ಸಪ್ತಸಾಗರ ವಾರ್ತೆ,ವಿಜಯಪುರ, ಜೂ. 13:
ಸೈಕ್ಲಿಂಗ್ ಕ್ರೀಡೆಗೆ ರಾಜ್ಯದಲ್ಲೇ ವಿಶಿಷ್ಟ ಗುರುತನ್ನು ಹೊಂದಿರುವ ವಿಜಯಪುರ ನಗರದಲ್ಲಿ ಜಿಲ್ಲಾ ಮಟ್ಟದ ಆಸ್ಮಿತಾ ಖೇಲೋ ಇಂಡಿಯಾ ಮಹಿಳಾ ಸೈಕ್ಲಿಂಗ್ ಸಿಟಿ ಲೀಗ್ ಸ್ಪರ್ಧೆಯನ್ನು ಶನಿವಾರ ಅದ್ಧೂರಿಯಾಗಿ ಆಯೋಜಿಸಲಾಯಿತು.
ಕೇಂದ್ರ ಸರ್ಕಾರದ ಕ್ರೀಡಾ ಪ್ರಾಧಿಕಾರ, ಸೈಕ್ಲಿಂಗ್ ಫೆಡರೇಷನ್ ಆಫ್ ಇಂಡಿಯಾ, ಕರ್ನಾಟಕ ರಾಜ್ಯ ಅಮೆಚೂರ್ ಸೈಕ್ಲಿಂಗ್ ಅಸೋಸಿಯೇಶನ್, ಜಿಲ್ಲಾ ಸೈಕ್ಲಿಂಗ್ ಅಸೋಸಿಯೇಶನ್, ವಿಶಾಲ್ ಸೈಕಲ್ ಮಾಲ್, ಜಿಲ್ಲಾಡಳಿತ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ನಡೆದ ಈ ಲೀಗ್ಗೆ ಸಂಸದ ರಮೇಶ ಜಿಗಜಿಣಗಿ ಹಾಗೂ ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಪ್ರಿನ್ಸಿಪಲ್ ರಾಜಲಕ್ಷ್ಮಿ ಪೃಥ್ವಿರಾಜ್, ಅಧ್ಯಕ್ಷ ರಾಜು ಬಿರಾದಾರ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಂಸದ ರಮೇಶ ಜಿಗಜಿಣಗಿ, ದೇಶದಲ್ಲಿ ಕ್ರೀಡಾ ಕ್ಷೇತ್ರದ ಬೆಳವಣಿಗೆಗೆ ಕೇಂದ್ರ ಸರ್ಕಾರ ವಿಶೇಷ ಒತ್ತು ನೀಡುತ್ತಿದ್ದು, ಮಹಿಳಾ ಕ್ರೀಡಾಪಟುಗಳಿಗೆ ಹೆಚ್ಚಿನ ಅವಕಾಶಗಳನ್ನು ಕಲ್ಪಿಸಲಾಗುತ್ತಿದೆ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರ ಆಶಯದಂತೆ ದೇಶದ ವಿವಿಧ ಜಿಲ್ಲೆಗಳಲ್ಲಿ ಸೈಕ್ಲಿಂಗ್ ಸೇರಿದಂತೆ ವಿವಿಧ ಕ್ರೀಡಾಕೂಟಗಳನ್ನು ಆಯೋಜಿಸುವ ಮೂಲಕ ಗ್ರಾಮೀಣ ಹಾಗೂ ನಗರ ಪ್ರದೇಶಗಳ ಪ್ರತಿಭೆಗಳನ್ನು ಗುರುತಿಸುವ ಕಾರ್ಯ ನಡೆಯುತ್ತಿದೆ ಎಂದು ತಿಳಿಸಿದರು.
