ಸಪ್ತಸಾಗರ ವಾರ್ತೆ,ವಿಜಯಪುರ, ಮೇ. 12 :
ಭೀಮಾ ಹಾಗೂ ಕೃಷ್ಣಾ ನದಿಗಳ ನೀರು ಬಳಕೆಗೆ ಸಂಬಂಧಿಸಿದಂತೆ ಇರುವ ಗೊಂದಲವನ್ನು ಪರಿಹರಿಸಿಕೊಂಡು ಸೌಹಾರ್ದತೆಯ ಮೂಲಕ ಶಾಶ್ವತ ಪರಿಹಾರ ಕಂಡುಕೊಳ್ಳಲು ವಿಜಯಪುರ, ಬೆಳಗಾವಿ, ಕಲಬುರ್ಗಿ ಜಿಲ್ಲೆಯ ಶಾಸಕರು ಸೇರಿದಂತೆ ಉನ್ನತ ಮಟ್ಟದ ನಿಯೋಗವನ್ನು ಮಹಾರಾಷ್ಟ್ರ ಸರ್ಕಾರವನ್ನು ಭೇಟಿ ಮಾಡುವ ಮಹತ್ವದ ಕಾರ್ಯ ಕೈಗೊಳ್ಳಲಾಗುವುದು ಎಂದು ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾನವೀಯತೆ ಹಾಗೂ ಸಹೋದರತೆಯ ಭಾವದೊಂದಿಗೆ ಈ ಬಾರಿ ಮಹಾರಾಷ್ಟ್ರ ಸರ್ಕಾರ ಉಜನಿ ಜಲಾಶಯದಿಂದ 16 ಸಾವಿರ ಕ್ಯುಸೆಕ್ಸ್ ನೀರನ್ನು ಹರಿಸಿದೆ, ಇದು ಮಾನವೀಯ ನೆಲೆಗಟ್ಟಿನಲ್ಲಿ ಮಹಾರಾಷ್ಟ್ರ ಸರ್ಕಾರ ನೀರು ಹರಿಸಿದೆ. ಈ ಹಿನ್ನೆಲೆಯಲ್ಲಿ ಪ್ರತಿ ಬಾರಿಯೂ ಈ ನೀರು ಬಿಡಿಸುವ ಕಾರ್ಯದಿಂದ ಅವಲಂಬಿತವಾಗದೇ ಕೃಷ್ಣಾ ಹಾಗೂ ಭೀಮಾ ನದಿಗಳಿಗೆ ಸಂಬಂಧಿಸಿದಂತೆ ಕುಡಿಯುವ ನೀರಿನ ಯೋಜನೆಗಳು ಅನುಷ್ಠಾನಗೊಂಡರೆ ಮಾತ್ರ ಶಾಶ್ವತ ಪರಿಹಾರ. ಈ ಹಿನ್ನೆಲೆಯಲ್ಲಿ ಶಾಸಕರನ್ನೊಳಗೊಂಡ ನಿಯೋಗ ಶೀಘ್ರದಲ್ಲಿಯೇ ಉನ್ನತ ಮಟ್ಟದ ನಿಯೋಗ ಮಹಾರಾಷ್ಟ್ರ ಸರ್ಕಾರಕ್ಕೆ ಭೇಟಿ ಮಾಡಲಾಗುವುದು ಎಂದರು.
ಇಂಡಿ ಭಾಗದಲ್ಲಿ ಪ್ರತಿಬಾರಿಯೂ ಕುಡಿಯುವ ನೀರಿನ ಸಮಸ್ಯೆ ದೊಡ್ಡ ಪ್ರಮಾಣದಲ್ಲಿ ಸೃಷ್ಟಿಯಾಗುತ್ತಿತ್ತು. ಈಗ ಮಹಾರಾಷ್ಟ್ರ ಸರ್ಕಾರ ನೀರು ಹರಿಸದೇ ಹೋಗಿದ್ದರೆ ದೊಡ್ಡ ನೀರಿನ ಅಭಾವ ಎದುರಾಗುತ್ತಿತ್ತು. ಈಗ ಮಹಾರಾಷ್ಟ್ರ ಸರ್ಕಾರ ಉಜನಿ ಡ್ಯಾಂ ಮೂಲಕ ಸೊಲ್ಲಾಪೂರಕ್ಕಾಗಿ ಕುಡಿಯುವ ನೀರಿನ ಪೂರೈಕೆ ಮಾಡುವುದರಿಂದ ಆ ನೀರಿನ ಮೂಲದ ಕೊರತೆಯೂ ಅಧಿಕವಾಗಿತ್ತು, ಆದರೆ ಸಹೋದರ ಭಾವನೆಯಿಂದ ಮಹಾರಾಷ್ಟ್ರ ಸರ್ಕಾರ ಭೀಮಾ ನದಿಗೆ ನೀರು ಹರಿಸಿದೆ ಎಂದರು.
