ನಿಸ್ವಾರ್ಥದಿಂದ ಬದುಕಿ ಬೇರೊಬ್ಬರಿಗೆ ಬೆಳಕಾಗಿ: ಎನ್.ಎಂ. ಬಿರಾದಾರ

ಸಪ್ತಸಾಗರ ವಾರ್ತೆ, ವಿಜಯಪುರ, ಜೂ. 2:
ಐಸ್‌ಕ್ರೀಮ್ ಹಾಗೂ ಮೇಣದ ಬತ್ತಿಗೆ ಕರಗುವ ಗುಣವಿದೆ. ಆದರೆ
ಕರಗುವಿಕೆಯ ಹಿಂದಿರುವ ಉದ್ಧೇಶ ವಿಭಿನ್ನವಾಗಿರುತ್ತದೆ. ಐಸ್‌ಕ್ರೀಮ್
ಸಮಯ ಇರುವ ಮೊದಲೆ ನನ್ನನ್ನು ತಿಂದು ತೃಪ್ತನಾಗು ಎಂದು
ಹೇಳಿದರೆ ಮೇಣದ ಬತ್ತಿ ನಾನು ಕರಗುವ ಮೊದಲೇ ಈ ಜಗತ್ತಿಗೆ ಒಂದಷ್ಟು
ಬೆಳಕನ್ನು ಕೊಡುತ್ತೇನೆ ಎನ್ನುವ ಸಾರ್ಥಕತೆ ತೋರುತ್ತದೆ. ನಮ್ಮ
ಬದುಕು ಸಹ ಮೇಣದ ಬತ್ತಿಯಂತೆ ಬೇರೊಬ್ಬರಿಗೆ ಬೆಳಕು
ನೀಡುವಂತಾಗಬೇಕು. ಎಂದು ಚಾಣಕ್ಯ ಕರಿಯರ್ ಅಕಾಡೆಮಿಯ ಸಂಸ್ಥಾಪಕ ಎನ್.ಎಂ. ಬಿರಾದಾರ ಹೇಳಿದರು.
ಎಕ್ಸಲಂಟ್ ವಿಜ್ಞಾನ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ
ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಹಾಗೂ 2026-27ನೇ ಸಾಲಿನ ಶೈಕ್ಷಣಿಕ
ಚಟುವಟಿಕೆಗಳ ಪ್ರಾರಂಭೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯೆ
ಎನ್ನುವುದು ತಪ್ಪಸ್ಸಿದ್ದಂತೆ. ಸಂತ ಮಹಾಂತ ಋಷಿಮುನಿಗಳು
ಏಕಾಗ್ರತೆಯಿಂದ ತಪಸ್ಸು ಮಾಡಿ ಆತ್ಮ ಸಾಕ್ಷಾತ್ಕಾರ ಮಾಡಿಕೊಂಡಂತೆ
ವಿದ್ಯಾರ್ಥಿಗಳು ಸಹ ವಿದ್ಯೆ ಎನ್ನುವ ತಪಸ್ಸನ್ನು ಏಕಾಗ್ರತೆಯಿಂದ ಮಾಡಿದಲ್ಲಿ
ಸಾಧನೆ ಎನ್ನುವ ಸಾಕ್ಷತ್ಕಾರವನ್ನು ಹೊಂದಬಹುದು. ಕತ್ತೆ
ಕುದುರೆಯಾದರೆ ಸರಿ. ಆದರೆ ಕುದುರೆ ಎಂದಿಗೂ ಕತ್ತೆಯಾಗಬಾರದು.
ಹಾಗೆಯೇ ನೀವುಗಳು ಸಹ ಸಾಧನೆಯ ಹಾದಿಯಲ್ಲಿ ಹೆಜ್ಜೆ ಹಾಕಬೇಕೆ ವಿನಃ
ಏನಾದರೂ ಸಮಸ್ಯೆ ಆಯಿತು ಎಂದು ಮುಂದಿಟ್ಟ ಹೆಜ್ಜೆಯನ್ನು ಹಿಂದೆ
ಇಡಬಾರದು ಎಂದು ಹೇಳಿದರು.
