ಸಪ್ತಸಾಗರ ಸಂಪಾದಕ ರುದ್ರಪ್ಪ ಆಸಂಗಿಗೆ ಸಿಎಂ ಸಿದ್ದರಾಮಯ್ಯ ಅವರಿಂದ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪ್ರದಾನ

ಸಪ್ತಸಾಗರ ವಾರ್ತೆ, ಬೆಂಗಳೂರು, ಮಾ. 14:
ಸಪ್ತಸಾಗರ ದಿನ ಪತ್ರಿಕೆ ಸಂಪಾದಕ ಹಾಗೂ ಸಂಜೆವಾಣಿ ಜಿಲ್ಲಾ ವರದಿಗಾರ ರುದ್ರಪ್ಪ ಆಸಂಗಿ ಸೇರಿದಂತೆ ರಾಜ್ಯದ 31 ಗಣ್ಯರಿಗೆ ಬೆಂಗಳೂರಿನ ವಿಧಾನ ಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2025ನೇ ಸಾಲಿನ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು.
ಶುಕ್ರವಾರ ಸಂಜೆ ನಡೆದ ವರ್ಣರಂಜಿತ ಸಮಾರಂಭದಲ್ಲಿ ವಿಜಯಪುರದ ಹಿರಿಯ ಪತ್ರಕರ್ತ ರುದ್ರಪ್ಪ ಆಸಂಗಿ ಅವರು 4 ದಶಕಗಳ ಕಾಲ ಪತ್ರಿಕಾ ಕ್ಷೇತ್ರದಲ್ಲಿ ಸುದೀರ್ಘ ಸೇವೆಯನ್ನು ಸಲ್ಲಿಸಿರುವುದನ್ನು ಪರಿಗಣಿಸಿ ಮಾಧ್ಯಮ ಅಕಾಡೆಮಿಯ 2025ನೇ ಸಾಲಿನ ಪ್ರಶಸ್ತಿ ಪ್ರಶಸ್ತಿ ಪ್ರದಾನ ಮಾಡಿ ಸನ್ಮಾನ ಮಾಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಸರ್ಕಾರದ ತಪ್ಪುಗಳನ್ನು ಟೀಕೆ ಮಾಡಿದರೆ ಪರವಾಗಿಲ್ಲ. ಆದರೆ ತಪ್ಪು ವರದಿಗಳನ್ನು ಮಾಡದೆ ವಸ್ತುನಿಷ್ಠ ವರದಿ ಮಾಡಬೇಕೆಂದು ಪತ್ರಕರ್ತರಿಗೆ ಸಲಹೆ ನೀಡಿದರು.
ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ. ವಿ. ಪ್ರಭಾಕರ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಶಿವಾಜಿನಗರ ಶಾಸಕ ರಿಜ್ವಾನ್ ಅರ್ಷದ್ ಸಮಾರಂಭದ ಅಧ್ಯಕ್ಷತೆ ವಹಿಸಿ ಪ್ರಶಸ್ತಿ ಪುರಸ್ಕೃತರ ಪರಿಚಯ ಕಿರು ಹೊತ್ತಿಗೆಯನ್ನು ಬಿಡುಗಡೆ ಮಾಡಿದರು.
ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷೆ ಆಯೇಶಾ ಖಾನಂ ಆಶಯ ನುಡಿಗಳನ್ನು ಹೇಳಿ, ಬರುವ ವರ್ಷದಿಂದ ಈಗಾಗಲೇ ಪ್ರತಿ ವರ್ಷ 31 ಸಾಧಕ ಪತ್ರಕರ್ತರಿಗೆ ನೀಡುತ್ತಿದ್ದ ವಾರ್ಷಿಕ ಮಾಧ್ಯಮ ಅಕಾಡೆಮಿ ಪ್ರಶಸ್ತಿಗಳ ಸಂಖ್ಯೆಯನ್ನು 35ಕ್ಕೆ ಹೆಚ್ಚಿಸಲಾಗುವುದು ಎಂದು ತಿಳಿಸಿದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಬಿ. ಬಿ. ಕಾವೇರಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತ ಹೇಮಂತ್ ನಿಂಬಾಳ್ಕರ್, ಮಾಧ್ಯಮ ಅಕಾಡೆಮಿ ಕಾರ್ಯದರ್ಶಿ ಸಹನಾ ಎಂ. ಮತ್ತಿತರ ಹಿರಿಯ ಅಧಿಕಾರಿಗಳು ಇದ್ದರು.

Share this