ಸಪ್ತಸಾಗರ ವಾರ್ತೆ,ಇಂಡಿ, ಜು. 31: ಹಳ್ಳಿಯೊಂದರಲ್ಲಿ ಹುಟ್ಟಿ, ಸರಳ ಬದುಕಿನಲ್ಲೇ ಕನ್ನಡ ಸಾಹಿತ್ಯಕ್ಕೆ ಅಪೂರ್ವ ಕೊಡುಗೆ ನೀಡಿದ ಮಧುರಚೆನ್ನರು ವಿಶ್ವ ಶ್ರೇಷ್ಠ ಸಾಹಿತ್ಯವನ್ನು ರಚಿಸಿದ ಅನರ್ಘ್ಯ ಪ್ರತಿಭೆ ಎಂದು ಶಿಕ್ಷಕ-ಸಾಹಿತಿ ಸಂತೋಷ ಬಂಡೆ ಹೇಳಿದರು.
ತಾಲೂಕಿನ ಹಿರೇರೂಗಿ ಗ್ರಾಮದ ಅರಿವು ಕೇಂದ್ರದಲ್ಲಿ ಶುಕ್ರವಾರ ಆಯೋಜಿಸಿದ್ದ ಮಧುರಚೆನ್ನರ 123ನೇ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹಲಸಂಗಿ ಗೆಳೆಯರ ಬಳಗವನ್ನು ಕಟ್ಟಿಕೊಂಡು, ಗ್ರಾಮೀಣ ಮಹಿಳೆಯರು ಹಾಡುತ್ತಿದ್ದ ಜಾನಪದ ಗೀತೆಗಳನ್ನು ಸಂಗ್ರಹಿಸಿ ಪ್ರಕಟಿಸುವ ಮೂಲಕ ಮಧುರಚೆನ್ನರು ಕನ್ನಡ ಜಾನಪದ ಸಾಹಿತ್ಯಕ್ಕೆ ಅಮೂಲ್ಯ ಸೇವೆ ಸಲ್ಲಿಸಿದ್ದಾರೆ. ಅವರ ‘ಗರತಿಯ ಹಾಡು’ ಹಾಗೂ ‘ನನ್ನ ನಲ್ಲ’ ಕೃತಿಗಳಲ್ಲಿ ದೇಸಿ ಸಂವೇದನೆ, ಭಕ್ತಿ, ಆತ್ಮಸಂಶೋಧನೆ ಮತ್ತು ಜೀವನ ಮೌಲ್ಯಗಳು ಪರಿಣಾಮಕಾರಿಯಾಗಿ ಅಭಿವ್ಯಕ್ತಗೊಂಡಿವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಕಜಾಪ ಅಧ್ಯಕ್ಷ ಆರ್. ವ್ಹಿ. ಪಾಟೀಲ, ಕನ್ನಡ ನವೋದಯ ಸಾಹಿತ್ಯದ ಪ್ರಮುಖ ಬರಹಗಾರರಲ್ಲಿ ಮಧುರಚೆನ್ನರು ಒಬ್ಬರು. ಶಾಸನ ಅಧ್ಯಯನ, ಜನಪದ ಸಾಹಿತ್ಯ ಸಂಶೋಧನೆ ಹಾಗೂ ಆಧ್ಯಾತ್ಮಿಕ ಸಾಹಿತ್ಯದ ಮೇಲಿನ ಅವರ ಆಸಕ್ತಿ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಪಿಡಿಒ ಬಸವರಾಜ ಬಬಲಾದ ಮಾತನಾಡಿ, ಮಧುರಚೆನ್ನರು ಕವಿಯಾಗಿ ಮಾತ್ರವಲ್ಲದೆ ಸಂಶೋಧಕ, ಗದ್ಯ ಲೇಖಕ, ಅನುವಾದಕ ಹಾಗೂ ಜನಪದ ಸಾಹಿತ್ಯ ಸಂಗ್ರಹದ ಆದ್ಯ ಪ್ರವರ್ತಕರಾಗಿ ವಿಶಿಷ್ಟ ಸ್ಥಾನ ಪಡೆದಿದ್ದಾರೆ. ಅವರ ಸಾಹಿತ್ಯ ಪರಂಪರೆ ಇಂದಿನ ಪೀಳಿಗೆಗೆ ಪ್ರೇರಣೆಯಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಗ್ರಾಮ ಲೆಕ್ಕಾಧಿಕಾರಿ ಸತೀಶ ಬಿರಾದಾರ, ಕಾರ್ಯದರ್ಶಿ ಅಂಬಾನಾಥ ಶಿವಶರಣ, ಗ್ರಂಥಪಾಲಕ ಸಚೀನ್ ಹೊಸೂರ, ಶ್ರೀಧರ ಬಾಳಿ, ಶಿವು ಪೂಜಾರಿ, ಶರಣು ನಾಟಿಕಾರ, ಅಕ್ಬರ ಕೊರಬು, ಶಿವರಾಜ ವಾಲೀಕಾರ, ದೀಪಾ ಕಟ್ಟಿಮನಿ, ರಾಜಶ್ರೀ ದಳವಾಯಿ, ರಮೇಶ ಮಾದರ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ವಿಶ್ವ ಶ್ರೇಷ್ಠ ಸಾಹಿತ್ಯದ ಅನರ್ಘ್ಯ ಪ್ರತಿಭೆ ಮಧುರಚೆನ್ನರು: ಸಂತೋಷ ಬಂಡೆ


