ಸಪ್ತಸಾಗರ ವಾರ್ತೆ,ವಿಜಯಪುರ, ಜು. 2: ಬಬಲೇಶ್ವರ ತಾಲೂಕಿನ ಸಂಗಾಪುರ ಗ್ರಾಮದ ಮಹಿಳೆ ದುಂಡವ್ವ ಮಾದರ ಅವರ ಸಾವಿನ ಪ್ರಕರಣವನ್ನು ಸಮಗ್ರವಾಗಿ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಂಡು ನ್ಯಾಯ ಒದಗಿಸಬೇಕೆಂದು ಆಗ್ರಹಿಸಿ ಜನವಾದಿ ಮಹಿಳಾ ಸಂಘಟನೆ ಜಿಲ್ಲಾ ಸಮಿತಿಯವರು ಅಪರ ಜಿಲ್ಲಾಧಿಕಾರಿ ಡಾ. ಔದ್ರಾಮ ಅವರಿಗೆ ಗುರುವಾರ ಮನವಿ ಸಲ್ಲಿಸಿದರು.
ಮನವಿ ಸಲ್ಲಿಸಿದ ಬಳಿಕ ಮಾತನಾಡಿದ ಮೃತ ಮಹಿಳೆಯ ಸಹೋದರ ಪವಾಡೆಪ್ಪ ಪರಸಪ್ಪ ತಳಕಡೆ, ತಮ್ಮ ಸಹೋದರಿ ದುಂಡವ್ವ ಅವರನ್ನು ಸುಮಾರು 20 ವರ್ಷಗಳ ಹಿಂದೆ ಶ್ರೀಶೈಲ್ ಮಾದರ ಅವರೊಂದಿಗೆ ವಿವಾಹ ಮಾಡಿಕೊಡಲಾಗಿತ್ತು. ಕುಟುಂಬದಲ್ಲಿ ಕೆಲವೊಮ್ಮೆ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ನಡೆದಿದ್ದರೂ ಯಾವುದೇ ಗಂಭೀರ ಸಮಸ್ಯೆ ಇರಲಿಲ್ಲ ಎಂದು ತಿಳಿಸಿದರು.
2026ರ ಜೂನ್ 13ರಂದು ದುಂಡವ್ವ ಅವರಿಗೆ ಪತಿ ಶ್ರೀಶೈಲ್ ಮಾದರ, ಪುತ್ರಿ ಸೌಜನ್ಯ ಮಾದರ ಹಾಗೂ ಕುಟುಂಬದ ಇತರ ಸದಸ್ಯರು ಹಲ್ಲೆ ನಡೆಸಿ, ರಾಡ್ ಹಾಗೂ ಸ್ಪ್ರಿಂಕ್ಲರ್ ಪೈಪ್ನಿಂದ ಥಳಿಸಿ ಕೊಲೆ ಮಾಡಿ ಬಳಿಕ ನೇಣು ಹಾಕಿರುವ ಶಂಕೆ ಇದೆ ಎಂದು ಆರೋಪಿಸಿದರು. ಘಟನೆ ನಡೆದ ಬಳಿಕ ತವರು ಮನೆಯವರು ಸ್ಥಳಕ್ಕೆ ತೆರಳಿದಾಗ ಮೃತದೇಹವನ್ನು ನೇಣಿನಿಂದ ಕೆಳಗಿಳಿಸಲಾಗಿತ್ತು. ಪ್ರಕರಣದ ಕುರಿತು ಸಮಗ್ರ ಮತ್ತು ನಿಷ್ಪಕ್ಷಪಾತ ತನಿಖೆ ನಡೆಸಿ ನ್ಯಾಯ ಒದಗಿಸಬೇಕು ಎಂದು ಅವರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಭೀಮರಾಯ ಪೂಜಾರಿ, ಜನವಾದಿ ಮಹಿಳಾ ಸಂಘಟನೆಯ ಮಾಜಿ ರಾಜ್ಯ ಉಪಾಧ್ಯಕ್ಷೆ ಸುರೇಖಾ ರಜಪೂತ್, ಜಿಲ್ಲಾ ಅಧ್ಯಕ್ಷೆ ಅನುಸೂಯ ಹಜೇರಿ, ಶಮಶಾನಬಿ ಚಡಚಣ, ಸೋಮಲಿಂಗ ಬಕಣಾಪುರ, ಶೇಕವ್ವ ಕಟ್ಟಿಮನಿ, ಭಾರತಿ ವಾಲಿ ಸೇರಿದಂತೆ ಸಂಘಟನೆಯ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ಸಂಗಾಪುರ ಮಹಿಳೆ ಸಾವಿನ ಪ್ರಕರಣ: ಸಮಗ್ರ ತನಿಖೆಗೆ ಆಗ್ರಹಿಸಿ ಮನವಿ


