ಸಪ್ತಸಾಗರ ವಾರ್ತೆ,ಹಾವೇರಿ, ಜು. 9: ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ಪಟ್ಟಣದಲ್ಲಿ ಹತ್ಯೆಯಾದ ಹಿಂದೂ ವ್ಯಾಪಾರಿ ಶಿವಾಜಿರಾವ್ ಬೈರೋಜಿರಾವ್ ಅವರ ಕುಟುಂಬಕ್ಕೆ ಹಾಗೂ ಹಾನಗಲ್ಲ ತಾಲ್ಲೂಕಿನ ನರೇಗಲ್ ಗ್ರಾಮದಲ್ಲಿ ಹಲ್ಲೆಗೊಳಗಾದ ಹಿಂದೂ ಕಾರ್ಯಕರ್ತರ ಮನೆಗಳಿಗೆ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಭೇಟಿ ನೀಡಿ ಒಟ್ಟು ₹4.50 ಲಕ್ಷ ಆರ್ಥಿಕ ನೆರವು ನೀಡಿದರು.
ರಟ್ಟಿಹಳ್ಳಿಯಲ್ಲಿ ನಡೆದ ಘಟನೆಯಲ್ಲಿ ಮೃತಪಟ್ಟ ಶಿವಾಜಿರಾವ್ ಬೈರೋಜಿರಾವ್ ಅವರ ನಿವಾಸಕ್ಕೆ ಭೇಟಿ ನೀಡಿದ ಯತ್ನಾಳ್, ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿ ₹2.50 ಲಕ್ಷ ಪರಿಹಾರ ಹಸ್ತಾಂತರಿಸಿದರು.
ಇದೇ ವೇಳೆ ಹಾನಗಲ್ಲ ತಾಲ್ಲೂಕಿನ ನರೇಗಲ್ ಗ್ರಾಮದಲ್ಲಿ ಕಾರಹುಣ್ಣಿಮೆ ಅಂಗವಾಗಿ ಹೋರಿ ಓಡಿಸುವ ಸಂದರ್ಭದಲ್ಲಿ ಪಟಾಕಿ ಸಿಡಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ಘರ್ಷಣೆಯಲ್ಲಿ ಗಾಯಗೊಂಡ ಹಿಂದೂ ಕಾರ್ಯಕರ್ತರ ಮನೆಗಳಿಗೆ ಭೇಟಿ ನೀಡಿ, ಅವರ ಆರೋಗ್ಯ ವಿಚಾರಿಸಿ ಚಿಕಿತ್ಸೆಗಾಗಿ ₹2 ಲಕ್ಷ ನೆರವು ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಯತ್ನಾಳ್, “ಕ್ಷುಲ್ಲಕ ಕಾರಣಕ್ಕೆ ವ್ಯಾಪಾರಿ ಶಿವಾಜಿರಾವ್ ಅವರು ಪ್ರಾಣ ಕಳೆದುಕೊಂಡಿರುವುದು ಅತ್ಯಂತ ದುಃಖಕರ. ಹಬ್ಬ ಆಚರಿಸುತ್ತಿದ್ದ ಹಿಂದೂ ಕಾರ್ಯಕರ್ತರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿರುವುದು ಖಂಡನೀಯ. ಇಂತಹ ಘಟನೆಗಳು ಕಾನೂನಿನ ಭಯ ಇಲ್ಲದ ವಾತಾವರಣದಲ್ಲಿ ನಡೆಯುತ್ತಿವೆ. ಪ್ರಕರಣಗಳು ದಾಖಲಾಗಿದ್ದರೂ ನಂತರ ಸರ್ಕಾರ ಅವುಗಳನ್ನು ಹಿಂಪಡೆಯುವ ಮೂಲಕ ತಪ್ಪು ಸಂದೇಶ ನೀಡುತ್ತಿದೆ” ಎಂದು ಆರೋಪಿಸಿದರು.
ಹಿಂದೂ ಕಾರ್ಯಕರ್ತರ ಸಂಕಷ್ಟದ ಸಂದರ್ಭದಲ್ಲಿ ಅವರ ಮನೆಗಳಿಗೆ ಭೇಟಿ ನೀಡಿ ಆರ್ಥಿಕ ನೆರವು ನೀಡಿದ ಶಾಸಕ ಯತ್ನಾಳ್ ಅವರ ಕ್ರಮಕ್ಕೆ ಬೆಂಬಲಿಗರಿಂದ ಮೆಚ್ಚುಗೆ ವ್ಯಕ್ತವಾಯಿತು. ಈ ಸಂದರ್ಭದಲ್ಲಿ ನೂರಾರು ಹಿಂದೂ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ನರೇಗಲ್–ರಟ್ಟಿಹಳ್ಳಿ ಹಿಂದೂ ಕುಟುಂಬಗಳಿಗೆ ₹4.50 ಲಕ್ಷ ಆರ್ಥಿಕ ನೆರವು: ಶಾಸಕ ಬಸನಗೌಡ ಪಾಟೀಲ ಯತ್ನಾಳ್