ಸಾಂಗ್ಲಿ, ಜತ್ತ ಮೊದಲಾದವುಗಳಿಗೆ ಕುಡಿಯುವ ನೀರು ಪೂರೈಕೆಗೆ ಸಂಬಂಧಿಸಿದ ಮಹಾರಾಷ್ಟ್ರ ಸರ್ಕಾರ ಮನವಿ ಮಾಡಿಕೊಂಡಿದೆ, ಮಹಾರಾಷ್ಟ್ರ ಸರ್ಕಾರದ ಮನವಿ ಹಾಗೂ ಸಲಹೆಯನ್ನು ನಾವು ಪರಿಗಣಿಸಬೇಕಿದೆ. ನಾವು ನಿಮಗೆ ನೀರು ಕೊಡುತ್ತೇವೆ – ನೀವು ನಮಗೆ ನೀರು ಕೊಡಿ ಎಂಬ ಸಹೋದರ ಭಾವನೆಯನ್ನು ವ್ಯಕ್ತಪಡಿಸಿದ್ದಾರೆ. ನಿಮ್ಮ ಸರ್ಕಾರವೂ ನಮಗೆ ಸಹಾಯ ಮಾಡುವಂತೆ ಮನವಿ ಮಾಡಿದ್ದು, ಮಹಾರಾಷ್ಟ್ರ ಸರ್ಕಾರದ ಈ ಮನವಿಯನ್ನು ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಿರುವೆ ಎಂದರು.
ವಿದ್ಯುತ್ ಪೂರೈಕೆಯನ್ನು ಸರಾಗವಾಗಿಸಲು ಅನೇಕ 330 ಕೆವಿ ಸ್ಟೇಷನ್‌ಗಳನ್ನು ಸ್ಥಾಪಿಸಿ ಸರಾಗ ವಿದ್ಯುತ್ ಪೂರೈಕೆಗೂ ಆದ್ಯತೆ ನೀಡಲಾಗಿದೆ. ಶೈಕ್ಷಣಿಕವಾಗಿಯೂ ಇಂಡಿ ತಾಲೂಕು ಉನ್ನತ ಮಟ್ಟದ ಸಾಧನೆ ಮಾಡುವ ನಿಟ್ಟಿನಲ್ಲಿಯೂ ಅನೇಕ ಕ್ರಮ ಕೈಗೊಳ್ಳಲಾಗುತ್ತಿದೆ. ಪಿಯು ಕಾಲೇಜ್, ಡಿಗ್ರಿ ಕಾಲೇಜು, ವೃತ್ತಿಪರ ಶಿಕ್ಷಣ ಮಹಾವಿದ್ಯಾಲಯ ಸ್ಥಾಪಿಸಲಾಗಿದೆ ಎಂದರು.
