ಸಪ್ತಸಾಗರ ವಾರ್ತೆ, ವಿಜಯಪುರ, ಮೇ. 16:
ದೇಶದ ಹೆಸರು ಹೇಳಿ ಕಾಂಗ್ರೆಸ್ನವರಂತೆ ಚಿನ್ನದ ತುಲಾಭಾರವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮಾಡಿಸಿಕೊಂಡಿಲ್ಲ. ಬದಲಾಗಿ ಚಿನ್ನದ ಖರೀದಿಯನ್ನು ಮಿತ ಪ್ರಮಾಣಕ್ಕೆ ಸೀಮಿತಗೊಳಿಸುವಂತೆ ಮನವಿ ಮಾಡಿಕೊಂಡಿದ್ದಾರೆ. ಕಾಂಗ್ರೆಸ್ನಂತೆ ತುರ್ತು ಪರಿಸ್ಥಿತಿ ಹೇರಿ ಪ್ರಜಾಪ್ರಭುತ್ವ ದಮನಿಸುವ ಕೆಲಸವನ್ನು ಬಿಜೆಪಿ ಮಾಡಿಲ್ಲ. ಕೋವಿಡ್ನಂತಹ ಸಂಕಷ್ಟದ ಸಮಯದಲ್ಲಿ ಕಾಂಗ್ರೆಸ್ ಏನಾದರೂ ಅಧಿಕಾರದಲ್ಲಿದ್ದರೆ ದೇಶದ ಪರಿಸ್ಥಿತಿ ಊಹಿಸಲು ಸಾಧ್ಯವಾಗಿರದಷ್ಟು ಕೆಟ್ಟಿರುತ್ತಿತ್ತು ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಅಂತಾರಾಷ್ಟ್ರೀಯ ಮಟ್ಟದ ವಿದ್ಯಮಾನಗಳು ಭಾರತದ ಆರ್ಥಿಕತೆಯ ಮೇಲೆ ಪರಿಣಾಮ ಬೀರುತ್ತಿರುವ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಅವರು ವೆಚ್ಚ ಕಡಿತದ ಜೊತೆಯಲ್ಲಿ ಪೆಟ್ರೋಲ್, ಡಿಸೇಲ್ ವಾಹನಗಳ ಬಳಕೆ ತಗ್ಗಿಸಲು ಮತ್ತು ಚಿನ್ನಾಭರಣ ಖರೀದಿ ಮಿತಗೊಳಿಸಲು ಕರೆ ನೀಡಿದ್ದಾರೆ ವಿನಃ ಕಾಂಗ್ರೆಸ್ನಂತೆ ದೇಶದ ಹೆಸರಲ್ಲಿ ಜನರ ಚಿನ್ನಾಭರಣ ಕಿತ್ತುಕೊಂಡಿಲ್ಲ. ದೇಶದ ಆರ್ಥಿಕತೆ ಕುಸಿದಿದೆ ಎಂದು ಕಾಂಗ್ರೆಸ್ನಂತೆ ಬಿಜೆಪಿ ಎಂದೂ ಕೈಚಲ್ಲಿ ಕುಳಿತಿಲ್ಲ, ತುರ್ತು ಪರಿಸ್ಥಿತಿ ಹೇರಿಲ್ಲ. ಭೀಕರ ಬರದಲ್ಲೂ ದೇಶದ ಹೆಸರಲ್ಲಿ ಚಿನ್ನದ ತುಲಾಭಾರ ಮಾಡಿಸಿಕೊಂಡಿಲ್ಲ ಎಂದಿದ್ದಾರೆ.
ದೇಣಿಗೆ ಕೇಳಿಲ್ಲ. ರಕ್ಷಣಾ ನಿಧಿ ಸಂಗ್ರಹಿಸಿಲ್ಲ. 1962ರಲ್ಲಿ ಭಾರತ ಚೀನಾ ಯುದ್ಧದ ಸಂದರ್ಭದಲ್ಲಿ ಪಂಡಿತ ಜವಾಹರಲಾಲ್ ನೆಹರು ಅವರ ವಿವೇಚನಾ ರಹಿತ ನಿರ್ಧಾರದಿಂದಾಗಿ ಭಾರತ ಸೋಲು ಕಂಡಿತ್ತು. ಪರಿಣಾಮ ದೊಡ್ಡ ಪ್ರಮಾಣದಲ್ಲಿ ರಕ್ಷಣಾ ನಿಧಿ ಸಂಗ್ರಹಿಸಲು ಮುಂದಾಗಿತ್ತು. 1963ರಲ್ಲಿ ಕರ್ನಾಟಕದ ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪ ಅವರು ರಾಜ್ಯಾದ್ಯಂತ ಸಂಚರಿಸಿ ರಕ್ಷಣಾ ನಿಧಿ ಸಂಗ್ರಹಿಸಿ ಕೊಡುವುದಾಗಿ ವಾಗ್ದಾನ ಮಾಡಿದ್ದರು. ಪರಿಣಾಮ ವಿಜಯಪುರದಲ್ಲಿ ಕೆ.ಬಿ. ಚೌಧರಿ ಸಂಸದರಾಗಿದ್ದಾಗ ವಿಜಯಪುರ ನಗರದಲ್ಲಿ ಜುಲೈ 2 ರಂದು ಇಂದಿರಾ ಗಾಂಧಿ ಹಾಗೂ ಎಸ್.ನಿಜಲಿಂಗಪ್ಪ ಅವರಿಗೆ ಜನ ಚಿನ್ನದಿಂದ ತುಲಾಭಾರ ನೆರವೇರಿಸಿದ್ದರು. ಆಗ ಜಿಲ್ಲೆಯಲ್ಲಿ ಭೀಕರ ಬರಗಾಲವಿತ್ತು. ಆದರೂ ನಮ್ಮ ಜನ ಉದಾರ ಮನೋಭಾವದವರು. ದೇಶಕ್ಕಾಗಿ ಮೈಮೇಲಿನ ಚಿನ್ನಾಭರಣವನ್ನೇ ರಕ್ಷಣಾ ನಿಧಿಗೆ ಅರ್ಪಿಸಿದ್ದರು. ಆದರೆ, ದೇಶದಲ್ಲಿ ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಜನರಿಂದ ನಯಾಪೈಸೆ ನಿಧಿ ಸಂಗ್ರಹಿಸಿಲ್ಲ ಎಂದು ಅವರು ಹೇಳಿದ್ದಾರೆ.
