ಸಪ್ತಸಾಗರ ವಾರ್ತೆ,ವಿಜಯಪುರ, ಆ.27:
16 ವರ್ಷದ ಅಪ್ರಾಪ್ತ ಬಾಲಕಿಯನ್ನು ಪ್ರೀತಿಸುವುದಾಗಿ ಹಾಗೂ ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರವೆಸಗಿ ಬಳಿಕ ಕೊಲೆ ಮಾಡಿದ ಪ್ರಕರಣದಲ್ಲಿ ಆರೋಪಿತನಿಗೆ ವಿಶೇಷ ಪೋಕ್ಸೋ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ ₹1.72 ಲಕ್ಷ ದಂಡ ವಿಧಿಸಿದೆ.
ಮುದ್ದೇಬಿಹಾಳ ತಾಲೂಕಿನ ಬನೋಶಿ ಗ್ರಾಮದ ಮಾಳಿಂಗರಾಯ ದ್ಯಾಮಪ್ಪ ದಂಡೋಜಿ (21) ಶಿಕ್ಷೆಗೆ ಗುರಿಯಾದ ಆರೋಪಿ.
ಪ್ರಕರಣದ ವಿವರದಂತೆ, ಆರೋಪಿಯು ಬಾಲಕಿಯನ್ನು ಪ್ರೀತಿಸುವುದಾಗಿ ಹಾಗೂ ಮದುವೆಯಾಗುವುದಾಗಿ ನಂಬಿಸಿ ಬನೋಶಿ ಗ್ರಾಮದ ನಾಗನಗೌಡ ದ್ಯಾಮಣ್ಣ ಹೊನ್ನಳ್ಳಿ ಅವರ ಜಮೀನಿನತ್ತ ಕರೆದುಕೊಂಡು ಹೋಗಿದ್ದ. ಅಲ್ಲಿ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದಾನೆ ಎಂದು ಅಭಿಯೋಜನೆ ಆರೋಪಿಸಿತ್ತು.
ಬಾಲಕಿಯ ಕುಟುಂಬದವರು ಆಕೆಗೆ ಬೇರೆ ಯುವಕನೊಂದಿಗೆ ಮದುವೆ ಮಾಡಲು ಮುಂದಾಗಿರುವ ವಿಚಾರ ತಿಳಿದ ಬಳಿಕ, ಆರೋಪಿಯು ಆಕೆಯನ್ನು ಮದುವೆಯಾಗುವುದಾಗಿ ಮತ್ತಷ್ಟು ನಂಬಿಸಿದ್ದ. ಬಳಿಕ ಇಬ್ಬರೂ ಆತ್ಮಹತ್ಯೆ ಮಾಡಿಕೊಳ್ಳೋಣ ಎಂದು ಬಾಲಕಿಗೆ ಪ್ರಚೋದನೆ ನೀಡಿ, ಜಮೀನಿನಲ್ಲಿದ್ದ ಬೇವಿನ ಮರಕ್ಕೆ ಹಗ್ಗ ಕಟ್ಟಿ ನೇಣು ಹಾಕಿಕೊಳ್ಳುವಂತೆ ಮಾಡಿದ್ದಾನೆ. ಬಾಲಕಿ ನೇಣಿಗೆ ಸಿಲುಕಿದ ಬಳಿಕ ಆರೋಪಿ ತನ್ನ ಕುತ್ತಿಗೆಯಲ್ಲಿದ್ದ ಹಗ್ಗದ ಗಂಟು ಬಿಚ್ಚಿಕೊಂಡು ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಪ್ರಕರಣದ ತನಿಖೆಯಲ್ಲಿ ತಿಳಿದುಬಂದಿದೆ.
ಮರುದಿನ ಬಾಲಕಿಯನ್ನು ಹುಡುಕುತ್ತಿದ್ದ ಸಂದರ್ಭದಲ್ಲಿ ಜಮೀನಿನಲ್ಲಿ ಆಕೆಯ ಶವ ಪತ್ತೆಯಾಗಿದ್ದು, ಕುಟುಂಬಸ್ಥರು ಮುದ್ದೇಬಿಹಾಳ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ತನಿಖೆ ನಡೆಸಿದ ಪೊಲೀಸರು ಆರೋಪಿಯ ವಿರುದ್ಧ ಅತ್ಯಾಚಾರ ಹಾಗೂ ಕೊಲೆ ಆರೋಪಗಳಿಗೆ ಸಂಬಂಧಿಸಿದ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ವಿಜಯಪುರದ ವಿಶೇಷ ಪೋಕ್ಸೋ ನ್ಯಾಯಾಲಯದ ನ್ಯಾಯಾಧೀಶೆ ಕು. ಸಿಂಧು ಪೋತದಾರ ಅವರು ಅಭಿಯೋಜನೆ ಪರ ಸಾಕ್ಷ್ಯ-ಪುರಾವೆಗಳನ್ನು ಪರಿಶೀಲಿಸಿ ಆರೋಪಗಳು ರುಜುವಾತಾಗಿವೆ ಎಂದು ತೀರ್ಮಾನಿಸಿದರು. ಅದರಂತೆ, ಆ.15, 2026ರಂದು ಆರೋಪಿಗೆ ಜೀವಾವಧಿ ಶಿಕ್ಷೆ ಹಾಗೂ ₹1,72,000 ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ಸರ್ಕಾರದ ಪರ ವಿಶೇಷ ಅಭಿಯೋಜಕ ಎ.ಜಿ. ಹಗರಗುಂಡ ಅವರು ವಾದ ಮಂಡಿಸಿದ್ದರು. ಪ್ರಕರಣದ ತನಿಖೆಯನ್ನು ಬ.ಬಾಗೇವಾಡಿ ಡಿವೈಎಸ್‌ಪಿ ನಂದಗಾಂವಿ ಹಾಗೂ ಡಿಸಿಆರ್‌ಬಿ ವಿಜಯಪುರದ ಡಿವೈಎಸ್‌ಪಿ ಮುರಗೊಂಡ ಅವರು ನಡೆಸಿದ್ದರು.
Editor
Rudrappa B Asangi
Editor
Managing Editor
Chetan Asangi
Managing Editor


