ವಿಜಯಪುರ ಜಿಲ್ಲಾ ಆಸ್ಪತ್ರೆಯಲ್ಲಿ ಅವ್ಯವಸ್ಥೆ ಖಂಡಿಸಿ ವೈದ್ಯಕೀಯ ಕಾಲೇಜು ಹೋರಾಟ ಸಮಿತಿ ಆಕ್ರೋಶ

ಸಪ್ತಸಾಗರ ವಾರ್ತೆ,ವಿಜಯಪುರ, ಮೇ. 19:
ಇಲ್ಲಿನ ಜಿಲ್ಲಾಸ್ಪತ್ರೆಯ ಖಂಡಿಸಿ ಸರ್ಕಾರಿ ವೈದ್ಯಕೀಯ ಕಾಲೇಜು ಹೋರಾಟ ಸಮಿತಿ ಮಂಗಳವಾರ ಪ್ರತಿಭಟನೆ ನಡೆಸಿದೆ.
ನಗರದ ಜಿಲ್ಲಾ ಆಸ್ಪತ್ರೆಯಲ್ಲಿ ತೀವ್ರ ಅವ್ಯವಸ್ಥೆಯಿಂದ ರೋಗಿಗಳು ದುರಂತ ಅನುಭವಿಸುತ್ತಿದ್ದಾರೆ. ಪ್ರತಿದಿನ 2,000 ರಿಂದ 3,000ಕ್ಕೂ ಹೆಚ್ಚು ಹೊರ ರೋಗಿಗಳು ಇಂಡಿ, ಮುದ್ದೇಬಿಹಾಳ, ಸಿಂದಗಿ ತಾಲ್ಲೂಕುಗಳಿಂದ, ಬಾಗಲಕೋಟೆ , ಬೆಳಗಾವಿ ಜಿಲ್ಲೆಗಳಿಂದ ಹಾಗೂ ಮಹಾರಾಷ್ಟ್ರದ ಸಾಂಗ್ಲಿ ಮತ್ತು ಜತ್ತ ಜಿಲ್ಲೆಗಳಿಂದ ಬರುತ್ತಿದ್ದರೂ ಸಹ, ಆಸ್ಪತ್ರೆಯಲ್ಲಿ ಕನಿಷ್ಠ ಮೂಲಭೂತ ವ್ಯವಸ್ಥೆಯನ್ನೂ ಕಲ್ಪಿಸಲಾಗಿಲ್ಲ ಎಂದು ವಿಜಯಪುರ ಸರ್ಕಾರಿ ವೈದ್ಯಕೀಯ ಕಾಲೇಜು ಹೋರಾಟ ಸಮಿತಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಜಿಲ್ಲಾಸ್ಪತ್ರೆಯಲ್ಲಿ ಎಂಆರ್‌ಐ, ಸಿಟಿ ಸ್ಕ್ಯಾನ್, ಸೂಪರ್ ಸ್ಪೆಷಾಲಿಟಿ ಕಟ್ಟಡ, ಪಂಚಕರ್ಮ ಚಿಕಿತ್ಸಾಲಯ, 670 ಹಾಸಿಗೆಗಳ ಜನರಲ್ ಆಸ್ಪತ್ರೆ, 150 ಹಾಸಿಗೆಗಳ ತಾಯಿ-ಮಕ್ಕಳ ಆಸ್ಪತ್ರೆ, 60 ಹಾಸಿಗೆಗಳ ಟ್ರಾಮಾ ಸೆಂಟರ್, ತುರ್ತು ನಿಗಾ ಘಟಕ, ಆಕ್ಸಿಜನ್ ಪ್ಲಾಂಟ್ ಹಾಗೂ ಹೈಟೆಕ್ ಶವಾಗಾರಗಳಂತಹ ಅತ್ಯಾಧುನಿಕ ಸೌಲಭ್ಯಗಳಿದ್ದರೂ, ರೋಗಿಗಳಿಗೆ ಚೀಟಿ ಪಡೆಯುವಲ್ಲಿ ತೀವ್ರ ತೊಂದರೆಯಾಗುತ್ತಿದೆ ಎಂದು ದೂರಿದರು.
ಬೆಳಿಗ್ಗೆ 8 ಗಂಟೆಯಿಂದಲೇ ಬಂದ ರೋಗಿಗಳು ಮೂರು ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಂತರೂ ಚೀಟಿ ಸಿಗದೆ ಕೋಪದಿಂದ ವಾಪಸ್ಸು ಊರಿಗೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಪ್ರತಿಭಟನೆಕಾರರು ದೂರಿದ್ದಾರೆ.
