ಸಪ್ತ ಸಾಗರ ವಾರ್ತೆ, ವಿಜಯಪುರ, ಸೆ.18:
ಅಂತರ್ ರಾಷ್ಟ್ರೀಯ ದೈತ್ಯ ಕಂಪನಿ ಫಾಕ್ಸ್ ಕಾನ್, ವಿಜಯಪುರದ ಬಿಎಲ್.ಡಿ.ಇ ಸಂಸ್ಥೆ ವಚನಪಿತಾಮಹ ಡಾ.ಫ.ಗು.ಹಳಕಟ್ಟಿ ಎಂಜನಿಯರಿಂಗ್ ಕಾಲೇಜಿನಲ್ಲಿ ಸೆ. 26ರಂದು ಎಂಜನಿಯರಿಂಗ್ ಮತ್ತು ಡಿಪ್ಲೋಮಾ ಪಾಸಾದ ವಿದ್ಯಾರ್ಥಿಗಳಿಗಾಗಿ ಬೃಹತ್ ಉದ್ಯೋಗ ಮೇಳ ಆಯೋಜಿಸಿದೆ.
2024 ಮತ್ತು 2025 ನೇ ಶೈಕ್ಷಣಿಕ ವರ್ಷದಲ್ಲಿ ಬಿ.ಇ ಮತ್ತು ಡಿಪ್ಲೋಮಾ ಪದವಿಯ ಮೆಕ್ಯಾನಿಕಲ್, ಇಲೇಕ್ಟ್ರಾನಿಕ್ಸ್ ಕಮ್ಯೂನಿಕೇಶನ್ ಮತ್ತು ಇಲೇಕ್ಟ್ರಾನಿಕ್ಸ್ ಇಲೆಕ್ಟ್ರೀಕಲ್ಸ್ ವಿಭಾಗಗಳಲ್ಲಿ ತೇರ್ಗಡೆ ಹೊಂದಿರುವ ವಿಜಯಪುರ ಹಾಗೂ ಸುತ್ತಲಿನ ಪ್ರದೇಶಗಳ ಎಲ್ಲ ವಿದ್ಯಾರ್ಥಿಗಳು ನೋಂದಣಿ ಮಾಡಿಸಿಕೊಂಡು, ಈ ಉದ್ಯೋಗ ಮೇಳದಲ್ಲಿ ಭಾಗವಹಿಸಬಹುದಾಗಿದೆ.
ಅಂತರ್ ರಾಷ್ಟ್ರೀಯ ಬೃಹತ್ ಸಂಸ್ಥೆಯಾಗಿರುವ ಫಾಕ್ಸ್ ಕಾನ್ ಜಗತ್ತಿನಲ್ಲಿಯೇ ಐಪೋನ್ ತಯಾರಿಕೆಯಲ್ಲಿ ಅಗ್ರಗಣ್ಯ ಸಂಸ್ಥೆಯಾಗಿದ್ದು, ಬೆಂಗಳೂರಿನ ದೇವನಹಳ್ಳಿಯಲ್ಲಿ ನೂತನ ಬೃಹತ್ ತಯಾರಿಕಾ ಘಟಕ ಕಾರ್ಯಾರಂಭ ಮಾಡುತ್ತಿರುವ ಹಿನ್ನೆಲೆಯಲ್ಲಿ, ಕೈಗಾರಿಕೆ, ಮೂಲಸೌಕರ್ಯ ಅಭಿವೃದ್ಧಿ ಸಚಿವರು ಹಾಗೂ ವಿಜಯಪುರ ಜಿಲ್ಲೆ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲರವರು, ಫಾಕ್ಸ್ ಕಾನ್ ಆಡಳಿತ ಮಂಡಳಿಗೆ ವಿಜಯಪುರ ಹಾಗೂ ಸುತ್ತಲಿನ ಜಿಲ್ಲೆಗಳ ವಿದ್ಯಾರ್ಥಿಗಳಿಗೆ ತಮ್ಮ ಕಂಪನಿಯಲ್ಲಿ ಹೆಚ್ಚಿನ ಅವಕಾಶ ನೀಡಬೇಕು ಎಂದು ಕೋರಿದ ಹಿನ್ನೆಲೆಯಲ್ಲಿ ಫಾಕ್ಸ್ ಕಾನ್ ಅಧಿಕಾರಿಗಳು ಖುದ್ದು ವಿಜಯಪುರಕ್ಕೆ ಆಗಮಿಸಿ, ವಿದ್ಯಾರ್ಥಿಗಳ ಸಂದರ್ಶನ ನಡೆಸಿ, ನೇರ ನೇಮಕಾತಿ ಮಾಡಿಕೊಳ್ಳಲಿದ್ದಾರೆ.
ಸೆ.26 ರಂದು ಬೆಳಗ್ಗೆ 9 ರಿಂದ ಸಂಜೆ 5 ಗಂಟೆವರೆಗೆ ಈ ಉದ್ಯೋಗ ಮೇಳ ನಡೆಯುತ್ತಿದ್ದು, ಹೆಚ್ಚಿನ ಮಾಹಿತಿಗಾಗಿ ಎಂಜನಿಯರಿಂಗ್ ವಿದ್ಯಾರ್ಥಿಗಳು ಪ್ರಶಾಂತ ಪಾಟೀಲ ಮೊ.9591345239, ಡಿಪ್ಲೋಮಾ ವಿದ್ಯಾರ್ಥಿಗಳು ಎಸ್.ವಿ. ಕುಲಕರ್ಣಿ ಮೊ.9449246255 ಅವರನ್ನು ಸಂಪರ್ಕಿಸಬೇಕು ಎಂದು ಕೈಗಾರಿಕಾ ಸಚಿವರ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ.ಮಹಾಂತೇಶ ಬಿರಾದಾರ ತಿಳಿಸಿದ್ದಾರೆ.
ಸೆ. 26ರಂದು ಬೃಹತ್ ಉದ್ಯೋಗ ಮೇಳ