ಒಳ್ಳೆಯ ಉದ್ಧೇಶವನ್ನಿಟ್ಟುಕೊಂಡವರಿಗೆ
ದೇವರು ಒಳ್ಳೆಯ ಜನರ ಬಳಿಗೆ ಕರೆದುಕೊಂಡು ಹೋಗುತ್ತಾನೆ
ಎನ್ನುವಂತೆ ಇಂದು ನೀವು ವಿಜ್ಞಾನ ವಿಭಾಗವನ್ನು ಆಯ್ಕೆ ಮಾಡಿಕೊಳ್ಳುವ
ಮೂಲಕ ಎಕ್ಸಲಂಟ್ ಎನ್ನುವ ಒಳ್ಳೆಯ ಕಾಲೇಜಿಗೆ ಬಂದಿದ್ದೀರಿ ಮುಂದೆ ನಿಮಗೆ
ಒಳ್ಳೆಯದಾಗುತ್ತದೆ ಎಂದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ವಾಗ್ಮಿ
ಅಶೋಕ ಹಂಚಲಿ, ಒಬ್ಬ ಪೇಪರ್ ಹಾಕುವ ಹುಡುಗ ಈ ದೇಶಕ್ಕೆ
ರಾಷ್ಟ್ರಪತಿಯಾಗುತ್ತಾನೆ ಎಂದ ಮೇಲೆ ನಮಗೇನಾಗಿದೆ ಎನ್ನುವ
ಪ್ರಶ್ನೆಯನ್ನು ನಾವೇ ಮಾಡಿಕೊಳ್ಳಬೇಕು. ಕಾದ ಹಂಚಿನ ಮೇಲೆ ಬಿದ್ದ
ನೀರಿನ ಹನಿಯೂ ಸಹ ಮುತ್ತಂತೆ ಭಾಸವಾಗುತ್ತದೆ. ಮುಂಜಾನೆ ಬಿದ್ದ ಮಂಜಿನ ಹನಿ ಬಿಸಿಲೇರಿದಂತೆ ಮುತ್ತಂತೆ ಹೊಳೆದು ಮಾಯವಾಗುತ್ತದೆ. ಆದರೆ ಸ್ವಾತಿ ಮಳೆಯ ಹನಿ ಕಪ್ಪೆ ಚಿಪ್ಪಿನಲ್ಲಿ ಬಿದ್ದಾಗ ಮಾತ್ರ ಅದು ಮುತ್ತಾಗಿ
ಪರಿವರ್ತನೆಯಾಗುತ್ತದೆ. ಅದು ಶಾಶ್ವತ ಮೌಲ್ಯ ಪಡೆಯುತ್ತದೆ. ಹಾಗೆಯೇ
ಈ ವಿದ್ಯಾರ್ಥಿಗಳು ಸಹ ಇಂದು ಎಕ್ಸಲಂಟ್ ಎನ್ನುವ ಕಪ್ಪೆ ಚಿಪ್ಪಿನಲ್ಲಿ ಬಿದ್ದಾಗಿದೆ. ಇನ್ನು
ಮುತ್ತಾಗುವುದು ಮಾತ್ರ ಬಾಕಿ ಇದೆ ಎಂದು ಹೇಳಿದರು.
ದಿವ್ಯ ಸಾನ್ನಿಧ್ಯವಹಿಸಿ ಮಾತಮಾಡಿದ ಬಸವನ ಬಾಗೇವಾಡಿ ಹಿರೇಮಠದ ಷ. ಭ್ರ. ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿಯವರು, ಹುಟ್ಟು ಅನಿಶ್ಚಿತ. ಸಾವು ಖಚಿತ. ಅದರ
ಮಧ್ಯದಲ್ಲಿ ಬರುವ ಸಮಯದಲ್ಲಿ ಸಾಧನೆ ಮಾಡಿ ಶಾಶ್ವತವಾಗಿ ಉಳಿಯುವುದು
ಸಾರ್ಥಕ ಬದುಕಾಗುತ್ತದೆ. ತಮ್ಮ ಹೆತ್ತವರ ಕನಸನ್ನು ಈಡೇರಿಸುವುದು
ಪ್ರತಿಯೊಬ್ಬ ಮಗನ ಕನಸಾಗಿರುತ್ತದೆ. ಆ ಕನಸನ್ನು ನನಸು ಮಾಡುವ
ಕಡೆಗೆ ಸದಾ ತುಡಿತವಿರಲಿ. ಅದರ ಜೊತೆಗೆ ಓದಿನ ಮಿಡಿತವಿರಲಿ. ಆಗ ಬದುಕು ಬಂಗಾರವಾಗುತ್ತದೆ ಎಂದು ಹೇಳಿದರು.
ಎಕ್ಸಲಂಟ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಚೇರಮನ್
ಬಸವರಾಜ ಕೌಲಗಿ, ಗೌರವ ನಿರ್ದೇಶಕ ರಾಜಶೇಖರ ಕೌಲಗಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಶಾಲಾಶಿಕ್ಷಣ ಇಲಾಖೆಯ ನೂತನ ಉಪನಿರ್ದೇಶಕರಾಗಿ ಜವಾಬ್ದಾರಿ
ವಹಿಸಿಕೊಂಡ ಕೆ. ಎ. ಉಪ್ಪಾರ, ನಿಕಟಪೂರ್ವ ಉಪ ನಿರ್ದೇಶಕ ಡಾ. ಸಿ. ಕೆ. ಹೊಸಮನಿ, ನಿವೃತ್ತ ಪ್ರಾಂಶುಪಾಲ ಬಸವರಾಜ ಉಮರ್ಜಿ ಅವರನ್ನು ಸನ್ಮಾನಿಸಲಾಯಿತು.
ಕೂಡಿಗಿ
ಸರ್ಕಾರಿ ಪ.ಪೂ ಕಾಲೇಜಿನ ಪ್ರಾಂಶುಪಾಲ ಕೆ.ಜಿ.ಲಮಾಣಿ, ಎಕ್ಸಲಂಟ್ ವಿಜ್ಞಾನ ಪದವಿ
ಪ.ಪೂ ಕಾಲೇಜಿನ ಪ್ರಾಂಶುಪಾಲ ಮಂಜುನಾಥ ಮ. ಜುನಗೊಂಡ, ಶೈಕ್ಷಣಿಕ
ಸಂಯೋಜಕ ಮಂಜುನಾಥ ತುಮ್ಮರಮಟ್ಟಿ ಸೇರಿದಂತೆ ಎಲ್ಲ ಉಪನ್ಯಾಸಕ
ವರ್ಗ ಹಾಜರಿದ್ದರು.
ಕು.ಚಿನ್ಮಯಿ ಪ್ರಾರ್ಥಿಸಿದರು. ಕನ್ನಡ ವಿಭಾಗದ ಮುಖ್ಯಸ್ಥ
ಶರಣಗೌಡ ಪಾಟೀಲ ಸ್ವಾಗತಿಸಿದರು. ಆಂಗ್ಲ ಉಪನ್ಯಾಸಕ ಮುಸ್ತಾಕ ಮಲಘಾಣ ನಿರೂಪಿಸಿದರು.

Share this