ಭೀಮಾನದಿ ಪ್ರವಾಹ ಪೀಡಿತ ಗ್ರಾಮಗಳಿಗೆಶಾಸಕ, ಡಿಸಿ ಭೇಟಿ, ಪರಿಶೀಲನೆ: ಸಂತ್ರಸ್ಥರ ಸಮಸ್ಯೆ ಆಲಿಕೆ

ಸಪ್ತಸಾಗರ ವಾರ್ತೆ ವಿಜಯಪುರ, ಸೆ.೨೭: ಭೀಮಾನದಿ ಪ್ರವಾಹಕ್ಕೆ ಒಳಗಾಗಿರುವ ಸಿಂದಗಿ ಮತಕ್ಷೇತ್ರದ ವಿವಿಧ ಗ್ರಾಮಗಳಿಗೆ ಕ್ಷೇತ್ರದ ಶಾಸಕ ಅಶೋಕ ಮನಗೂಳಿ, ವಿಜಯಪುರ ಜಿಲ್ಲಾಧಿಕಾರಿ ಡಾ. ಆನಂದ ಕೆ. ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಿಷಿ ಆನಂದ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿ, ಸಂತ್ರಸ್ಥರ ಸಮಸ್ಯೆಗಳನ್ನು ಆಲಿಸಿದರು.
ಶನಿವಾರ ಭೀಮಾನದಿ ಪ್ರವಾಹ ಪೀಡಿತ ವಿವಿಧ ಗ್ರಾಮಗಳಿಗೆ ಭೇಟಿ ನೀಡಿದ ಅವರು, ಪ್ರವಾಹಕ್ಕೊಳಗಾಗಿರುವ ಪ್ರದೇಶಗಳಲ್ಲಿ ಪರಿಹಾರ ದೊರಕಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ತಿಳಿಸಿದ ಶಾಸಕರು, ಈ ಕಾರ್ಯವನ್ನು ಪ್ರಥಮಾದ್ಯತೆ ಮೇಲೆ ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿ ಪರಿಹಾರ ಕಾರ್ಯ ಕೈಗೊಳ್ಳುವಂತೆ ಅವರು ತಿಳಿಸಿದರು.
ಈ ಸಂದರ್ಭದಲ್ಲಿ ವಿವಿಧ ಸಂತ್ರಸ್ಥರ ಸಮಸ್ಯೆಗಳನ್ನು ಆಲಿಸಿ, ಪರಿಹಾರಕ್ಕೆ ಭರವಸೆ ನೀಡಿದರು.
ತಾಲೂಕಿನ ದೇವರನಾವದಗಿ ಗ್ರಾಮ ಪಂಚಾಯತಿಯ ಕುಮಸಗಿ ಗ್ರಾಮದ ಸರಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಮತ್ತು ಶ್ರೀ ಕಲ್ಲಾಲಿಂಗೆಶ್ವರ ಪ್ರಾಥಮಿಕ ಶಾಲೆಯಲ್ಲಿ ಹಾಗೂ ದೇವಣಗಾವ ಪ್ರಾಥಮಿಕ ಶಾಲೆಯಲ್ಲಿ ತೆರೆಯಲಾದ ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿ, ಕಾಳಜಿ ಕೇಂದ್ರಗಳಲ್ಲಿ ಕಲ್ಪಿಸಿರುವ ಸೌಲಭ್ಯಗಳ ಕುರಿತು ಪರಿಶೀಲನೆ ನಡೆಸಿದರು. ಅಲ್ಲಿನ ಸಂತ್ರಸ್ಥರೊಂದಿಗೆ ಮಾತನಾಡಿ, ಕಾಳಜಿ ಕೇಂದ್ರಗಳಲ್ಲಿ ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗಿದೆ.ಯಾರು ಸಹ ಭಯ ಪಡುವ ಅವಶ್ಯಕತೆ ಇಲ್ಲ. ಜಿಲ್ಲಾಡಳಿತ ನಿಮ್ಮ ಜೊತೆಗಿದ್ದು, ಅಗತ್ಯ ಸಹಕಾರ ಒದಗಿಸುವಂತೆ ಕೋರಿ, ಸಂತ್ರಸ್ಥರಿಗೆ ಧೈರ್ಯ ತುಂಬಿದ ಜಿಲ್ಲಾಧಿಕಾರಿಗಳು, ಪ್ರವಾಹ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ಜಿಲ್ಲಾಡಳಿತ ಸನ್ನದ್ಧವಾಗಿದ್ದು, ಯಾವುದೇ ಜನ ಮತ್ತು ಜಾನುವಾರಗಳ ಪ್ರಾಣ ಹಾನಿಯಾಗದಂತೆ ಎಲ್ಲಾ ರೀತಿಯ ಸಕಲ ಸುರಕ್ಷತಾ ಕ್ರಮಗಳನ್ನು ಜಿಲ್ಲಾಡಳಿತದಿಂದ ಕೈಗೊಳ್ಳಲಾಗಿದೆ. ಈವರೆಗೆ ಜಿಲ್ಲೆಯ ಆಲಮೇಲ ತಾಲೂಕಿನಲ್ಲಿ ೦೯, ಇಂಡಿ ತಾಲೂಕಿನಲ್ಲಿ ೦೭ ಸೇರಿದಂತೆ ಒಟ್ಟು ೧೬ ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದ್ದು, ಈ ಕಾಳಜಿ ಕೇಂದ್ರಗಳಲ್ಲಿ ೮೬೭ ಜನರಿಗೆ ಆಶ್ರಯ ಒದಗಿಸಲಾಗಿದೆ. ಆಯಾ ಕಾಳಜಿ ಕೇಂದ್ರಗಳಿಗೆ ಓರ್ವ ನೊಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ. ಪ್ರವಾಹ ಪರಿಸ್ಥಿತಿಯನ್ನು ಎಲ್ಲರೂ ಒಟ್ಟಾಗಿ ಸಮರ್ಥವಾಗಿ ಎದುರಿಸಲು, ಅಧಿಕಾರಿಗಳು ಸಹ ಜವಾಬ್ದಾರಿಯುತವಾಗಿ ಸಮರ್ಪಕವಾಗಿ ಕಾರ್ಯನಿರ್ವಹಿಸುವಂತೆ ಅವರು ಸೂಚನೆ ನೀಡಿದರು.
ಸುಮಾರು ೫೩ ವರ್ಷದ ಹಳೆಯದಾದ ದೇವಣಗಾವ ಬ್ರಿಡ್ಜಗೆ ಭೇಟಿ ನೀಡಿ, ಈ ಬ್ರಿಡ್ಜ್ ಹಳೆಯದಾಗಿರುವದರಿಂದ ಸಂಚಾರಕ್ಕೆ ತೊಂದರೆಯಾಗುತ್ತಿದ್ದು, ದುರಸ್ತಿಗೆ ಸಾರ್ವಜನಿಕರು ಒತ್ತಾಯಿಸಿದ ಹಿನ್ನಲೆಯಲ್ಲಿ ಶೀಘ್ರವೇ ದುರಸ್ತಿ ಕಾರ್ಯ ಕೈಗೊಳ್ಳುವುದಾಗಿ ಶಾಸಕರು ಭರವಸೆ ನೀಡಿದರು.
ನಿರಂತರವಾಗಿ ಸುರಿದ ಮಳೆಯಿಂದಾಗಿ ಅನೇಕ ಮನೆ ಮತ್ತು ಬೆಳೆಹಾನಿ ಸಂಭವಿಸಿರುವ ಕುರಿತು ಸಾರ್ವಜನಿಕರು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಾಗ, ಕೂಡಲೇ ಬೆಳೆ ಸಮೀಕ್ಷೆ ಕಾರ್ಯ ಕೈಗೊಂಡು ಸಮೀಕ್ಷಾ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಈ ಸಂದರ್ಭದಲ್ಲಿ ತಿಳಿಸಿದರು.
ಈ ಸಂದರ್ಭದಲ್ಲಿ ಇಂಡಿ ಉಪವಿಬಾಗಾಧಿಕಾರಿ ಅನುರಾಧಾ ವಸ್ತ್ರದ, ತಾಲೂಕಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ರಾಮು ಅಗ್ನಿ, ಕರೆಪ್ಪ ಬೆಳ್ಳಿ ಸೇರಿದಂತೆ ತಾಲೂಕು ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು, ಅಭಿವೃದ್ಧಿ ಅಧಿಕಾರಿಗಳು, ಸಂತ್ರಸ್ತರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

ಸೊನ್ನ ಬ್ಯಾರೇಜಿಗೆ ಭೇಟಿ ಪರಿಶೀಲನೆ :
ಸೊನ್ನ ಬ್ಯಾರೇಜಿಗೆ ಭೇಟಿ ನೀಡಿ ನೀರಿನ ಪ್ರವಾಹ ಪರಿಸ್ಥಿತಿ ಮಾಹಿತಿ ಪಡೆದುಕೊಂಡರು ಜಿಲ್ಲಾಡಳಿತದೊಂದಿಗೆ ಸತತ ಸಂಪರ್ಕದಲ್ಲಿದ್ದು ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿ ಡಾ.ಆನಂದ ಕೆ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಷಿ ಆನಂದ, ಜಂಟಿ ಕೃಷಿ ನಿರ್ದೇಶಕ ಶಿವನಗೌಡ ಪಾಟೀಲ ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು.

Share