ಸಪ್ತಸಾಗರ ವಾರ್ತೆ, ವಿಜಯಪುರ, ಆ. 25 : ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಸಾರವಾಡ ಗ್ರಾಮದಲ್ಲಿ ಕಲ್ಯಾಣ ಕರ್ನಾಟಕ ಸಾರಿಗೆ, ವಾಯವ್ಯ ಕರ್ನಾಟಕ ಸಾರಿಗೆ ಬಸ್ಗಳ ನಿಲುಗಡೆಗೆ ಆಗ್ರಹಿಸಿ ಸಾರ್ವಜನಿಕರಿಗೆ, ಶಾಲಾ ಮಕ್ಕಳಿಗೆ ಅನುಕೂಲ ಕಲ್ಪಿಸಲು ಕಳೆದ ಆಗಸ್ಟ್ 14 ರಂದು ಗ್ರಾಮಸ್ಥರು ಮೂರು ಗಂಟೆಗಳ ಕಾಲ ಸಾರವಾಡ ಗ್ರಾಮದಲ್ಲಿ ರಸ್ತೆ ತಡೆ ಮಾಡಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಬಸ್ ನಿಲುಗಡೆಗೆ ಸಾರಿಗೆ ಸಂಸ್ಥೆಯ ಅಧಿಕಾರಿಗಳು ಲಿಖಿತ ಭರವಸೆ ನೀಡಿದ್ದರು. ಭರವಸೆ ಈಡೇರಿಸಲು ವಿಫಲವಾದ ಹಿನ್ನೆಲೆಯಲ್ಲಿ ಆಗಷ್ಟೇ 26 ರಂದು ಮರಳಿ ಪ್ರತಿಭಟನೆ ಮಾಡುವ ಎಚ್ಚರಿಕೆ ನೀಡಲಾಗಿತ್ತು.
ಇದರಿಂದ ಎಚ್ಚೆತ್ತುಕೊಂಡು ಸಾರಿಗೆ ಅಧಿಕಾರಿಗಳು ವಾಯವ್ಯ ಕರ್ನಾಟಕ ಸಾರಿಗೆ ಅಧಿಕಾರಿಗಳೊಂದಿಗೆ ಮಾತನಾಡಿ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಮತ್ತು ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಎಲ್ಲ ಬಸ್ಸುಗಳನ್ನು ಸಾರವಾಡ ಗ್ರಾಮದಲ್ಲಿ ನಿಲುಗಡೆಗೆ ಕ್ರಮ ಸೇರಿದಂತೆ ವಿಜಯಪುರ-ಖಜಾಪೂರ-ಸಾರವಾಡ-ಬಬಲೇಶ್ವರ ಮಾರ್ಗವಾಗಿ ಪ್ರತಿದಿನ ನಗರ ಸಾರಿಗೆ 2 ಬಸ್ಸುಗಳನ್ನು ಬಿಡುವುದಾಗಿ ಲಿಖಿತ ಭರವಸೆ ನೀಡಿದ್ದಕ್ಕೆ ಅಖಿಲ ಭಾರತೀಯ ವಾಲ್ಮೀಕಿ ಸಮಾಜ ಸೇವಾ ಸಂಘದ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ಬಟಗಿ ಹಾಗೂ ಸಾರವಾಡ ಗ್ರಾಮದ ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದ್ದಾರೆ.
ಇದೇ ಸಂದರ್ಭದಲ್ಲಿ ನಾಳೆ ಹಮ್ಮಿಕೊಂಡಿರುವ ಪ್ರತಿಭಟನೆಯನ್ನು ಕೈಬಿಡಲಾಗಿದೆ ಎಂದು ಪ್ರಕಟಣೆಯಲ್ಲಿ ಅವರು ತಿಳಿಸಿದ್ದಾರೆ.
ಸಾರವಾಡಕ್ಕೆ ಎಲ್ಲ ಬಸ್ಗಳ ನಿಲುಗಡೆಗೆ ಕ್ರಮ: ಗ್ರಾಮಸ್ಥರಿಂದ ಹರ್ಷ
