ವಿಕಲಚೇತನರಿಗೆ ಅಗತ್ಯ ಮೂಲಭೂತ ಸೌಲಭ್ಯ ಒದಗಿಸಲು ಕ್ರಮ-ಜಿಲ್ಲಾಧಿಕಾರಿ ಡಾ. ಆನಂದ.ಕೆ

ಸಪ್ತಸಾಗರ ವಾರ್ತೆ, ವಿಜಯಪುರ,ಡಿ.3: ಸರ್ಕಾರಿ ಕಚೇರಿಗಳು ಸಾರ್ವಜನಿಕ ಕಟ್ಟಡಗಳಲ್ಲಿ ವಿಶೇಷಚೇತನರಿಗೆ ಪ್ರಥಮಾದ್ಯತೆ ಮೇರೆಗೆ ಮೂಲಭೂತ ಸೌಕರ್ಯಗಳು ಒದಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಆನಂದ.ಕೆ ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ವಿಕಲಚೇತನರ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸ್ಥಳೀಯ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಬುಧವಾರ ಕಂದಗಲ್ ಶ್ರೀ ಹನುಮಂತರಾಯ ರಂಗ ಮಂದಿರದಲ್ಲಿ ಆಯೋಜಿಸಿದ ವಿಶ್ವ ವಿಕಲಚೇತನರ ದಿನಾಚರಣೆಯ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ವಿಕಲಚೇತನರ ಅಭಿವೃದ್ಧಿಗಾಗಿ ವಿಕಲಚೇತನರ ಹಕ್ಕುಗಳ ಕಾಯ್ದೆ 2016Àರನ್ವಯ ವಿಕಲಚೇತನರಿಗೆ ಅನುಕಂಪದ ತೊರದೇ ಅವರಿಗೆ ಅವಕಾಶಗಳನ್ನು ನೀಡಿ ಮುಖ್ಯವಾಹಿನಿಗೆ ತರುವ ಮೂಲಕ ಕಾಯ್ದೆ ಸಮರ್ಪಕ ಅನುಷ್ಠಾನಗೊಳಿಸಲು ಜಿಲ್ಲಾ ಮಟ್ಟದಲ್ಲಿ ಇತ್ತೀಚೆಗೆ ವಿಕಲಚೇತನರ ಕುಂದುಕೊರತೆ ಸಭೆ ನಡೆಸಿ, ಸಮಸ್ಯೆಗಳನ್ನು ಆಲಿಸಲಾಗಿದೆ. ಎಲ್ಲ ಸಮಸ್ಯೆಗಳಿಗೆ ಸ್ಪಂದಿಸಲು ತಾಲೂಕಾ ಮಟ್ಟದಲ್ಲಿ ಪ್ರತಿ 3 ತಿಂಗಳಿಗೊಮ್ಮೆ ಸಭೆ ನಡೆಸಿ, ವಿಶೇಷ ಚೇತನರ ಸಮಸ್ಯೆಗಳಿಗೆ ಆಲಿಸಿ ಪರಿಹಾರಕ್ಕಾಗಿ ವಿವಿಧ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.ಅಂಗವಿಕಲಿಗೆ ಮೀಸಲಿಟ್ಟ ಶೇ.5ರಷ್ಟು ಅನುದಾನವನ್ನು ವಿವಿಧ ಯೋಜನೆಗಳಡಿ ಬಕೆಯಾಗಿರುವ ಕುರಿತು ಪ್ರದರ್ಶನಾ ಫಲಕಗಳಲ್ಲಿ ಕಡ್ಡಾಯವಾಗಿ ಸಾರ್ವಜನಿಕರು ವೀಕ್ಷಿಸುವ ಅನುಕೂಲಕ್ಕಾಗಿ ಕ್ರಮವಹಿಸಲಾಗುತ್ತಿದೆ ಎಂದು ಅವರು ಹೇಳಿದರು.
