Merakify.ai ವೇದಿಕೆ ಉದ್ಘಾಟನೆ; ತಂತ್ರಜ್ಞಾನ ಕ್ಷೇತ್ರದಲ್ಲಿ ಹೊಸ ಅಧ್ಯಾಯ ಆರಂಭ
ಸಪ್ತಸಾಗರ ವಾರ್ತೆ,ವಿಜಯಪುರ, ಜು. 28:
ಯುವ ಪ್ರತಿಭೆಗಳು ನವೋದ್ಯಮಗಳ ಮೂಲಕ ತಂತ್ರಜ್ಞಾನ ಕ್ಷೇತ್ರದಲ್ಲಿ ಹೊಸ ಅಧ್ಯಾಯ ಬರೆಯುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಹೇಳಿದರು.
ನಗರದಲ್ಲಿ ಸೋಮವಾರ ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ ಅವರ ಪುತ್ರಿ ಸಾನ್ವಿ ಪಾಟೀಲ ಹಾಗೂ ಅವರ ತಂಡ ಆರಂಭಿಸಿರುವ ಪ್ರವಾಹ ಲ್ಯಾಬ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ Merakify.ai ಕೃತಕ ಬುದ್ಧಿಮತ್ತೆ (AI) ಆಧಾರಿತ ಆನ್‌ಲೈನ್ ವೇದಿಕೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇಂತಹ ಕೃತಕ ಬುದ್ಧಿಮತ್ತೆ ವೇದಿಕೆಗಳು ಯುವ ಪ್ರತಿಭೆಗಳ ಕನಸುಗಳಿಗೆ ಹೊಸ ದಿಕ್ಕು ನೀಡುತ್ತವೆ. ಕಥೆಗಾರರು, ಸಿನಿಮಾ ನಿರ್ಮಾಪಕರು, ಲೇಖಕರು, ಸೃಜನಶೀಲರು ಹಾಗೂ ಉದ್ಯಮಿಗಳಿಗೆ ಈ ವೇದಿಕೆ ಅತ್ಯಂತ ಉಪಯುಕ್ತವಾಗಿದ್ದು, ಮನಸ್ಸಿನಲ್ಲಿರುವ ಕಲ್ಪನೆಗಳನ್ನು ಗುಣಮಟ್ಟದ ವಿಡಿಯೊಗಳಾಗಿ ಪರಿವರ್ತಿಸುವ ಸಾಮರ್ಥ್ಯ ಹೊಂದಿದೆ ಎಂದು ಹೇಳಿದರು.
ಶಿಕ್ಷಣ, ಜಾಹೀರಾತು, ಉದ್ಯಮ ಹಾಗೂ ಸಾಮಾಜಿಕ ಜಾಲತಾಣಗಳ ಬಳಕೆದಾರರಿಗೆ ಅಗತ್ಯವಿರುವ ವಿವಿಧ ರೀತಿಯ ವಿಡಿಯೊ ವಿಷಯಗಳನ್ನು ಸುಲಭವಾಗಿ ಸೃಷ್ಟಿಸಲು ಈ ವೇದಿಕೆ ನೆರವಾಗಲಿದೆ ಎಂದು ಸಚಿವರು ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ ಮಾತನಾಡಿ, ಯುವಕರ ಈ ವಿನೂತನ ಪ್ರಯತ್ನ ಶ್ಲಾಘನೀಯವಾಗಿದ್ದು, ಸಂಸ್ಥೆ ತಂತ್ರಜ್ಞಾನ ಕ್ಷೇತ್ರದಲ್ಲಿ ಮಹತ್ತರ ಸಾಧನೆ ಮಾಡಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ Merakify.ai ಮೂಲಕ ಬಂಥನಾಳ ಸಂಗನಬಸವ ಶಿವಯೋಗಿಗಳು, ಶಿಕ್ಷಣ ಪ್ರೇಮಿ ದಿವಂಗತ ಡಾ. ಬಿ.ಎಂ. ಪಾಟೀಲ ಹಾಗೂ ಬಿ.ಎಲ್.ಡಿ.ಇ. ಅಧ್ಯಕ್ಷ ಎಂ.ಬಿ. ಪಾಟೀಲ ಅವರ ಜೀವನಾಧಾರಿತ ಎಐ ಕಿರುಚಿತ್ರಗಳ ಪ್ರದರ್ಶನಕ್ಕೂ ಸಚಿವರು ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಬೆಕ್ಕಿನ ಕಲ್ಮಠ-ಶಿವಮೊಗ್ಗ ಜಗದ್ಗುರು ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳು, ಸಾಗರದ ಸಂಸ್ಥಾನ ಮಠದ ಜಡೆ ಡಾ. ಮಹಾಂತ ಸ್ವಾಮಿಗಳು, ವಿಜಯಪುರ ಶಾಂತಾಶ್ರಮದ ಶ್ರೀ ಅಭಿನವ ಸಿದ್ಧಾರೂಢ ಸ್ವಾಮಿಗಳು, ನಿಡೋಣಿ ಎರಡೆತ್ತಿನಮಠದ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು, ಮಣಕವಾಡ ದೇವ ಮಂದಿರ ಮಠದ ಶ್ರೀ ಅಭಿನವ ಮೃತ್ಯುಂಜಯ ಸ್ವಾಮಿಗಳು, ಮಾಜಿ ಶಾಸಕ ಪ್ರೊ. ರಾಜು ಆಲಗೂರ, ವಿಡಿಎ ಅಧ್ಯಕ್ಷ ಡಾ. ಗಂಗಾಧರ ಸಂಬಣ್ಣಿ, ಹಮೀದ್ ಮುಶ್ರಿಫ್, ಸಂಸ್ಥಾಪಕಿ ಸಾನ್ವಿ ಪಾಟೀಲ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.