ಹಡಲಸಂಗದಲ್ಲಿ ಬಹುದಿನಗಳ ಬೇಡಿಕೆಯಾದ ಪಿಯು ಕಾಲೇಜ್ ಮಂಜೂರು, ಶಿರಶ್ಯಾಡ ಜನತೆಯ ಮೂರು ದಶಕಗಳ ಬೇಡಿಕೆಯಾದ ಪಿಯು ಕಾಲೇಜ್ ಹಾಗೂ ಬಸನಾಳದಲ್ಲಿಯೂ ಪಿಯು ಕಾಲೇಜ್ ಆರಂಭಿಸಲಾಗಿದೆ. ರಾಜ್ಯದ ವಿವಿಧ ಭಾಗಗಳಲ್ಲಿ ಸೊನ್ನೆ ಪ್ರವೇಶಾತಿಯಿಂದ ಕ್ಲೋಸ್ ಆಗಿದ್ದ ಈ ಕಾಲೇಜ್‌ಗಳನ್ನು ಮತಕ್ಷೇತ್ರಕ್ಕ ಸ್ಥಳಾಂತರ ಮಾಡಿಸುವಲ್ಲಿ ಯಶಸ್ವಿಯಾಗಿದ್ದೇನೆ. ಈ ಎಲ್ಲ ಗ್ರಾಮಗಳ ಬಹುದಿಗನಗಳ ಬೇಡಿಕೆ ಈಡೇರಿದಂತಾಗಿದೆ ಎಂದು ಯಶವಂತರಾಯಗೌಡರು ವಿವರಿಸಿದರು.
ಅಂತಿಮ ಅಧಿಸೂಚನೆ ಹೊರಡಿಸಲು ಕೇಂದ್ರ ಮುತವರ್ಜಿ ವಹಿಸಲಿ
ಶೇ.80 ರಷ್ಟು ನೀರಾವರಿಯಾದರೆ ನಮ್ಮ ತಾಲೂಕು ಸಮೃದ್ಧಿಯಾಗಲಿದೆ. ಆಲಮಟ್ಟಿ ಆಣೆಕಟ್ಟಿನ ಎತ್ತರ ಹೆಚ್ಚಳಕ್ಕೆ ಸಂಬಂಧಿಸಿದಂತೆ ಅಂತಿಮ ಅಧಿಸೂಚನೆ ಹೊರಡಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮುತವರ್ಜಿ ವಹಿಸಬೇಕಿದೆ. ಈ ಎಲ್ಲ ಸಮಸ್ಯೆಗಳನ್ನು ಕೇವಲ ಕಾನೂನು ಹೋರಾಟದಿಂದ ಗೆಲುವು ಸಾಧಿಸಲು ಸಾಧ್ಯವಿಲ್ಲ. ಅಯಾ ರಾಜ್ಯಗಳ ಸಮನ್ವಯ ಸಭೆಗಳನ್ನು ನಡೆಸಿ ಇದಕ್ಕೆ ಪರಿಹಾರ ಕಂಡುಕೊಳ್ಳಬೇಕಿದೆ. ಈ ಹಿಂದೆ ಅಸ್ತಿತ್ವದಲ್ಲಿದ್ದ ಕೇಂದ್ರ ಸರ್ಕಾರಗಳು ಜಲ ವ್ಯಾಜ್ಯಗಳಿಗೆ ಸಂಬಂಧಿಸಿದಂತೆ ಸಮನ್ವಯ ಸಭೆಗಳನ್ನು ನಡೆಸುತ್ತಿತ್ತು. ಇದೇ ಮಾದರಿಯಲ್ಲಿ ಕೇಂದ್ರ ಸರ್ಕಾರ ಈ ನಿಟ್ಟಿನಲ್ಲಿ ಜಲ ವ್ಯಾಜ್ಯಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ವಿಶೇಷ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಶಾಸಕ ಯಶವಂತರಾಯಗೌಡ ಪಾಟೀಲ ವಿವರಿಸಿದರು.
