ಸಪ್ತಸಾಗರ ವಾರ್ತೆ, ವಿಜಯಪುರ, ಜು. 31:
ಕನ್ನಡ ನವೋದಯದ ಪ್ರಾರಂಭಿಕ ಕಾಲದಲ್ಲಿನ ಮಹತ್ವದ ಬರಹಗಾರರಾದ ಮಧುರಚೆನ್ನರ ಸಾಹಿತ್ಯಿಕ ಕಾರ್ಯ ಅನುಪಮವಾದುದು. ಅವರು ಶಾಸನಗಳು, ಜನಪದ ಸಾಹಿತ್ಯದ ಸಂಶೋಧನೆ ಮಾಡುತ್ತಾ, ಆಧ್ಯಾತ್ಮಿಕ ಸಾಹಿತ್ಯದಲ್ಲಿ ವಿಶೇಷ ಆಸಕ್ತಿ ಹೊಂದಿದ್ದರು ಎಂದು ಶಿಕ್ಷಕ ಸಾಹಿತಿ ಸಂತೋಷ ಬಂಡೆ ಹೇಳಿದರು.
ಗುರುವಾರ ತಾಲೂಕಿನ ನಾಗಠಾಣ ಗ್ರಾಮದ ಅರಿವು ಕೇಂದ್ರದಲ್ಲಿ ಹಮ್ಮಿಕೊಂಡ ಮಧುರಚೆನ್ನರ 122 ನೇ ಜನ್ಮ ದಿನಾಚರಣೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಗ್ರಾಮೀಣ ಪ್ರದೇಶದಲ್ಲಿದ್ದು ಮಧುರಚೆನ್ನರು ಕಾವ್ಯ, ಆತ್ಮಕಥನ, ಸಂಶೋಧನೆ, ಜನಪದ ಸಾಹಿತ್ಯದಂತಹ ಪ್ರಕಾರಗಳಲ್ಲಿ ಮಾಡಿದ ಸಾಧನೆ ಸ್ಮರಣೀಯವಾದುದು.
ಆತ್ಮಕಥೆಗೆ ಕಾದಂಬರಿ ರೂಪ ಕೊಟ್ಟ ಶ್ರೇಯಸ್ಸು ಅವರದು. ಶ್ರೇಷ್ಠ ಅನುಭಾವಿಯಾಗಿದ್ದ ಅವರು ಕನ್ನಡ ಸಾರಸ್ವತ ಲೋಕಕ್ಕೆ ಬಹುದೊಡ್ಡ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.
ಅತಿಥಿ ವಿಶ್ವನಾಥ ಕಲಗೊಂಡ ಮಾತನಾಡಿ,
ಮಧುರಚೆನ್ನರು ಕವಿಯಾಗಿ ಉಳಿಯದೆ, ಸಂಶೋಧಕ, ಗದ್ಯ ಲೇಖಕ, ಅನುವಾದಕರಾಗಿ ಎಲ್ಲಕ್ಕೂ ಮಿಗಿಲಾಗಿ ಜನಪದ ಸಾಹಿತ್ಯ ಸಂಗ್ರಹದ ಆದ್ಯ ಪ್ರವರ್ತಕರಲ್ಲೊಬ್ಬರಾಗಿ ಬೆಳಗಿದ್ದು ನಿಜಕ್ಕೂ ಹೆಮ್ಮೆಯ ಸಂಗತಿ ಎಂದು ಹೇಳಿದರು.
ನಿವೃತ್ತ ಶಿಕ್ಷಕ ರಾಜೇಂದ್ರ ಕಾಂಬಳೆ ಮಾತನಾಡಿ, ಶ್ರೀರಾಮಕೃಷ್ಣ, ಸ್ವಾಮಿ ವಿವೇಕಾನಂದ ಮತ್ತು ರವೀಂದ್ರರ ಕೃತಿಗಳಿಂದ ಪ್ರಭಾವಿತರಾದ ಮಧುರಚೆನ್ನರು ಮಹರ್ಷಿ ಅರವಿಂದರ ತತ್ವಗಳ ಆಕರ್ಷಣೆಗೂ ಒಳಗಾಗಿ, ಪಾಂಡಿಚೇರಿಯ ಅರವಿಂದಾಶ್ರಮದ ಭಕ್ತರಾಗಿದ್ದರು ಎಂದು ಹೇಳಿದರು.
ಗ್ರಂಥಪಾಲಕ ಮಂಜುನಾಥ ಗಂಗನಳ್ಳಿ, ವಿಶ್ವನಾಥ ಹಂಡಿ, ಸುರೇಶ ಕತ್ನಳ್ಳಿ, ಶಿವಶಂಕರ ಸಮಗೊಂಡ, ನವೀನ ಲೋಣಿ, ಜಟ್ಟಿoಗರಾಯ ಕಕ್ಕರೆಗೋಳ, ಧರೆಪ್ಪ ಶಿರಕನಳ್ಳಿ.
ಸೇರಿದಂತೆ ಅನೇಕ ಮಕ್ಕಳು ಉಪಸ್ಥಿತರಿದ್ದರು.
ಮಧುರಚೆನ್ನರ ಸಾಹಿತ್ಯಿಕ ಕಾರ್ಯ ಅನುಪಮವಾದುದು- ಸಂತೋಷ ಬಂಡೆ