ದೂರದ ಜಮಖಂಡಿ, ಕುಂಟೋಜಿ, ಕಲಕೇರಿ, ಸಾಂಗ್ಲಿ ಮತ್ತು ಜತ್ತದಿಂದ ಬಂದ ವಯಸ್ಸಾದವರು, ಗರ್ಭಿಣಿ ಮಹಿಳೆಯರು, ಬಾಣಂತಿಯರು ಮತ್ತು ಮಕ್ಕಳು ಬಿಸಿಲಿನಲ್ಲಿ ನಿಂತು ಪರಿತಪಿಸುತ್ತಿದ್ದಾರೆ. ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಸಾಕಷ್ಟು ಜಾಗ ಇದ್ದರೂ ಕೌಂಟರ್‌ಗಳನ್ನು ಮುಚ್ಚಿ ಎಲ್ಲಾ ರೋಗಿಗಳನ್ನು ಒಂದೇ ಕಡೆಗೆ ನೂಕುವುದರಿಂದ ನೂಕುನುಗ್ಗಲು ಹೆಚ್ಚಾಗಿ ತೀವ್ರ ತೊಂದರೆಯಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಈ ಅವ್ಯವಸ್ಥೆಯನ್ನು ಖಂಡಿಸುತ್ತಾ ವಿಜಯಪುರ ಸರ್ಕಾರಿ ವೈದ್ಯಕೀಯ ಕಾಲೇಜು ಹೋರಾಟ ಸಮಿತಿ ಈ ಕೆಳಕಂಡ ಬೇಡಿಕೆಗಳನ್ನು ತಕ್ಷಣ ಈಡೇರಿಸುವಂತೆ ಜಿಲ್ಲಾ ಆಡಳಿತ, ಆರೋಗ್ಯ ಇಲಾಖೆ ಮತ್ತು ಸರ್ಕಾರಕ್ಕೆ ವಿಜಯಪುರ ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಶಿವಾನಂದ್ ಮಾಸ್ತಿಹೊಳಿ ಅವರಿಗೆ ಮನವಿ ಮಾಡಿದೆ.
ಕೂಡಲೇ ಅಗತ್ಯಕ್ಕೆ ತಕ್ಕಷ್ಟು ಹೆಚ್ಚುವರಿ ಕೌಂಟರ್‌ಗಳನ್ನು ತೆರೆಯುವುದು.
ಎಲ್ಲಾ ರೋಗಗಳಿಗೆ ಸಂಬಂಧಿಸಿದ ಪರೀಕ್ಷೆಗಳನ್ನು ಆಸ್ಪತ್ರೆಯಲ್ಲೇ ಮಾಡುವ ವ್ಯವಸ್ಥೆ ಕಲ್ಪಿಸುವುದು.
ಎಲ್ಲಾ ಅಗತ್ಯ ಔಷಧಿಗಳನ್ನು ರೋಗಿಗಳಿಗೆ ಉಚಿತವಾಗಿ ಒದಗಿಸುವುದು. ಚೀಟಿ ಪಡೆಯುವ ಸರತಿ ಸಾಲಿನಲ್ಲಿ ರೋಗಿಗಳಿಗೆ ನೆರಳು, ಕುರ್ಚಿ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಮಾಡುವುದು. ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಪ್ರತ್ಯೇಕ ಕೌಂಟರ್‌ಗಳನ್ನು ತಕ್ಷಣ ತೆರೆಯುವುದು. ಯಾವುದೇ ಪಾರ್ಕಿಂಗ್ ದರ ಇರಕೂಡದು ಹಾಗೂ ಅದನ್ನು ಸಂಪೂರ್ಣ ರದ್ದು ಮಾಡಬೇಕು.
ಈ ಎಲ್ಲ ಬೇಡಿಕೆಗಳಿಗೆ ತಕ್ಷಣ ಸ್ಪಂದಿಸಿ ಪರಿಹರಿಸದಿದ್ದರೆ ಹೋರಾಟ ಸಮಿತಿ ತೀವ್ರ ಹೋರಾಟಕ್ಕೆ ಮುಂದಾಗುವುದೆಂದು ಎಚ್ಚರಿಸಿದ್ದಾರೆ.
ಈ ಸಂದರ್ಭದಲ್ಲಿ ವೈದ್ಯಕೀಯ ಕಾಲೇಜು ಹೋರಾಟ ಸಮಿತಿಯ ಸದಸ್ಯರುಗಳಾದ ಬಿ. ಭಗವಾನ್ ರೆಡ್ಡಿ, ಅರವಿಂದ ಕುಲಕರ್ಣಿ, ಲಲಿತಾ ಬಿಜ್ಜರಗಿ, ಮಲ್ಲಿಕಾರ್ಜುನ ಬಟಗಿ, ಬಾಬುರಾವ ಬೀರಕಬ್ಬಿ, ಸುರೇಶ ಬಿಜಾಪುರ, ಸಿದ್ದಲಿಂಗ ಬಾಗೇವಾಡಿ, ಭರತಕುಮಾರ ಎಚ್.ಟಿ, ಮಲ್ಲಿಕಾರ್ಜುನ ಎಚ್.ಟಿ, ಗೀತಾ ಎಚ್, ನೀಲಂಬಿಕಾ ಬಿರಾದಾರ, ಲಿಂಗರಾಜ ಬಿದರಕುಂದಿ, ಸಂತೋಷ ನಾಯಕ, ಭೀಮು ಉಪ್ಪಾರ, ಜಗದೇವ ಸೂರ್ಯವಂಶಿ, ಡಾ. ಗುರಿಕರ್, ಸುಶೀಲಾ ಮಿಣಜಗಿ, ಜ್ಯೋತಿ ಮಿಣಜಗಿ, ಭಾಗ್ಯ ಮಿಣಜಗಿ, ಸಲಿಂ ಹೊಕ್ಕರಣಿ, ಭೋಗೇಶ ಸೋಲಾಪುರ ಮತ್ತಿತರ ಮುಂಖಡರು ಉಪಸ್ಥಿತರಿದ್ದರು.

Share this