ಟ್ಯಾಂಕರ್ ಮುಕ್ತ ತಾಲೂಕಿಗೆ ಮುನ್ನುಡಿ
ನೀರಿನ ಅಭಾವದ ಕೆಟ್ಟ ದಿನಗಳನ್ನು ಕಂಡವನು ನಾನು. ನೀರಿನ ಕೊರತೆ ಏನು ಎಂಬುದು ನನಗೆ ಗೊತ್ತಿದೆ. ಲಿಂಬೆ ಗಿಡ ಉಳಿಸಲು ಸಾಲ-ಸೋಲ ಮಾಡಿ ನೂರಾರು ಕಿ.ಮೀ. ದೂರದಿಂದ ಟ್ಯಾಂಕರ್ ನೀರು ತಂದು ಹಾಕುವ ಪರಿಸ್ಥಿತಿ ಇತ್ತು. ನೂರಾರು ಕೋಟಿ ರೂ. ಟ್ಯಾಂಕರ್ ನೀರಿಗಾಗಿ ವ್ಯಯಿಸಬೇಕಾದ ಅನಿವಾರ್ಯತೆಯೂ ಇತ್ತು. ಈಗ ನೀರಾವರಿ ಯೋಜನೆಗಳ ಅನುಷ್ಠಾನ, ಕೆರೆ ತುಂಬುವ ಯೋಜನೆ ಮೊದಲಾದ ಮಹೋನ್ನತ ಕಾರ್ಯಗಳಿಂದ ಟ್ಯಾಂಕರ್ ಹಚ್ಚುವ ಅನಿವಾರ್ಯತೆ ಸಂಪೂರ್ಣವಾಗಿ ಕ್ಷೀಣವಾಗಿದೆ, 26 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಕಬ್ಬು ಬೆಳೆಯಲಾಗುತ್ತಿದೆ ಎಂದರು.
ಆರು ತಿಂಗಳಲ್ಲಿ ರಸ್ತೆ
ರಸ್ತೆಗಳ ಅವ್ಯವಸ್ಥೆಯ ಬಗ್ಗೆ ಅನೇಕ ರೀತಿಯಲ್ಲಿ ಚರ್ಚೆಯಾಗುತ್ತಿವೆ. ಆದರೆ ಅಷ್ಟೊಂದು ಪ್ರಮಾಣದಲ್ಲಿ ಸಮಸ್ಯೆ ಇಲ್ಲ, ಆದರೂ ಸಹ ಆರು ತಿಂಗಳಲ್ಲಿ ಸಂಪೂರ್ಣ ರಸ್ತೆಗಳನ್ನು ಸಂಪೂರ್ಣ ಅಭಿವೃದ್ಧಿಗೊಳಿಸಲಾಗುವುದು. ಆದರೆ ರಸ್ತೆಯ ಸಮಸ್ಯೆಯ ನೈಜತೆಯನ್ನು ಸಹ ಅರ್ಥೈಸಿಕೊಳ್ಳಬೇಕು. ಚಿಕ್ಕಮಗಳೂರು ಭಾಗದಲ್ಲಿ ಬಿದ್ದ ಪ್ರಮಾಣದಲ್ಲಿ ನಮ್ಮ ಜಿಲ್ಲೆಯಲ್ಲಿ ಮಳೆ ಸುರಿದಿರುವುದರಿಂದ ರಸ್ತೆ ಹಾಳಾಗಿದೆ. ಅದೇ ತೆರನಾಗಿ ಇಂಡಿ ಭಾಗದಲ್ಲಿ ಅನೇಕ ಸಂಖ್ಯೆಯಲ್ಲಿ ಸಕ್ಕರೆ ಕಾರ್ಖಾನೆಗಳು ಸ್ಥಾಪಿತವಾಗಿವೆ. ನೂರಾರು ಟನ್ ಕಬ್ಬು ಹೇರಿಕೊಂಡು ಟ್ರ್ಯಾಕ್ಟರ್‌ಗಳು ಸಂಚರಿಸುತ್ತಿವೆ. ಇದರಿಂದಾಗಿ ರಸ್ತೆಗಳು ಬೇಗನೆ ಹಾಳಾಗುತ್ತಿವೆ. ಇದರ ವಾಸ್ತವಿಕತೆಯನ್ನು ಟೀಕಾಕಾರರು ಅರಿಯಬೇಕಲ್ಲವೇ ಎಂದರು.
ನಮ್ಮ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 111 ಕಿ.ಮೀ ರಾಜ್ಯ ಹೆದ್ದಾರಿ ಇದ್ದು ಅದರಲ್ಲಿ 83 ಕೀ.ಮಿ ರಸ್ತೆ ಸಂಪೂರ್ಣ ಸುಸ್ಥಿತಿಯಲ್ಲಿದ್ದು, ದುರಸ್ತಿಗೆ ಅಗತ್ಯವಿರುವ 28 ಕೀ.ಮೀ. ರಸ್ತೆ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು. ಆರು ತಿಂಗಳಲ್ಲಿ ರಸ್ತೆ ಅಭಿವೃದ್ಧಿಗೆ ಕ್ರಮ ವಹಿಸಲಾಗುವುದು ಎಂದರು.
