದತೆಯು ವೈಯಕ್ತಿಕ ಜೀವನದಿಂದ ಹಿಡಿದು ಸಾಮಾಜಿಕ ಹಾಗೂ ರಾಷ್ಟ್ರೀಯ ಮಟ್ಟದವರೆಗೆ ಮಹತ್ವದ ಪಾತ್ರ ವಹಿಸುತ್ತದೆ ಎಂದು ಹೇಳಿದರು.
ಮಣ್ಣಿನ ಗಣೇಶ ಪ್ರತಿಷ್ಠಾಪನೆಗೆ ಒತ್ತು
‘ಪರಿಸರ ಸಂರಕ್ಷಣೆಯ ಮಹತ್ವ’ ಕುರಿತು ಮಾತನಾಡಿದ ವಿಜಯಪುರ ತಾಲೂಕು ಕಸಾಪ ಅಧ್ಯಕ್ಷ ಹಾಗೂ ಇತಿಹಾಸ ಸಂಶೋಧಕ ಡಾ. ಆನಂದ ಕುಲಕರ್ಣಿ, ಶುದ್ಧ ಮಣ್ಣು ಮತ್ತು ನೈಸರ್ಗಿಕ ವಸ್ತುಗಳಿಂದ ತಯಾರಿಸಿದ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸುವುದು ಪರಿಸರ ಸ್ನೇಹಿ ಆಚರಣೆಯಾಗಿದೆ. ರಾಸಾಯನಿಕ ಬಣ್ಣ ಹಾಗೂ ಹಾನಿಕಾರಕ ವಸ್ತುಗಳಿಂದ ತಯಾರಿಸಿದ ಮೂರ್ತಿಗಳಿಂದ ಜಲಮೂಲಗಳಿಗೆ ಆಗುವ ಹಾನಿಯನ್ನು ತಡೆಯಲು ಪರಿಸರ ಸ್ನೇಹಿ ಗಣೇಶೋತ್ಸವಕ್ಕೆ ಆದ್ಯತೆ ನೀಡಬೇಕು ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕೆ.ಎಸ್. ಹಣಮಾಣಿ, ವಿಜಯಲಕ್ಷ್ಮೀ ಹಳಕಟ್ಟಿ ಹಾಗೂ ಅರ್ಜುನ ಶಿರೂರ ಉಪಸ್ಥಿತರಿದ್ದು ಮಾತನಾಡಿದರು.
ಸರ್ವಜ್ಞ ಗುರ್ಜಾಲಗೆ ಸನ್ಮಾನ
ಇದೇ ಸಂದರ್ಭದಲ್ಲಿ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ಜಿಲ್ಲೆಗೆ ದ್ವಿತೀಯ ಸ್ಥಾನ ಪಡೆದ ಕುಮಾರ ಸರ್ವಜ್ಞ ಗುರ್ಜಾಲ ಅವರನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ವಿಶೇಷವಾಗಿ ಸನ್ಮಾನಿಸಲಾಯಿತು.
ಮೆಹತಾಬ ಕಾಗವಾಡ ಪ್ರಾರ್ಥಿಸಿದರು. ರಿಯಾಜ ಪಿಂಜಾರ ಸ್ವಾಗತಿಸಿದರು. ಡಾ. ಮಾಧವ ಗುಡಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಯಮನಪ್ಪ ಪವಾರ ನಿರೂಪಿಸಿದರು. ಹಾಸಿಂಪೀರ ವಾಲಿಕಾರ ವಂದಿಸಿದರು.
ಕಾರ್ಯಕ್ರಮದಲ್ಲಿ ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ, ಅಲ್ಲಮಪ್ರಭು ಮಲ್ಲಿಕಾರ್ಜುನಮಠ, ಶ್ರೀಕಾಂತ ನಾಡಗೌಡ, ಸಿದ್ದಣ್ಣ ಸಾತಲಗಾಂವ, ಮಿಲನ ಹೊಸಕೋಟಿ, ಶಾಂತಾ ವಿಭೂತಿ, ಲತಾ ಗುಂಡಿ, ಯುವರಾಜ ಚೋಳಕೆ, ಬಸವರಾಜ ಹಿರೇಮಠ, ಸಾಕ್ಷಿ ಗುರ್ಜಾಲ, ಪ್ರದೀಪ ನಾಯ್ಕೋಡಿ, ಪದ್ಮಾವತಿ ಉತ್ಲಾಸರ, ಕೀರ್ತಿ ಭಜಂತ್ರಿ, ಆರ್.ಜಿ. ಬ್ಯಾಕೋಡ, ಸಿದ್ರಾಮಪ್ಪ ಜಂಗಮಶೆಟ್ಟಿ, ಶಿವಾಜಿ ಮೋರೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.


