ವಿಜಯಪುರದಲ್ಲಿ ವಿಶ್ವ ಪ್ರವಾಸೋದ್ಯಮ ದಿನಾಚರಣೆ
ಸಪ್ತಸಾಗರ ವಾರ್ತೆ, ವಿಜಯಪುರ, ಸೆ. 26:
ವಿಜಯಪುರದ ಐತಿಹಾಸಿಕ ಸ್ಮಾರಕಗಳನ್ನು ವಿಶ್ವಮಟ್ಟದಲ್ಲಿ ಪ್ರವಾಸಿ ಆಕರ್ಷಣೆಯನ್ನಾಗಿ ರೂಪಿಸಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಸೆಳೆಯುವುದರಿಂದ ಜಿಲ್ಲೆಯ ಆರ್ಥಿಕತೆಗೆ ಮತ್ತಷ್ಟು ಬಲ ದೊರೆಯುವುದರ ಜೊತೆಗೆ ಸ್ಥಳೀಯರಿಗೆ ದೊಡ್ಡ ಪ್ರಮಾಣದಲ್ಲಿ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ ಎಂದು ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿ ಆರ್. ಹಿತೇಂದ್ರ ಹೇಳಿದರು.
ವಿಶ್ವ ಪ್ರವಾಸೋದ್ಯಮ ದಿನಾಚರಣೆ-2026ರ ಅಂಗವಾಗಿ ‘ಡಿಜಿಟಲ್ ಕಾರ್ಯಸೂಚಿ ಮತ್ತು ಕೃತಕ ಬುದ್ಧಿಮತ್ತೆ ಬಳಸಿ ಪ್ರವಾಸೋದ್ಯಮದ ಮರುಸೃಷ್ಟಿ’ ಎಂಬ ಧ್ಯೇಯವಾಕ್ಯದೊಂದಿಗೆ ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳು ಹಾಗೂ ಸಂಸ್ಥೆಗಳ ಸಹಯೋಗದಲ್ಲಿ ನಗರದ ಆನಂದ ಮಹಲ್ ಸ್ಮಾರಕದ ಆವರಣದಲ್ಲಿ ಆಯೋಜಿಸಿದ್ದ ‘ಸ್ವಚ್ಛತಾ ಹೀ ಸೇವಾ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಿಜಯಪುರವು ತನ್ನ ಅಪೂರ್ವ ಐತಿಹಾಸಿಕ ಸ್ಮಾರಕಗಳಿಂದ ವಿಶ್ವದ ಗಮನ ಸೆಳೆದಿದೆ. ಈ ಪರಂಪರೆಯನ್ನು ಸಮರ್ಪಕವಾಗಿ ಸಂರಕ್ಷಿಸಿ, ಪ್ರವಾಸಿಗರಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಿ ಪ್ರವಾಸೋದ್ಯಮವನ್ನು ಉತ್ತೇಜಿಸಿದರೆ ಹೋಟೆಲ್, ಸಾರಿಗೆ, ಪ್ರವಾಸಿ ಮಾರ್ಗದರ್ಶನ, ಕೈಗಾರಿಕೆ, ಕರಕುಶಲ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶಗಳು ಹೆಚ್ಚಲಿವೆ ಎಂದು ಅವರು ಹೇಳಿದರು.
ಜಿಲ್ಲಾಧಿಕಾರಿ ಡಾ. ಆನಂದ ಕೆ. ಮಾತನಾಡಿ, ಜಿಲ್ಲೆಯ ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆ, ಅಭಿವೃದ್ಧಿ ಮತ್ತು ಸೌಂದರ್ಯೀಕರಣಕ್ಕೆ ಆದ್ಯತೆ ನೀಡಲಾಗುತ್ತಿದೆ. ಪ್ರವಾಸಿಗರಿಗೆ ಅಗತ್ಯ ಮೂಲಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿಯೂ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ಸ್ವದೇಶ ದರ್ಶನ ಯೋಜನೆ-2.0ರಡಿ ಜಿಲ್ಲೆಯ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸ್ಮಾರಕ ದತ್ತು ಯೋಜನೆಯಡಿ ತಾಜಬಾವಡಿ ಅಭಿವೃದ್ಧಿಗೆ ಟಾಟಾ ಕನ್ಸಲ್ಟೆನ್ಸಿ ಫೌಂಡೇಷನ್ ಹಾಗೂ ವರ್ಲ್ಡ್ ಮಾನ್ಯುಮೆಂಟ್ ಫಂಡ್ ಸಹಯೋಗ ಪಡೆಯಲಾಗಿದೆ. ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯಿಂದಲೂ ವಿವಿಧ ಸ್ಮಾರಕಗಳ ಸಂರಕ್ಷಣಾ ಕಾರ್ಯ ನಡೆಯುತ್ತಿದೆ ಎಂದು ತಿಳಿಸಿದರು.
ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳ ಸಮಗ್ರ ಮಾಹಿತಿಯನ್ನು ಒಳಗೊಂಡ ಆ್ಯಪ್ ಸಿದ್ಧಪಡಿಸಲಾಗಿದ್ದು, ಪ್ರವಾಸಿಗರಿಗೆ ಅಗತ್ಯ ಮಾಹಿತಿ ಸುಲಭವಾಗಿ ದೊರೆಯುವಂತೆ ಕ್ರಮ ಕೈಗೊಳ್ಳಲಾಗಿದೆ ಎಂದರು.
ಸ್ಮಾರಕ ಸ್ವಚ್ಛತೆಗೆ ಚಾಲನೆ
‘ಸ್ವಚ್ಛತಾ ಹೀ ಸೇವಾ’ ಆಂದೋಲನದಡಿ ಆನಂದ ಮಹಲ್ ಸ್ಮಾರಕದ ಆವರಣದಲ್ಲಿ ಸ್ವಚ್ಛತಾ ಕಾರ್ಯ ಹಮ್ಮಿಕೊಳ್ಳಲಾಯಿತು. ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ಅರವಿಂದ ಹೂಗಾರ ಚಾಲನೆ ನೀಡಿದರು.
ಇಬ್ರಾಹಿಂ ರೋಜಾದಲ್ಲಿ ಕಲಾವಿದರ ಕಲರವ
ಎನ್ಟಿಪಿಸಿ ಕೂಡಗಿ ಹಾಗೂ ಕ್ಯಾನವಾಸ್ ಆರ್ಟ್ ಫೌಂಡೇಷನ್ ಸಹಯೋಗದಲ್ಲಿ ಐತಿಹಾಸಿಕ ಇಬ್ರಾಹಿಂ ರೋಜಾ ಆವರಣದಲ್ಲಿ ಹಿರಿಯ ಹಾಗೂ ಉದಯೋನ್ಮುಖ ಕಲಾವಿದರಿಗಾಗಿ ಚಿತ್ರಕಲಾ ಶಿಬಿರ ಆಯೋಜಿಸಲಾಗಿತ್ತು. ಜಿಲ್ಲಾಧಿಕಾರಿ ಡಾ. ಆನಂದ ಕೆ. ಅವರು ಸ್ವತಃ ಚಿತ್ರ ಬಿಡಿಸುವ ಮೂಲಕ ಶಿಬಿರಕ್ಕೆ ಚಾಲನೆ ನೀಡಿದ್ದು ವಿಶೇಷವಾಗಿತ್ತು.
25ಕ್ಕೂ ಹೆಚ್ಚು ಕಲಾವಿದರು ಭಾಗವಹಿಸಿ ಐತಿಹಾಸಿಕ ಸ್ಮಾರಕಗಳ ಸೌಂದರ್ಯವನ್ನು ತಮ್ಮ ಕುಂಚದ ಮೂಲಕ ಸೆರೆಹಿಡಿದರು.
ಕಾರ್ಯಕ್ರಮದಲ್ಲಿ ಎನ್ಟಿಪಿಸಿ ಕಾರ್ಪೊರೇಟ್ ಸಂಪರ್ಕಾಧಿಕಾರಿ ಪೂಜಾ ಪಾಂಡೆ, ಡಿಜಿಎಂ ಜಯದೀಪ ತುಶಾರ, ಎಎಸ್ಐ ಸಹಾಯಕ ಸಂರಕ್ಷಣಾಧಿಕಾರಿ ವಿಜಯಕುಮಾರ, ಎಚ್ಆರ್ ಮುಖ್ಯಸ್ಥ ಎಸ್.ವಿ.ಡಿ. ರವಿಕುಮಾರ, ಹೋಟೆಲ್ ಅಸೋಸಿಯೇಷನ್ ಕಾರ್ಯದರ್ಶಿ ವಿಜಯಕುಮಾರ ದೋಣಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಪ್ರವಾಸಿ ಮಾರ್ಗದರ್ಶಕರು, ಕಲಾವಿದರು, ವಿದ್ಯಾರ್ಥಿನಿಯರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ಅರವಿಂದ ಹೂಗಾರ ಸ್ವಾಗತಿಸಿದರು. ಕಲಾವಿದ ರಮೇಶ ಚವ್ಹಾಣ ನಿರೂಪಿಸಿದರು.