ಜಿಲ್ಲೆಯ ಸಸಿ ನೆಟ್ಟಿರುವೆ
ಇಂಡಿ ಜಿಲ್ಲೆಯಾಗುವ ನಿಟ್ಟಿನಲ್ಲಿ ಎಲ್ಲ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಿರುವೆ. ವಿಜಯಪುರ ನಗರದಲ್ಲಿ ರಾಜ್ಯಮಟ್ಟದ ಮಂಡಳಿಯ ಕೇಂದ್ರ ಕಚೇರಿ ಇಲ್ಲ. ಇಂಡಿಯಲ್ಲಿದೆ. ನಗರಸಭೆಯಾಗಿ ಮೇಲ್ದರ್ಜೆಗೇರಿದೆ. ಇಂಡಿ ಜಿಲ್ಲೆಯಾಗಿಸುವ ಸಸಿ ನೆಟ್ಟಿರುವೆ. ಅದು ಯಾವಾಗ ಹೆಮ್ಮರವಾಗಿ ಬೆಳೆಯುತ್ತದೆಯೋ ಬೆಳೆಯಲಿ. ವಿಜಯಪುರ ನಗರದಲ್ಲಿ ರಾಜಕಾರಣ ಮಾಡುವವವರು 247 ಕುಡಿಯುವ ನೀರು ಕೊಟ್ಟಿಲ್ಲ, ಆದರೆ ಇಂಡಿಯಲ್ಲಿ 100 ಕೋಟಿ ರೂ. ವೆಚ್ಚದಲ್ಲಿ 247 ನೀರು ಪೂರೈಸಲಾಗುತ್ತಿದೆ, ಆದರೆ ಜಿಲ್ಲಾ ಕೇಂದ್ರ ವಿಜಯಪುರದಲ್ಲಿಯೇ ಈ ಸೌಲಭ್ಯ ಇಲ್ಲ ಎಂಬುದು ನನಗೂ ನೋವು ತರಿಸುತ್ತದೆ ಎಂದರು.
ಸಂವಿಧಾನದ 370 ಜೆ ಅಡಿಯಲ್ಲಿ ವಿಜಯಪುರ ಜಿಲ್ಲೆ ಸೇರ್ಪಡೆ ಮಾಡುವ ಹೋರಾಟದ ದನಿ ವಿಳಂಬವಾಗಿ ಮೊಳಗಿದೆ. ಈ ಬಗ್ಗೆ ದಿ.ಎಂ.ಎಂ. ಸಜ್ಜನ ಅವರು ಧ್ವನಿ ಎತ್ತಿದಾಗ ಅವರ ಹೋರಾಟಕ್ಕೆ ನಾವು ಆಗಲೇ ಬಲ ನೀಡಬೇಕಾಗಿತ್ತು. ಆದರೆ ಆ ವಿಷಯದಲ್ಲಿ ನಾವು ವಿಫಲವಾಗಿದ್ದೇವೆ, ಈ ಕೂಗು ಈಗ ಎದ್ದಿದೆ ಎಂದರು.
ಈಗ ಸಚಿವ ಸ್ಥಾನ ಏನು ಮಾಡುವಿರಿ?