ಸರ್ಕಾರಿ ಶಾಲೆಗಳಲ್ಲಿ ಹಾಗೂ ಮತಗಟ್ಟೆಯಲ್ಲಿ ವೈಜ್ಞಾನಿಕವಾಗಿ ರ್ಯಾಂಪ್ ಅಳವಡಿಸಿರುವ ಕುರಿತು,ಸರ್ಕಾರ ವಿಕಲಚೇತನರಿಗೆ ನಿಗದಿ ಪಡಿಸಿದ ಗುರಿಯನ್ವಯ ಆದ್ಯತೆ ಮೆರೆಗೆ ವಸತಿ ಸೌಲಭ್ಯ ಒದಗಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಯುಡಿಐ ಹೊಂದಿರದ ಫಲಾನುಭವಿಗಳಿಗೆ ಒಗ್ಗೂಡಿಸಿ ಶಿಬಿರ ಆಯೋಜಿಸಿ ವಿಶೇಷ ಚೇತನರ ಗುರುತಿನ ಕಾರ್ಡ್ ವಿತರಣೆಗೂ ಕ್ರಮವಹಿಸಿದ್ದು, ಅರ್ಹರು ಇದರ ಲಾಭ ಪಡೆದುಕೊಳ್ಳಬೇಕು. ಅದರಂತೆ ಸರ್ಕಾರ ಅನುಷ್ಠಾನಗೊಳಿಸುವ ಯೋಜನೆಗಳ ಲಾಭ ಪಡೆದು ಸ್ವಾವಲಂಬಿಯಾಗಿ ಜೀವನ ನಿರ್ವಹಿಸಿ ಎಂದು ಅವರು ಹೇಳಿದರು.
ಜೀವನದಲ್ಲಿ ಆಶಾಭಾವನೆ ಹೊಂದುವ ಮೂಲಕ ವಿಶೇಷ ಚೇತನರು ಸಾಧಕರನ್ನು ಪ್ರೇರಣೆ ಹೊಂದಬೇಕು. ಸಮಸ್ಯೆಗಳಿಗೆ ಕುಗ್ಗದೇ ಅವುಗಳನ್ನು ಎದುರಿಸಿ ಮಾನಸಿಕ ಸದೃಢತೆ ಮೂಲಕ ಸಾಧನೆ ಮಾಡಿ, ವಿಶೇಷ ಚೇತನರು ಆತ್ಮವಿಶ್ವಾಸ ಹೊಂದಿ ಮುನ್ನಡೆಯಬೇಕು. ತಾವು ಹೊಂದಿರುವ ಪ್ರತಿಭೆಯಿಂದ ಸಮಾಜಕ್ಕೆ ಮಾದರಿಯಾಗುವ ನಿಟ್ಟಿನಲ್ಲಿ ಸಾದನೆ ಮಾಡಿ ಎಂದು ಹೇಳಿದರು.
ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ರಿಷಿ ಆನಂದ ಅವರು ಮಾತನಾಡಿ, ಜೀವನದಲ್ಲಿ ಬರುವ ಸಮಸ್ಯೆಗಳನ್ನು ಎದುರಿಸಲು ಆತ್ಮವಿಶ್ವಾಸ ಅಗತ್ಯ. ಸಕಾರಾತ್ಮವಾಗಿ ಯೋಚನೆ ಮಾಡಿ ಸಮಸ್ಯೆಗಳಿಂದ ಹೊರ ಬಂದು ಉತ್ತಮ ಸುಗಮ ಜೀವನಕ್ಕೆ ಅಡಿಪಾಯ ಹಾಕಿಕೊಳ್ಳಬೇಕು. ತಮ್ಮ ಯಾವುದೇ ಸಮಸ್ಯೆಗಳಿದ್ದಲ್ಲಿ ನೇರವಾಗಿ ನಮ್ಮನ್ನು ಅಥವಾ ಸಂಬಂಧಿಸಿದ ಅಧಿಕಾರಿಗಳಿಗೆ ಸಂಪರ್ಕಿಸಿ ಸಮಸ್ಯೆಗಳನ್ನು ಇತ್ಯರ್ಥ ಪಡೆಸಿಕೊಳ್ಳಬಹುದಾಗಿದೆ. ಈ ನಿಟ್ಟಿನಲ್ಲಿಸಹಾಯ-ಸಹಕಾರ ತ್ವರಿತಗತಿಯಲ್ಲಿ ಬಗೆಹರಿಸಲಾಗುವುದು. ಈಗಾಗಲೇ ವಿಕಲಚೇತನರಿಗೆ ಜಿಲ್ಲೆಯ ಐದು ತಾಲೂಕಾ ಮಟ್ಟದಲ್ಲಿ ಕ್ರೀಡೆಗಳನ್ನು ಆಯೋಜಿಸಿ, ಪ್ರತಿಭಾನ್ವಿತ ಕ್ರೀಡಾಪಟುಗಳು ತಮ್ಮ ಆಸಕ್ತಿಯ ಕ್ರೀಡೆಯಲ್ಲಿ ಭಾಗವಹಿಸಿ ಮಟ್ಟದಲ್ಲಿಯೂ ಉತ್ತಮವಾಗಿ ಪ್ರದರ್ಶನ ನೀಡಿರುವುದು ಸಂತಸದ ಸಂಗತಿಯಾಗಿದೆ. ಮುಂಬರುವ ದಿನಗಳಲ್ಲಿ ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ವಿಕಲಚೇತನರು ಸಕ್ರಿಯವಾಗಿ ಪಾಲ್ಗೊಂಡು ತಮ್ಮ ಪ್ರತಿಭೆ ತೋರಲು ಭಾಗವಹಿಸುವಂತೆ ಪ್ರೋತ್ಸಾಹ ನೀಡಲಾಗುವುದು ಎಂದು ಅವರು ತಿಳಿಸಿದರು.
ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಮಾತನಾಡಿ, ವಿಕಲಚೇತನರು ತಮ್ಮಲ್ಲಿರುವ ವಿಶ್ವಾಸವನ್ನು ಕಳೆದುಕೊಳ್ಳದೆ ಸಮಾಜದಲ್ಲಿ ಮುಂದೆ ಬರುವ ಮನೋಭಾವ ಹೊಂದಬೇಕು. ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಹೇಳಿದರು.
ಎಸ್.ಎನ್. ಬಸವ ರೆಡ್ಡಿ ಅವರು ಉಪನ್ಯಾಸ ನೀಡಿದರು.ವಿಕಲಚೇತನರ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನಿಸಲಾಯಿತು.ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಕೆ.ಕೆ.ಚವ್ಹಾಣ, ವಿಜಯಪುರ ಉಪವಿಭಾಗಾಧಿಕಾರಿ ಗುರುನಾಥ ದಡ್ಡೆ,ಮಹಿಳಾ ಮತ್ತು‌ ಮಕ್ಕಳ‌ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಕೆಕೆ‌ ಚವ್ಹಾಣ, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕೆ ಇಲಾಖೆಯ ಅಧಿಕಾರಿ ಜಗದೀಶ ಕೆ ಸೇರಿದಂತೆ ಜಿಲ್ಲಾಮಟ್ಟದ ಹಾಗೂ ವಿಶೇಷ ಚೇತನರ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.
ಇದಕ್ಕೂ ಮುನ್ನ ವಿಶ್ವ ವಿಕಲಚೇತನರ ದಿನಾಚರಣೆ ಕಾರ್ಯಕ್ರಮದ ಅಂಗವಾಗಿ ನಗರದ ಶ್ರೀ ಸಿದ್ದೇಶ್ವರ ದೇವಸ್ಥಾನದಿಂದ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದವರೆಗೆ ಇಂಧನ ಚಾಲಿತ ತ್ರಿಚಕ್ರವಾಹನಗಳ ಜಾಥಾ ನಡೆಯಿತು.

Share this