ಸಪ್ತಸಾಗರ ವಾರ್ತೆ,ವಿಜಯಪುರ, ಜು.24:
ನೀಟ್ (NEET) ಪರೀಕ್ಷೆ ವಿರೋಧಿಸಿ ನವದೆಹಲಿಯ ಜಂತರ್ ಮಂತರ್‌ನಲ್ಲಿ ನಡೆಯುತ್ತಿರುವ ಬೃಹತ್ ಪ್ರತಿಭಟನೆಗೆ ಬೆಂಬಲ ಸೂಚಿಸಿ, ಭೀಮ್ ರಾಜ್ಯ ದಲಿತ್ ಸೇವಾ ಸಮಿತಿ (ರಿ.) ವಿಜಯಪುರ ಜಿಲ್ಲಾ ಘಟಕವು ಜಿಲ್ಲಾಧಿಕಾರಿಗಳ ಮೂಲಕ ಭಾರತದ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿತು.
ಮನವಿಯಲ್ಲಿ, ನೀಟ್ ಪರೀಕ್ಷೆಗೆ ಸಂಬಂಧಿಸಿದಂತೆ ದೇಶಾದ್ಯಂತ ವಿದ್ಯಾರ್ಥಿಗಳು, ಪೋಷಕರು ಹಾಗೂ ವಿವಿಧ ಸಾಮಾಜಿಕ ಸಂಘಟನೆಗಳು ವ್ಯಕ್ತಪಡಿಸುತ್ತಿರುವ ಆತಂಕವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಲಾಗಿದೆ. ವಿದ್ಯಾರ್ಥಿಗಳಿಗೆ ಸಮಾನ ಶಿಕ್ಷಣದ ಅವಕಾಶ, ಸಾಮಾಜಿಕ ನ್ಯಾಯ ಹಾಗೂ ಸಂವಿಧಾನಬದ್ಧ ಹಕ್ಕುಗಳ ರಕ್ಷಣೆಗೆ ಕೇಂದ್ರ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಾಗಿದೆ.
ರಾಷ್ಟ್ರಪತಿಗಳು ಈ ವಿಷಯವನ್ನು ವಿಶೇಷವಾಗಿ ಪರಿಗಣಿಸಿ, ವಿದ್ಯಾರ್ಥಿಗಳ ಭವಿಷ್ಯ ಮತ್ತು ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಭಾರತ ಸರ್ಕಾರಕ್ಕೆ ಅಗತ್ಯ ನಿರ್ದೇಶನ ನೀಡುವಂತೆ ಮನವಿಯಲ್ಲಿ ಕೋರಲಾಗಿದೆ.
ಜಿಲ್ಲಾಧ್ಯಕ್ಷ ನಾಗರಾಜ ಪರಶುರಾಮ ಕಬಾಡೆ ಅವರ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿ ಭವನ, ನವದೆಹಲಿಗೆ ಈ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷ ಅಪ್ಪುರಾಜ್ ನಿಮಾದಾರ, ರಾಜ್ಯ ಪ್ರಧಾನ ಕಾರ್ಯದರ್ಶಿ ಸೋಮಶೇಖರ ಪರಶುರಾಮ ಕಬಾಡೆ, ರಾಜ್ಯ ಉಪಾಧ್ಯಕ್ಷ ವಿಜಯಕುಮಾರ ನಿಮಾದಾರ, ಜಿಲ್ಲಾ ಗೌರವಾಧ್ಯಕ್ಷ ಕಿರಣಕುಮಾರ ಅಲಿಯಾಬಾದ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಕಾಸೆ, ರಾಜ್ಯ ಮಹಿಳಾ ಅಧ್ಯಕ್ಷೆ ನೀಲಾಂಬಿಕಾ ಕಟ್ಟಿಮನಿ, ಜಿಲ್ಲಾ ಮಹಿಳಾ ಅಧ್ಯಕ್ಷೆ ಶಿಲ್ಪಾ ಮೇತ್ರಿ, ಜಿಲ್ಲಾ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಅಬ್ದುಲ್ ಹಕ್ ಇನಾಮದಾರ, ನಗರ ಘಟಕದ ಅಧ್ಯಕ್ಷ ರವಿಚಂದ್ರ ಶಹಾಪುರ, ಚಂದ್ರಶೇಖರ ಕಟ್ಟಿಮನಿ, ಸಾಹೇಬಲಾಲ ಹಿಪ್ಪರಗಿ, ಎಂ.ಎಂ. ಖಾನ್, ಸಂತೋಷ ಕಟ್ಟಿಮನಿ, ಹುಸೇನ ಹಿಪ್ಪರಗಿ, ತಿಕೋಟಾ ತಾಲೂಕು ಅಧ್ಯಕ್ಷ ರವಿ ರಾಠೋಡ್, ವಿಜಯಪುರ ತಾಲೂಕು ಅಧ್ಯಕ್ಷ ಸುಮಿತ ಮಾನೆ ಸೇರಿದಂತೆ ಭೀಮ್ ರಾಜ್ಯ ದಲಿತ್ ಸೇವಾ ಸಮಿತಿಯ ಪದಾಧಿಕಾರಿಗಳು, ಸದಸ್ಯರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ನೀಟ್ ಪರೀಕ್ಷೆ ರದ್ದತಿಗೆ ಆಗ್ರಹಿಸಿ ರಾಷ್ಟ್ರಪತಿಗಳಿಗೆ ಮನವಿ: ಜಂತರ್ ಮಂತರ್ ಪ್ರತಿಭಟನೆಗೆ ಭೀಮ್ ರಾಜ್ಯ ದಲಿತ್ ಸೇವಾ ಸಮಿತಿ ಬೆಂಬಲ


