ಮಾನ್ಯ ಕೊಲೆ : ತಪ್ಪಿತಸ್ತರಿಗೆ ಕಠಿಣ ಶಿಕ್ಷೆ ವಿಧಿಸಲು ದಮನಿತ ಸೇನಾ ಸಮಿತಿ ಆಗ್ರಹ

ಸಪ್ತಸಾಗರ ವಾರ್ತೆ, ವಿಜಯಪುರ, ಡಿ. 29:
ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲೂಕಿನ ಇನಾಮ ವೀರಾಪುರ ಗ್ರಾಮದಲ್ಲಿ ಅಂತರ್ಜಾತಿ ವಿವಾಹ ಆಗಿದ್ದಕ್ಕೆ ಮಾನ್ಯ ಪಾಟೀಲ ಅವರನ್ನು ಭೀಕರವಾಗಿ ಕೊಲೆ ಮಾಡಿದ ಅವರ ತಂದೆ ಮತ್ತು ಈ ಕೃತ್ಯದಲ್ಲಿ ಸಹಭಾಗಿಯಾದವರಿಗೆ ಕೂಡಲೇ ಗಲ್ಲು ಶಿಕ್ಷೆ ನೀಡುವಂತೆ ದಮನಿತ ಸೇನಾ ಸಮಿತಿ ಪದಾಧಿಕಾರಿಗಳು ಆಗ್ರಹಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.
ದಮನಿತ ಸೇನಾ ಸಮಿತಿ ಜಿಲ್ಲಾಧ್ಯಕ್ಷ ಲಕ್ಷ್ಮಣ ಭೀಮಪ್ಪ ಚಲವಾದಿ ಮಾತನಾಡಿ, ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲೂಕಿನ ಇನಾಮ ವೀರಾಪುರ ಗ್ರಾಮದಲ್ಲಿ ಕಳೆದ ಏಳು ತಿಂಗಳುಗಳ ಹಿಂದೆ ಕು. ಮಾನ್ಯ ಪಾಟೀಲ ಮತ್ತು ಅದೇ ಗ್ರಾಮದ ದಲಿತ ಯುವಕ ವಿವೇಕಾನಂದ ಇವರಿಬ್ಬರೂ ಅಂತರ್ಜಾತಿ ವಿವಾಹ ಆಗಿದ್ದಕ್ಕೆ ಮಾನ್ಯಳ ಹೆತ್ತ ತಂದೆ ಪ್ರಕಾಶಗೌಡ ಪಾಟೀಲ ಮತ್ತು ಅವನೊಂದಿಗೆ ಅವರ ಕುಟುಂಬಸ್ಥರಾದ ಗುರುಸಿದ್ದಗೌಡ ಪಾಟೀಲ, ಬಸನಗೌಡ ಪಾಟೀಲ, ಫಕೀರಗೌಡ ಪಾಟೀಲ ಇತರೆ 9 ಜನ ಸೇರಿ ಏಳು ತಿಂಗಳ ಗರ್ಭಿಣಿಯಾದ ಮಾನ್ಯಳನ್ನು ಭೀಕರವಾಗಿ ಕೊಲೆ ಮಾಡಿರುವ ಘಟನೆಯು ಅತ್ಯಂತ ಖಂಡನೀಯವಾಗಿದೆ. ಅದೇ ಸಂದರ್ಭದಲ್ಲಿ ವಿವೇಕಾನಂದನ ತಂದೆ, ತಾಯಿ, ಸಹೋದರಿಯರ ಮೇಲೆಯೂ ಸಹ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.
ಈ ಘಟನೆಯನ್ನು ದಮನಿತ ಸೇನಾ ಸಮಿತಿ (ರಿ), (ಸಾಮಾಜಿಕ ಸಮಾನತೆಗಾಗಿ) ಜಿಲ್ಲಾ ಸಮಿತಿ ತೀವ್ರವಾಗಿ ಖಂಡಿಸುತ್ತದೆ.
ಜಾತಿ ಜಾತಿಗಳ ನಡುವೆ ಸಾಮರಸ್ಯ ತರಬೇಕು, ಸಮಾಜದಲ್ಲಿ ಸಮಾನತೆ ಮೂಡಬೇಕು ಎಂಬ ಉದ್ದೇಶದಿಂದ ಈ ನಾಡಿನಲ್ಲಿ ಎಷ್ಟೋ ಮಹನೀಯರು ಶ್ರಮಿಸಿದ್ದಾರೆ. ಸರ್ಕಾರಗಳೂ ಕೂಡಾ ಕಾಯ್ದೆ ಕಾನೂನುಗಳ ಜಾರಿಯ ಮೂಲಕ ಇಂತಹ ವಾತಾವರಣವನ್ನು ಸರಿಪಡಿಸಲು ಶ್ರಮಿಸಿವೆ. ಹೀಗಿದ್ದರೂ ಸಹ ಜಾತಿ ಕಾರಣಕ್ಕಾಗಿ ನಿರ್ಮಾಣವಾಗಿರುವ ಶ್ರೇಷ್ಠತೆಯ ಮನಸ್ಥಿತಿಯನ್ನು ಹೋಗಲಾಡಿಸಲು ಸಾಧ್ಯವಾಗದೇ ಇರುವುದು ಅತ್ಯಂತ ಬೇಸರದ ಸಂಗತಿಯಾಗಿದೆ. ಹಾಗಾಗಿ ಇಂತಹ ಅಮಾನವೀಯ ಕೃತ್ಯವೆಸಗಿದ ಮಾನ್ಯಳ ತಂದೆ ಮತ್ತು ಅವರ ಸಹಚರರಿಗೆ ಕೂಡಲೇ ಗಲ್ಲು ಶಿಕ್ಷೆ ನೀಡಬೇಕು ಎಂದರು
ಈ ಸಂದರ್ಭದಲ್ಲಿ ದಮನಿತ ಸೇನಾ ಮಹಿಳಾ ಜಿಲ್ಲಾಧ್ಯಕ್ಷೆ ಹೊಸಮನಿ, ಶಿಲ್ಪಾ ಈರಪ್ಪ ಚಲವಾದಿ ಈರಪ್ಪ ಚಲವಾದಿ ಹನುಮಂತ ಹೊಸಮನಿ, ಗೌರೀಶ ಚಲವಾದಿ, ಯಮನಪ್ಪ ಚಲವಾದಿ, ಭೀಮಪ್ಪ ಚಲವಾದಿ, ಯಲಗೂರಪ್ಪ ಚಲವಾದಿ ಮತ್ತಿತರರು ಉಪಸ್ಥಿತರಿದ್ದರು.

Share this