ರಜಪೂತ ಅಭಿವೃದ್ಧಿ ಮಂಡಳಿ ಸ್ಥಾಪನೆಗೆ ಸರ್ಕಾರಕ್ಕೆ ಮನವಿ

ಸಪ್ತಸಾಗರ ವಾರ್ತೆ,ವಿಜಯಪುರ, ಜು. 15:
ಕರ್ನಾಟಕದಲ್ಲಿ ಶೈಕ್ಷಣಿಕ ಹಾಗೂ ಸಾಮಾಜಿಕವಾಗಿ ಹಿಂದುಳಿದಿರುವ ರಾಜಪೂತ ಸಮಾಜದ ಸಮಗ್ರ ಅಭಿವೃದ್ಧಿಗಾಗಿ ರಜಪೂತ ಅಭಿವೃದ್ಧಿ ಮಂಡಳಿ ಸ್ಥಾಪಿಸುವಂತೆ ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡುವಂತೆ ಶ್ರೀ ವೀರ ಮಹಾರಾಣಾ ಪ್ರತಾಪಸಿಂಹ ಜಿಲ್ಲಾ ರಜಪೂತ ಸೇವಾ ಅಭಿವೃದ್ಧಿ ಸಂಘದ ವತಿಯಿಂದ ಅಪರ ಜಿಲ್ಲಾಧಿಕಾರಿಗಳ ಮೂಲಕ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಲಾಯಿತು.
ಜಿಲ್ಲಾ ಅಧ್ಯಕ್ಷ ಪರಶುರಾಮ ರಜಪೂತ ಮಾತನಾಡಿ, ರಾಜ್ಯದಲ್ಲಿ ಲಕ್ಷಾಂತರ ಜನಸಂಖ್ಯೆ ಹೊಂದಿರುವ ರಾಜಪೂತ ಸಮಾಜವು ಶಿಕ್ಷಣ, ಉದ್ಯೋಗ ಹಾಗೂ ಆರ್ಥಿಕ ಕ್ಷೇತ್ರಗಳಲ್ಲಿ ಹಿಂದುಳಿದಿದೆ. ಸಮಾಜದ ಯುವಜನತೆಗೆ ಸೂಕ್ತ ಪ್ರೋತ್ಸಾಹ ಮತ್ತು ಮಾರ್ಗದರ್ಶನದ ಕೊರತೆಯಿಂದ ಅಭಿವೃದ್ಧಿಗೆ ಅಡ್ಡಿಯಾಗುತ್ತಿದೆ ಎಂದು ಹೇಳಿದರು.
ರಜಪೂತ ಸಮಾಜದ ಕುಟುಂಬ ಸಮೀಕ್ಷೆ ಹಾಗೂ ಡಿಜಿಟಲ್ ನೋಂದಣಿ ಪ್ರಕ್ರಿಯೆ ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಅದರ ಸಮಗ್ರ ಮಾಹಿತಿ ಬೆಂಗಳೂರಿನ ಹಿಂದುಳಿದ ವರ್ಗಗಳ ಕಲ್ಯಾಣ ಆಯೋಗದ ಪರಿಶೀಲನೆಯಲ್ಲಿದೆ. ಈ ಅಭಿಯಾನದಿಂದ ರಾಜ್ಯದ ರಾಜಪೂತ ಸಮಾಜ ಸಂಘಟಿತವಾಗಿದ್ದು, ಅಭಿವೃದ್ಧಿ ಮಂಡಳಿ ರಚನೆಗೆ ಪೂರಕ ವಾತಾವರಣ ನಿರ್ಮಾಣವಾಗಿದೆ ಎಂದು ತಿಳಿಸಿದರು.
ಕಲಬುರಗಿಯಲ್ಲಿ ಆರಂಭವಾಗಿರುವ ಈ ಪ್ರಕ್ರಿಯೆಗೆ ಪೂರಕವಾಗಿ ವಿಜಯಪುರ ಜಿಲ್ಲೆಯ ರಜಪೂತ ಸಮಾಜವೂ ಬೆಂಬಲ ವ್ಯಕ್ತಪಡಿಸಿದ್ದು, ಶೀಘ್ರದಲ್ಲೇ ರಜಪೂತ ಅಭಿವೃದ್ಧಿ ಮಂಡಳಿಯನ್ನು ಸ್ಥಾಪಿಸುವಂತೆ ಸರ್ಕಾರಕ್ಕೆ ಶಿಫಾರಸು ಮಾಡುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ.
ಈ ಸಂದರ್ಭದಲ್ಲಿ ಅರುಣಸಿಂಗ್ ಪರದೇಶಿ, ರಮೇಶ್ ಹಜೇರಿ, ಸಿದ್ದುಸಿಂಗ್ ರಾಜಪೂತ, ಪ್ರಶಾಂತ್ ತೆಲಿ, ಅರುಣಸಿಂಗ್ ಠಾಕೂರ್, ವಿಠ್ಠಲಸಿಂಗ್ ರಾಜಪೂತ (ಸಿದ್ದಾಪುರ), ಶಂಕರಸಿಂಗ್ ರಾಜಪೂತ, ಅಜಯಸಿಂಗ್ ಹಜೇರಿ, ಕಲ್ಯಾಣಸಿಂಗ್ ಹಜೇರಿ, ಮೋಹನ್ ರಾಜಪೂತ, ದಿಲೀಪ್ ಹಜೇರಿ, ಸುನೀಲಸಿಂಗ್ ಸದೀವಾಲೆ, ಸಂತೋಷ ರಾಜಪೂತ, ಕುಮಾರ ಠಾಕೂರ್, ಭಗವಾನಸಿಂಗ್ ಹೆರಿ, ರೂಪಸಿಂಗ್ ಓಲೆಕಾರ, ಸುಧೀರ್ ಹಜೇರಿ, ನಾರಾಯಣ ಹಜೇರಿ ಸೇರಿದಂತೆ ಸಮಾಜದ ಮುಖಂಡರು ಉಪಸ್ಥಿತರಿದ್ದರು.

Share this