ಭೂಮಾಪಕರ ನ್ಯಾಯಯುತ ಬೇಡಿಕೆ ಈಡೇರಿಕೆಗೆ ಶಾಸಕ ಯತ್ನಾಳ ಒತ್ತಾಯ

ಸಪ್ತಸಾಗರ ವಾರ್ತೆ,ವಿಜಯಪುರ, ಮೇ. 26:
ಭೂ ಮಾಪಕರ ಧರಣಿಯಿಂದ ಜಮೀನು ಸರ್ವೆ ವಿವಾದಗಳು ನಿರ್ಧಾರವಾಗದೆ, ರೈತರು ಸರ್ವೇ ಆಗದ ದಾಖಲಾತಿ ಪಡೆಯದ ಕಾರಣ ಅವರಿಗೆ ಬೆಳೆ ಸಾಲ ಸಿಗುತ್ತಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ಹಿಂದೆ ಪ್ರತಿಪಕ್ಷ ನಾಯಕರಾಗಿದ್ದಾಗ ಭೂ ಮಾಪಕರ ಪರ ಧ್ವನಿ ಎತ್ತಿದ್ದರು. ಈಗ ‘ಜಾಣ ಕಿವುಡು’ ಪ್ರದರ್ಶಿಸುತ್ತಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಕಿಡಿಕಾರಿದ್ದಾರೆ.
ಭೂಮಾಪಕರ ಧರಣಿಯಿಂದ ರೈತರಿಗೆ ಬೇಕಾದ ಅಗತ್ಯ ಸೇವೆ ಸಿಗದೇ ಪರದಾಡುತ್ತಿದ್ದು, ಇತ್ತ ಸರ್ಕಾರ ಅವರ ಸಮಸ್ಯೆಗಳನ್ನು ಆಲಿಸಲು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ರಾಜ್ಯದಲ್ಲಿ ಶೇ. 45 ರಷ್ಟು ಭೂ ಮಾಪಕರ ಹುದ್ದೆಗಳು ಖಾಲಿ ಇವೆ. ಈ ಬೇಡಿಕೆಯನ್ನು ಪೂರೈಸಲು ಸರ್ಕಾರ ಸುಮಾರು 4,500 ಖಾಸಗಿ ಭೂಮಾಪಕರನ್ನು ನಿಯೋಜಿಸಿದೆ. ಖಾಸಗಿ ಭೂ ಮಾಪಕರ ಪ್ರತಿಭಟನೆಯಿಂದ 5.78 ಲಕ್ಷ ಸರ್ವೇ ಅರ್ಜಿಗಳು ಬಾಕಿ ಉಳಿದಿವೆ.
ಮ್ಯುಟೇಷನ್ ಪೂರ್ವ ನಕ್ಷೆ ತಯಾರಿಕೆ, ತತ್ಕಾಲ್ ಪೋಡಿ ಅಳತೆ, ದರಖಾಸ್ತು ಪೋಡಿ, ಮರುಭೂಮಾಪನ, ಕೆರೆ ಅಳತೆ, ವಿದ್ಯುತ್ ಮಾರ್ಗ, ಹೆದ್ದಾರಿ, ಮುಜರಾಯಿ ದೇವಸ್ಥಾನಗಳ ಭೂಮಾಪನವನ್ನು ಇವರು ಮಾಡುತ್ತಿದ್ದಾರೆ. ರೈತರು ಭೂ ಹಕ್ಕು ಸಂಬಂಧಿತ ಪ್ರಕ್ರಿಯೆಗಳು ಇವರ ಸೇವೆಯ ಮೇಲೆ ಅವಲಂಬಿತವಾಗಿದೆ. ಜಮೀನು ಪೋಡಿ ಮಾಡುವುದು, ನಕ್ಷೆ ಸಿದ್ದಪಡಿಸುವುದು, ಖರೀದಿ ನಕ್ಷೆ, ವಿಭಾಗ ನಕ್ಷೆ, ದಾನಪತ್ರ ನಕ್ಷೆ ಹದ್ದುಬಸ್ತು, ದರಖಾಸ್ತು, 11 ಇ ಕೆಲಸಗಳನ್ನು ಭೂ ಮಾಪಕರು ಮಾಡುತ್ತಿದ್ದಾರೆ. ಸರ್ವೇ ಕೆಲಸ ಇಲ್ಲದ ಸಮಯದಲ್ಲಿ ದಾಖಲೆಗಳ ಡಿಜಟಲೀಕರಣ, ನಿರ್ವಹಣೆ, ಹಿಸ್ಸಾ ತಿದ್ದುಪಡಿ, ಜಾಮೀನು ಒಟ್ಟುಗೂಡಿಸುವಿಕೆ ಕೆಲಸವನ್ನು ಸರ್ಕಾರ ನೀಡುತ್ತದೆ ಎಂದು ತಿಳಿಸಿದ್ದಾರೆ.
ಗಾಯದ ಮೇಲೆ ಬರೆ ಇಟ್ಟಂತೆ ಸುಮಾರು 300 ಪ್ರತಿಭಟನಾ ನಿರತ ಭೂ ಮಾಪಕರ ಪರವಾನಗಿಯನ್ನು ರಾತ್ರೋ ರಾತ್ರಿ ಸರ್ಕಾರ ರದ್ದುಗೊಳಿಸಿದೆ. ಮುಖ್ಯ ಮಂತ್ರಿಗಳು ಕೂಡಲೇ ಗಮನ ವಹಿಸಿ ಇವರ ಬೇಡಿಕೆಗಳಿಗೆ ನ್ಯಾಯಯುತವಾದ ಪರಿಹಾರವನ್ನು ಆದ್ಯತೆಯ ಮೇಲೆ ನೀಡಲಿ ಎಂದು ತಮ್ಮ ಎಕ್ಸ್ ಖಾತೆಯಲ್ಲಿ ಟ್ವಿಟ್ ಮಾಡಿದ್ದಾರೆ.

Share this