ಪತ್ರಕರ್ತರ ಸಂಘದ ಅಭಿವೃದ್ಧಿಗೆ ಶಾಸಕ ಶಿವಾನಂದ ಪಾಟೀಲರಿಂದ ₹5 ಲಕ್ಷ ವೈಯಕ್ತಿಕ ನೆರವು

ಸಪ್ತಸಾಗರ ವಾರ್ತೆ,ವಿಜಯಪುರ, ಸೆ. 13:
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವಿಜಯಪುರ ಜಿಲ್ಲಾ ಘಟಕದ ಅಭಿವೃದ್ಧಿ ಕಾರ್ಯಗಳಿಗೆ ಮಾಜಿ ಸಚಿವ ಹಾಗೂ ಬಸವನಬಾಗೇವಾಡಿ ಶಾಸಕ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಶಿವಾನಂದ ಪಾಟೀಲ ಅವರು ತಮ್ಮ ವೈಯಕ್ತಿಕವಾಗಿ ₹5 ಲಕ್ಷ ನೆರವು ನೀಡಿದರು.
ನಗರದ ಡಿಸಿಸಿ ಬ್ಯಾಂಕ್ ಆವರಣದಲ್ಲಿ ಶನಿವಾರ ಅವರನ್ನು ಭೇಟಿಯಾದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಪದಾಧಿಕಾರಿಗಳು, ಸಂಘಟನಾ ಕಾರ್ಯದರ್ಶಿಗಳು, ಕಾರ್ಯಕಾರಿಣಿ ಸದಸ್ಯರು ಹಾಗೂ ಸದಸ್ಯರ ಸಮ್ಮುಖದಲ್ಲಿ ಜಿಲ್ಲಾಧ್ಯಕ್ಷ ಅಶೋಕ ಯಡಳ್ಳಿ ಅವರಿಗೆ ಶಿವಾನಂದ ಪಾಟೀಲರು ₹5 ಲಕ್ಷ ಮೊತ್ತವನ್ನು ಹಸ್ತಾಂತರಿಸಿದರು.
2025ರಲ್ಲಿ ವಿಜಯಪುರದಲ್ಲಿ ನಡೆದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಂದರ್ಭದಲ್ಲಿ ಶಿವಾನಂದ ಪಾಟೀಲರು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ವೈಯಕ್ತಿಕವಾಗಿ ₹5 ಲಕ್ಷ ನೀಡುವುದಾಗಿ ಭರವಸೆ ನೀಡಿದ್ದರು. ಅದರಂತೆ ಇದೀಗ ತಮ್ಮ ವಾಗ್ದಾನವನ್ನು ಈಡೇರಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಶಿವಾನಂದ ಪಾಟೀಲರು, ಕಾರ್ಯನಿರತ ಪತ್ರಕರ್ತರ ಸಂಘದೊಂದಿಗೆ ಸದಾ ತಾವು ನಿಲ್ಲುವುದಾಗಿ ಭರವಸೆ ನೀಡಿದರು. ಪತ್ರಕರ್ತರ ಹಿತಾಸಕ್ತಿ ಹಾಗೂ ಕ್ಷೇಮಾಭಿವೃದ್ಧಿಗೆ ಸಂಘವು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕು ಎಂದು ಸಲಹೆ ನೀಡಿದರು.
ಜಿಲ್ಲಾಧ್ಯಕ್ಷ ಅಶೋಕ ಯಡಳ್ಳಿ ಅವರು ಸಂಘದ ವಿವಿಧ ಚಟುವಟಿಕೆಗಳು ಹಾಗೂ ಅಭಿವೃದ್ಧಿ ಕಾರ್ಯಗಳ ಕುರಿತು ಶಿವಾನಂದ ಪಾಟೀಲರಿಗೆ ಮಾಹಿತಿ ನೀಡಿದರು. ಸಂಘದ ಆವರಣದಲ್ಲಿ ನೂತನ ಬೋರ್‌ವೆಲ್ ಕೊರೆಸಲಾಗಿದ್ದು, ಕಟ್ಟಡದ ನವೀಕರಣ ಕಾಮಗಾರಿಯನ್ನು ಶೀಘ್ರದಲ್ಲೇ ಆರಂಭಿಸಲಾಗುವುದು ಎಂದು ತಿಳಿಸಿದರು.
ಪತ್ರಕರ್ತರ ಸಂಘದ ಚಟುವಟಿಕೆಗಳಿಗೆ ಶಿವಾನಂದ ಪಾಟೀಲರು ಹಿಂದಿನಿಂದಲೂ ಸಹಕಾರ ನೀಡುತ್ತ ಬಂದಿದ್ದಾರೆ. 2023ರಲ್ಲಿ ವಿಜಯಪುರದಲ್ಲಿ ನಡೆದ ರಾಜ್ಯಮಟ್ಟದ 37ನೇ ಪತ್ರಕರ್ತರ ಸಮ್ಮೇಳನಕ್ಕೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಪತ್ರಕರ್ತರಿಗೆ ಉತ್ತಮ ಗುಣಮಟ್ಟದ 3,000 ಬ್ಯಾಗ್‌ಗಳನ್ನು ಒದಗಿಸಿ ನೆರವಾಗಿದ್ದರು. ಅಲ್ಲದೆ, ರಾಜ್ಯ ಕಾರ್ಯಕಾರಿಣಿ ಸಭೆ ಆಯೋಜನೆ ಸಂದರ್ಭದಲ್ಲಿಯೂ ಸಹಕಾರ ನೀಡಿದ್ದರು. ಇದೀಗ ವೈಯಕ್ತಿಕವಾಗಿ ₹5 ಲಕ್ಷ ನೆರವು ನೀಡಿರುವುದು ಸಂಘದ ಅಭಿವೃದ್ಧಿಗೆ ಮತ್ತಷ್ಟು ಬಲ ನೀಡಿದೆ ಎಂದು ಅಶೋಕ ಯಡಳ್ಳಿ ಅಭಿನಂದನೆ ಸಲ್ಲಿಸಿದರು.
ಮುಂದಿನ ದಿನಗಳಲ್ಲಿಯೂ ಸಂಘದ ಅಭಿವೃದ್ಧಿ ಹಾಗೂ ಪತ್ರಕರ್ತರ ಹಿತದೃಷ್ಟಿಯಿಂದ ಇದೇ ರೀತಿಯ ಸಹಕಾರ ಮುಂದುವರಿಸಬೇಕು ಎಂದು ಅವರು ಮನವಿ ಮಾಡಿದರು.
ಹಿರಿಯ ಪತ್ರಕರ್ತರಾದ ಸೀತಾರಾಮ ಕುಲಕರ್ಣಿ, ರಾಜೂ ಕೊಂಡಗೂಳಿ, ಸಂಘಟನಾ ಕಾರ್ಯದರ್ಶಿಗಳಾದ ಮೋಹನ ಕುಲಕರ್ಣಿ, ದೇವೇಂದ್ರ ಹೆಳವರ, ಉಪಾಧ್ಯಕ್ಷರಾದ ಶಶಿಕಾಂತ ಮೆಂಡೆಗಾರ, ಸಮೀರ್ ಇನಾಂದಾರ, ಕಾರ್ಯಕಾರಿ ಸಮಿತಿ ಸದಸ್ಯರಾದ ಶ್ರೀನಿವಾಸ ಸೂರಗೊಂಡ, ಗುರು ಗದ್ದನಕೇರಿ, ಪವನ ಕುಲಕರ್ಣಿ, ಸಂಜೀವ ಕುಲಕರ್ಣಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Share this