ಪೆಟ್ರೋಲ್, ಡಿಸೇಲ್ ಕೊರತೆ ಉಂಟಾಗಿಲ್ಲ. ಗ್ಯಾಸ್ ಸಿಲಿಂಡರ್ ಪೂರೈಕೆ ಸ್ಥಗಿತಗೊಳಿಸಿಲ್ಲ. ಎಂಥದ್ದೇ ಬಿಕ್ಕಟ್ಟು ಎದುರಾದರೂ ದೇಶವನ್ನು ಪ್ರಧಾನಿ ಮೋದಿಜಿ ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ ವಿನಃ ಜನರಿಗೆ ತೊಂದರೆಯಾಗಲು ಬಿಟ್ಟಿಲ್ಲ. ಕೊರೋನಾ ಸಂದರ್ಭದಲ್ಲಿ ಮೋದಿ ಬದಲು ಕಾಂಗ್ರೆಸ್ ಅಧಿಕಾರದಲ್ಲಿದ್ದಿದ್ದೇ ಆದರೆ ದೇಶಕ್ಕೆ ದೊಡ್ಡ ತೊಂದರೆಯಾಗುತ್ತಿತ್ತು, ಆದರೆ ಮೋದಿಜಿ ಅಂತಹ ಕಠಿಣ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಿ ಎಲ್ಲರಿಗೂ ಉಚಿತವಾಗಿ ವ್ಯಾಕ್ಸಿನ್ ಒದಗಿಸಿದರು. ಕೊರೋನಾ ವಿರುದ್ಧ ಜನತೆಯ ವಿಶ್ವಾಸದೊಂದಿಗೆ ಹೋರಾಡಿದರು ಎಂದು ಜಿಗಜಿಣಗಿ ಹೇಳಿದ್ದಾರೆ.
ಈಗ ಕೊಲ್ಲಿ ರಾಷ್ಟ್ರಗಳ ಯುದ್ಧದ ಸಂದರ್ಭದಲ್ಲಿ ಪ್ರಧಾನಿ ಮೋದಿ ಬೆನ್ನಿಗೆ ದೇಶದ ಜನ ನಿಲುತ್ತಿರುವುದನ್ನು ಸಹಿಸಲಾಗದ ಕಾಂಗ್ರೆಸ್ಸಿಗರು ಹೊಟ್ಟೆಕಿಚ್ಚಿನಿಂದ ಅಪಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಮೋದಿ ಚಪ್ಪಾಳೆ ತಟ್ಟಿ, ಗಂಟೆ ಭಾರಿಸಿ ಎಂದಿದ್ದು ಕೊರೋನಾ ವಾರಿಯರ್ಸ್ಗೆ ಅಭಿನಂದಿಸುವುದಕ್ಕೋಸ್ಕರವೇ ವಿನಃ ಅಸಹಾಯಕತೆಯಿಂದಲ್ಲ. ಹಾಗೆ ಅಸಹಾಯಕತೆಯಿಂದ ಜನರಿಂದ ಚಿನ್ನದ ತುಲಾಭಾರ ನೆರವೇರಿಸಿಕೊಳ್ಳಲು ರಕ್ಷಣಾ ನಿಧಿ ಸಂಗ್ರಹಿಸಲು ಇದು ಅಸಮರ್ಥ ಕಾಂಗ್ರೆಸ್ ಆಡಳಿತಾವಧಿಯಲ್ಲ. ಬದಲಾಗಿ ಸದೃಢ ಭಾರತದ ಸದೃಢ ನಾಯಕ ಮೋದಿ ಆಡಳಿತ ಎಂಬುದು ನೆನಪಿರಲಿ ಎಂದು ಅವರು ಹೇಳಿದ್ದಾರೆ.
ದೇಶದ ಹೆಸರಿನಲ್ಲಿ ಮೋದಿ ಜನರ ಚಿನ್ನಾಭರಣ ಕಿತ್ತುಕೊಂಡಿಲ್ಲ: ಜಿಗಜಿಣಗಿ


