ರೂ.2 ಕೋಟಿ ಸಿಸಿ ರಸ್ತೆ ಕಾಮಗಾರಿಗೆ ಶಾಸಕ ಯತ್ನಾಳರಿಂದ ಭೂಮಿಪೂಜೆ

ಸಪ್ತಸಾಗರ ವಾರ್ತೆ, ವಿಜಯಪುರ,, ಫೆ. 10:
ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಮಂಗಳವಾರ ನಗರದಲ್ಲಿ ರೂ.2 ಕೋಟಿ ಅನುದಾನದಲ್ಲಿ ಕೈಗೊಳ್ಳಲಾಗುತ್ತಿರುವ ಸಿಸಿ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ, ಸಾರ್ವಜನಿಕರಿಂದ ಅಹವಾಲು ಆಲಿಸಿದರು.
ರೂ.1 ಕೋಟಿ ಮೊತ್ತದಲ್ಲಿ ನಗರದ ವಾರ್ಡ್ ನಂ.23 ರಲ್ಲಿ ಬರುವ ಪುಲಕೇಶಿ ನಗರ ಮುಖ್ಯ ರಸ್ತೆಯಿಂದ ಜಗಜ್ಯೋತಿ ಬಸವೇಶ್ವರ ಕಾಲೇಜು ವರೆಗೆ ಹಾಗೂ ಆಂತರಿಕ ರಸ್ತೆಗಳನ್ನು ಅಭಿವೃದ್ಧಿ ಪಡಿಸುವ ಕಾಮಗಾರಿಗೆ ಹಾಗೂ ವಾರ್ಡ್ ನಂ.22 ರಲ್ಲಿ ಬರುವ ಕನಕದಾಸ ಬಡಾವಣೆಯ ದೇವರಾಜ ಅರಸು ಕಚೇರಿ ಹಿಂದಿನ ಭಾಗದ ರಸ್ತೆಯಿಂದ ಸಾಯಿ ಗ್ರ್ಯಾಂಡ್ ಹೋಟೆಲ್ ವರೆಗೆ ರೂ.1 ಕೋಟಿ ಮೊತ್ತದಲ್ಲಿ ಸಿಸಿ ರಸ್ತೆ ಅಭಿವೃದ್ಧಿಪಡಿಸುವ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು. ಇದೇ ವೇಳೆ ನೆರೆದ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, ನಗರದಲ್ಲಿ ಕಳೆದ ಏಳೆಂಟು ವರ್ಷಗಳಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದರ ಫಲವಾಗಿ ಧೂಳು ಮುಕ್ತ ಹಾಗೂ ಅತ್ಯಂತ ಶುದ್ಧ ಗಾಳಿ ಬಿಸುವ ನಗರವಾಗಿ ವಿಜಯಪುರ ದೇಶದಲ್ಲಿ ಹೆಸರುವಾಸಿ ಆಗಿದೆ. ಅಲ್ಲಲ್ಲಿ ಉಳಿದಿರುವ ರಸ್ತೆ, ಚರಂಡಿಗಳನ್ನೂ ಸಹ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಹೇಳಿದರು.
ಮಹಾನಗರ ಪಾಲಿಕೆ ಸದಸ್ಯ ಪ್ರೇಮಾನಂದ ಬಿರಾದಾರ, ಕುಮಾರ ಗಡಗಿ, ಮುಖಂಡರಾದ ಪಾಂಡುಸಾಹುಕಾರ ದೊಡ್ಡಮನಿ, ಚಂದ್ರಶೇಖರ ಚೌದರಿ, ಶಂಕರ ಹೂಗಾರ, ಸಂತೋಷ ತಲಕೇರಿ, ಜಗಜ್ಯೋತಿ ಬಸವೇಶ್ವರ ಕಾಲೇಜು ಅಧ್ಯಕ್ಷ ಎಲ್.ಬಿ.ಪಾಟೀಲ ಸೇರಿದಂತೆ ಮುಖಂಡರು, ಹಿತೈಷಿಗಳು, ಕಾರ್ಯಕರ್ತರು, ಅಭಿಮಾನಿಗಳು ಹಾಗೂ ಸ್ಥಳೀಯ ನಾಗರಿಕರು ಉಪಸ್ಥಿತರಿದ್ದರು.

Share this