ಸಚಿವ ಸಂಪುಟ ವಿಸ್ತರಣೆಯಾಗಬೇಕು ಎಂಬುದು ಹಿರಿಯ ಸಚಿವರ ಬೇಡಿಕೆ. ಆದರೆ ಇನ್ನೂ ಕೆಲವೇ ಅವಧಿ ಉಳಿದಿದೆ. ಈಗ ಸಚಿವ ಸ್ಥಾನ ತೆಗೆದುಕೊಂಡು ಏನು ಮಾಡುವುದು. ಸಚಿವ ಸಂಪುಟ ವಿಸ್ತರಣೆ ಹೈಕಮಾಂಡ್‌ಗೆ ಕೇಳಬೇಕಾದ ಪ್ರಶ್ನೆ, ಅಭಿವೃದ್ಧಿ ವಿಷಯವಾಗಿ ನವದೆಹಲಿಗೆ ಹೋಗಿದ್ದೆವು, ಮಂತ್ರಿ ಮಂಡಳ ವಿಷಯವಾಗಿ ಅಷ್ಟೇ ಅಲ್ಲ. ಆದರೆ ಅಭಿವೃದ್ಧಿ ವಿಷಯವಾಗಿ ಭೇಟಿಯಾಗಿದ್ದು ಚರ್ಚೆಯೇ ಆಗುವುದಿಲ್ಲ. ರಾಜಕೀಯ ವಿಷಯವೇ ಪ್ರಧಾನವಾಗಿ ಬಿಂಬಿತವಾಗುತ್ತದೆ ಎಂದರು.
ದೇಶ ಆಳಲು ಬಾರದವರು ವಿಶ್ವಗುರುವೇ?
ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧವೂ ವಾಗ್ದಾಳಿ ನಡೆಸಿದ ಇಂಡಿ ಶಾಸಕ ಯಶವಂತರಾಯಗೌಡರು, ಈಗ ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಇದೆ. ಸಾಂವಿಧಾನಿಕ ಸಂಸ್ಥೆಗಳನ್ನು ದುರಪಯೋಗಪಡಿಸಿಕೊಂಡು ರಾಜ್ಯವನ್ನು ಆಳುವ ಪ್ರಯತ್ನ ನಡೆಯುತ್ತಿದೆ. ಐಟಿ-ಇಡಿ ಮೊದಲಾದವುಗಳ ದುರುಪಯೋಗ ಆದರೆ ದೇಶ ಎತ್ತ ಸಾಗಬೇಕು? ದೇಶವನ್ನು ಆಳಲು ಸಾಧ್ಯವಾಗದವರು ವಿಶ್ವ ಗುರು ಆಗಲು ಸಾಧ್ಯವೇ? ದೇಶವನ್ನು ಮುನ್ನಡೆಸುವವರು ವಿವೇಕದಿಂದ ಹೇಳಿಕೆ ನೀಡಬೇಕು. ಈ ಹಿಂದೆ ನೋಟು ಅಮಾನ್ಯೀಕರಣವನ್ನು ಸಹ ತರಾತುರಿಯಲ್ಲಿ ಮೋದಿ ಕೈಗೊಂಡಿದ್ದರು. ಪ್ರಧಾನಮಂತ್ರಿಗಳ ಕಚೇರಿ ಚುನಾವಣೆ ಕೇಂದ್ರಿತವಾಗಬಾರದು. ಚುನಾವಣಾ ಆಯೋಗಕ್ಕೆ ಜೀವವೇ ಇಲ್ಲದಂತಾಗಿದೆ ಎಂದರು.
ಪ್ರಧಾನಮಂತ್ರಿಗಳು ಎರಡು ದಿನಗಳಿಂದ ನೀಡುತ್ತಿರುವ ಹೇಳಿಕೆ ಅಪಹಾಸ್ಯಕ್ಕೆ ಗುರಿಯಾಗಿವೆ. ಮುಖ್ಯಮಂತ್ರಿಗಳ ಕಾದಾಟದ ಬಗ್ಗೆ ಮಾತನಾಡುವುದು ಪ್ರಧಾನಿಗೆ ಶೋಭೆ ತರುವ ವಿಷಯವಿಲ್ಲ, ಅವರ ಹೇಳಿಕೆಯಿಂದ ಜನರಲ್ಲಿ ಅಭದ್ರತೆ ಕಾಡುತ್ತಿದೆ, ಚಿನ್ನ ಖರೀದಿಸಬೇಡಿ, ನಡೆದುಕೊಂಡು ಹೋಗಿ ಎಂದು ಹೇಳುವ ಮೂಲಕ ಒಂದು ರೀತಿ ಭಯ ಮೂಡಿಸಿದೆ ಎಂದರು.


