ಸಚಿವ ಸ್ಥಾನ ಅತೃಪ್ತಿ: ರಾಜೀನಾಮೆ ಕೊಟ್ಟರೆ ಕ್ಷಣದಲ್ಲೇ ಅಂಗೀಕಾರ – ಸಿಎಂ ಡಿ.ಕೆ. ಶಿವಕುಮಾರ್

ಸಪ್ತಸಾಗರ ವಾರ್ತೆ,ಬೆಂಗಳೂರು, ಆ. 4: ಸಚಿವ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಅಸಮಾಧಾನಗೊಂಡು ರಾಜೀನಾಮೆ ನೀಡಲು ಮುಂದಾಗಿರುವ ಶಾಸಕರಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಖಡಕ್ ಸಂದೇಶ ನೀಡಿದ್ದಾರೆ. “ರಾಜೀನಾಮೆ ಕೊಡುವವರನ್ನು ಯಾರೂ ತಡೆಯಲು ಸಾಧ್ಯವಿಲ್ಲ. ಯಾರಾದರೂ ರಾಜೀನಾಮೆ ನೀಡಿದರೆ ಕ್ಷಣದಲ್ಲೇ ಅಂಗೀಕರಿಸುತ್ತೇನೆ. ರಾಜಕೀಯದಲ್ಲಿ ತಾಳ್ಮೆ ಅತ್ಯಂತ ಮುಖ್ಯ, ಪಕ್ಷವೇ ಮೊದಲ ಆದ್ಯತೆ” ಎಂದು ಹೇಳಿದರು.
ಸದಾಶಿವನಗರ ನಿವಾಸದ ಬಳಿ ಮಂಗಳವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಈ ಹಿಂದೆ ನನಗೂ, ಪರಮೇಶ್ವರ್ ಅವರಿಗೂ ಧರಂಸಿಂಗ್ ಹಾಗೂ ಸಿದ್ದರಾಮಯ್ಯ ಅವರ ಸಂಪುಟದಲ್ಲಿ ಸಚಿವ ಸ್ಥಾನ ಸಿಗಲಿಲ್ಲ. ಆಗ ನಾವು ರಾಜೀನಾಮೆ ನೀಡಲಿಲ್ಲ. ವೀರೇಂದ್ರ ಪಾಟೀಲರ ಅವಧಿಯಲ್ಲಿ ಬಂಗಾರಪ್ಪ ಅವರಿಗೂ ಸಚಿವ ಸ್ಥಾನ ಇರಲಿಲ್ಲ. ನಂತರ ಅವರು ಮುಖ್ಯಮಂತ್ರಿಯಾದರು. ಮಲ್ಲಿಕಾರ್ಜುನ ಖರ್ಗೆ ಅವರಿಗೂ ಒಂದು ಹಂತದಲ್ಲಿ ಸಚಿವ ಸ್ಥಾನ ದೊರಕಿರಲಿಲ್ಲ. ಆದ್ದರಿಂದ ತಾಳ್ಮೆಯಿಂದ ರಾಜಕೀಯ ನಡೆಸಬೇಕು” ಎಂದು ಹೇಳಿದರು.
ನಿಗಮ-ಮಂಡಳಿಗಳ ಅಧ್ಯಕ್ಷರು ಸೇರಿದಂತೆ ವಿವಿಧ ಹುದ್ದೆಗಳಲ್ಲಿ ಇರುವವರು ರಾಜೀನಾಮೆ ನೀಡುವಂತೆ ಸೂಚಿಸಲಾಗುವುದು. ಮೊದಲು ಪಕ್ಷದ ಕಾರ್ಯಕರ್ತರಿಗೆ ಅವಕಾಶ ನೀಡಲಾಗುವುದು. ನಂತರ ಶಾಸಕರೊಂದಿಗೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಬರ ಪರಿಸ್ಥಿತಿ ಅಧ್ಯಯನಕ್ಕೆ ಸಚಿವರಿಗೆ ಸೂಚನೆ

ರಾಜ್ಯದ ನೂತನ ಸಚಿವರು ತಮಗೆ ಹಂಚಿಕೆ ಮಾಡಿರುವ ಜಿಲ್ಲೆಗಳಿಗೆ ತಕ್ಷಣ ಭೇಟಿ ನೀಡಿ ಅತಿವೃಷ್ಟಿ ಹಾಗೂ ಅನಾವೃಷ್ಟಿ ಪರಿಸ್ಥಿತಿಯನ್ನು ಪರಿಶೀಲಿಸಬೇಕು ಎಂದು ಸೂಚಿಸಿರುವುದಾಗಿ ಸಿಎಂ ಹೇಳಿದರು. ಸ್ಥಳ ಪರಿಶೀಲನೆಗೆ ಅಗತ್ಯ ಎಲ್ಲ ವ್ಯವಸ್ಥೆ ಕಲ್ಪಿಸುವಂತೆ ಅಧಿಕಾರಿಗಳಿಗೂ ನಿರ್ದೇಶನ ನೀಡಲಾಗಿದೆ ಎಂದರು.

Share this