ಪ್ರಶಿಕ್ಷಣಾರ್ಥಿಗಳ ಶೈಕ್ಷಣಿಕ ಸಮಸ್ಯೆಗಳ ಪರಿಹಾರಕ್ಕೆ ಜೂನ್ 9 ಮತ್ತು 10 ರಂದು ಬೃಹತ್ ಹೋರಾಟ

ಸಪ್ತಸಾಗರ ವಾರ್ತೆ ವಿಜಯಪುರ, ಮೇ 31:
ನಗರದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದ ಸಮೀಪದ ಪ್ರವಾಸಿ ಮಂದಿರದಲ್ಲಿ ಇಂದು ದ್ರಾವಿಡ ವಿದ್ಯಾರ್ಥಿ ಪರಿಷತ್ ವತಿಯಿಂದ ಪ್ರಶಿಕ್ಷಣಾರ್ಥಿಗಳ ಶೈಕ್ಷಣಿಕ ಸಮಸ್ಯೆಗಳ ಕುರಿತು ಹೋರಾಟದ ಪೂರ್ವಭಾವಿ ಕಾರ್ಯಾಗಾರ ಸಭೆಯನ್ನು ಹಮ್ಮಿಕೊಳ್ಳಲಾಯಿತು.
ಸಭೆಯಲ್ಲಿ ಪ್ರಶಿಕ್ಷಣಾರ್ಥಿಗಳು ಎದುರಿಸುತ್ತಿರುವ ವಿವಿಧ ಜ್ವಲಂತ ಸಮಸ್ಯೆಗಳ ಕುರಿತು ಸುದೀರ್ಘ ಚರ್ಚೆ ನಡೆಸಲಾಯಿತು. ಪ್ರಸ್ತುತ ಶೈಕ್ಷಣಿಕ ವ್ಯವಸ್ಥೆಯಲ್ಲಿ ಪ್ರಶಿಕ್ಷಣಾರ್ಥಿಗಳಿಗೆ ಅಗತ್ಯವಾದ ಪ್ರಾಯೋಗಿಕ ತರಬೇತಿ ದೊರೆಯುತ್ತಿಲ್ಲ. ಜೊತೆಗೆ ಶೈಕ್ಷಣಿಕ ಸಂಸ್ಥೆಗಳಲ್ಲಿ ಸುಮಾರು ಎರಡುವರೆ ಲಕ್ಷ ರೂಪಾಯಿವರೆಗೆ ನಿಯಮಬಾಹಿರವಾಗಿ ಶುಲ್ಕ ವಸೂಲಿ ಮಾಡಲಾಗುತ್ತಿದೆ ಎಂದು ಸಭೆಯಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಲಾಯಿತು.
ಅಲ್ಲದೆ, ಇಂದಿನ ಅಗತ್ಯಗಳಿಗೆ ಅನುಗುಣವಾಗಿ ಎನ್‌ಇಪಿ (NEP) ಪಠ್ಯಕ್ರಮವನ್ನು ಸಮರ್ಪಕವಾಗಿ ಅಳವಡಿಸಿಲ್ಲ. ತರಬೇತಿ ಸಂಸ್ಥೆಗಳಲ್ಲಿ ಕಂಪ್ಯೂಟರ್ ಲ್ಯಾಬ್, ಸ್ಮಾರ್ಟ್ ಬೋರ್ಡ್ ಹಾಗೂ ಸುಸಜ್ಜಿತ ಗ್ರಂಥಾಲಯಗಳಂತಹ ಮೂಲಭೂತ ಸೌಲಭ್ಯಗಳ ಕೊರತೆ ಕಂಡುಬರುತ್ತಿದೆ ಎಂದು ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಯಿತು.
ಪ್ರಶಿಕ್ಷಣಾರ್ಥಿಗಳೊಂದಿಗೆ, ವಿಶೇಷವಾಗಿ ಮಹಿಳಾ ಪ್ರಶಿಕ್ಷಣಾರ್ಥಿಗಳೊಂದಿಗೆ ಏಕವಚನದಲ್ಲಿ ಹಾಗೂ ಅಸಭ್ಯ ಪದಗಳಿಂದ ವರ್ತಿಸಲಾಗುತ್ತಿರುವುದು ಖಂಡನೀಯವಾಗಿದೆ ಎಂದು ಸಭೆ ತಿಳಿಸಿತು. ಪರೀಕ್ಷೆಗಳು ಸಕಾಲಕ್ಕೆ ನಡೆಯದ ಕಾರಣ ವಿದ್ಯಾರ್ಥಿಗಳ ಭವಿಷ್ಯ ಅನಿಶ್ಚಿತತೆಯಲ್ಲಿ ಸಿಲುಕಿದ್ದು, ವ್ಯವಸ್ಥಿತ ಮೆಂಟರ್‌ಶಿಪ್ ಕೊರತೆಯಿಂದಾಗಿ ಸೂಕ್ತ ಮಾರ್ಗದರ್ಶನದಿಂದ ವಂಚಿತರಾಗುತ್ತಿದ್ದಾರೆ ಎಂದು ಗಮನ ಸೆಳೆಯಲಾಯಿತು.
ಇದರ ಜೊತೆಗೆ ಆಂತರಿಕ ಅಂಕಗಳು ಹಾಗೂ ಪ್ರಾಯೋಗಿಕ ಪರೀಕ್ಷೆಗಳ ಮೌಲ್ಯಮಾಪನದಲ್ಲಿ ವ್ಯಾಪಕ ಪಕ್ಷಪಾತ ನಡೆಯುತ್ತಿದ್ದು, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದೆ ಎಂದು ಪ್ರಶಿಕ್ಷಣಾರ್ಥಿಗಳು ಆರೋಪಿಸಿದರು.
ಪ್ರಶಿಕ್ಷಣಾರ್ಥಿಗಳ ಈ ಎಲ್ಲಾ ಗಂಭೀರ ಶೈಕ್ಷಣಿಕ ಸಮಸ್ಯೆಗಳನ್ನು ಖಂಡಿಸಿ ಹಾಗೂ ಶಾಶ್ವತ ಪರಿಹಾರಕ್ಕಾಗಿ ದ್ರಾವಿಡ ವಿದ್ಯಾರ್ಥಿ ಪರಿಷತ್ ವತಿಯಿಂದ ಜೂನ್ 9 ಮತ್ತು 10 ರಂದು ವಿಜಯಪುರದಲ್ಲಿ ಬೃಹತ್ ಹೋರಾಟ ಹಮ್ಮಿಕೊಳ್ಳಲು ಸಭೆಯಲ್ಲಿ ಸರ್ವಾನುಮತದಿಂದ ನಿರ್ಧರಿಸಲಾಯಿತು.
ಜಿಲ್ಲೆಯ ಎಲ್ಲಾ ಪ್ರಶಿಕ್ಷಣಾರ್ಥಿಗಳು, ವಿದ್ಯಾರ್ಥಿಗಳು ಹಾಗೂ ವಿವಿಧ ವಿದ್ಯಾರ್ಥಿ ಸಂಘಟನೆಗಳ ಪದಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಹೋರಾಟದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ದ್ರಾವಿಡ ವಿದ್ಯಾರ್ಥಿ ಪರಿಷತ್ ಪದಾಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಯುವ ಹೋರಾಟಗಾರರಾದ ಗೌಡಪ್ಪಗೌಡ ಬಿರಾದಾರ, ದ್ರಾವಿಡ ವಿದ್ಯಾರ್ಥಿ ಪರಿಷತ್ ಅಧ್ಯಕ್ಷ ಅಕ್ಷಯಕುಮಾರ್ ಅಜಮನಿ, ಕಾರ್ಯದರ್ಶಿ ರಾಹುಲ್ ಕಳಸದ, ಮಂಜುನಾಥ ಕವಳಿ, ಆಕಾಶ ಕುರ್ಣಿ, ಸಂದೇಶ ಕುಮುಟಗಿ, ಆದರ್ಶ, ವಿಜಯ, ಅಜಯ, ಸಂದೀಪ, ಅಭಿಷೇಕ ಮಹಿಳೆಯರು ಸೇರಿದಂತೆ ವಿದ್ಯಾರ್ಥಿಗಳು ಭಾಗಿಯಾಗಿದ್ದರು.

Share this