2038ರ ಒಲಿಂಪಿಕ್ಸ್ ಗುರಿಯಾಗಿಸಿಕೊಂಡು ಕ್ರೀಡಾಪಟುಗಳನ್ನು ಈಗಿನಿಂದಲೇ ಸಿದ್ಧಗೊಳಿಸುವ ಉದ್ದೇಶದಿಂದ ಇಂತಹ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತಿದೆ. ರಾಜ್ಯದ ಆರು ಜಿಲ್ಲೆಗಳಲ್ಲಿ ಆಸ್ಮಿತಾ ಮಹಿಳಾ ಸೈಕ್ಲಿಂಗ್ ಲೀಗ್ ನಡೆಸಲಾಗುತ್ತಿದ್ದು, ಯುವತಿಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ಅಮೆಚೂರ್ ಸೈಕ್ಲಿಂಗ್ ಅಸೋಸಿಯೇಶನ್ ಅಧ್ಯಕ್ಷ ರಾಜು ಬಿರಾದಾರ, ವಿಜಯಪುರ ಜಿಲ್ಲೆ ರಾಜ್ಯದಲ್ಲಿಯೇ ಸೈಕ್ಲಿಂಗ್ ಕ್ರೀಡೆಗೆ ಹೆಸರುವಾಸಿಯಾಗಿದ್ದು, ರಾಷ್ಟ್ರೀಯ, ರಾಜ್ಯ ಹಾಗೂ ಜಿಲ್ಲಾ ಮಟ್ಟದ ಅನೇಕ ಸ್ಪರ್ಧೆಗಳಿಗೆ ಆತಿಥ್ಯ ವಹಿಸಿದೆ ಎಂದು ಹೇಳಿದರು.
ಜಿಲ್ಲೆಯ ಕ್ರೀಡಾಭಿಮಾನಿಗಳು ಹಾಗೂ ಸಹೃದಯ ದಾನಿಗಳ ಬೆಂಬಲದಿಂದ ಸೈಕ್ಲಿಂಗ್ ಕ್ರೀಡೆ ನಿರಂತರವಾಗಿ ಬೆಳೆಯುತ್ತಿದ್ದು, ಈ ಬಾರಿಯ ಆಸ್ಮಿತಾ ವುಮೆನ್ಸ್ ಲೀಗ್ ಕೂಡ ಯಶಸ್ವಿಯಾಗಿ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಸ್ಪರ್ಧೆಯಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ ಮಹಿಳಾ ಸೈಕ್ಲಿಸ್ಟ್ಗಳು ಉತ್ಸಾಹದಿಂದ ಪಾಲ್ಗೊಂಡು ತಮ್ಮ ಸಾಮರ್ಥ್ಯ ಪ್ರದರ್ಶಿಸಿದರು. ಸ್ಪರ್ಧೆಯ ನಂತರ ನಡೆದ ಸಮಾರೋಪ ಸಮಾರಂಭದಲ್ಲಿ ವಿಜೇತ ಕ್ರೀಡಾಪಟುಗಳಿಗೆ ಪ್ರಶಸ್ತಿ ಹಾಗೂ ಪದಕಗಳನ್ನು ವಿತರಿಸಲಾಯಿತು.
ಆಸ್ಮಿತಾ ವುಮೆನ್ಸ್ ಲೀಗ್ (ಇಂಡಿಯನ್ ಮೇಡ್ ಸೈಕ್ಲಿಂಗ್) ವಿಭಾಗದಲ್ಲಿ ಅಪೇಕ್ಷಾ ಜಗತಾಪ್ ಪ್ರಥಮ, ವೆಂಕವ್ವ ಧ್ಯಾಮಣ್ಣನವರ ದ್ವಿತೀಯ ಹಾಗೂ ಶ್ರೀದೇವಿ ತೃತೀಯ ಸ್ಥಾನ ಪಡೆದರು. 18 ವರ್ಷದ ವಯೋಮಿತಿ ವಿಭಾಗದಲ್ಲಿ ಐಶು ಚವ್ಹಾಣ ಪ್ರಥಮ, ಶಿವಬಾಯಿ ದ್ವಿತೀಯ ಹಾಗೂ ಶ್ವೇತಾ ತೃತೀಯ ಸ್ಥಾನ ಪಡೆದರು. 16 ವರ್ಷದೊಳಗಿನ ವಿಭಾಗದಲ್ಲಿ ಶಿವಾನಿ ಬೂದಿಹಾಳ ಪ್ರಥಮ, ಅಲ್ಫಿಯಾ ಜಹಾಗೀರದಾರ ದ್ವಿತೀಯ ಹಾಗೂ ಹರ್ಷಿತಾ ಭಜಂತ್ರಿ ತೃತೀಯ ಸ್ಥಾನ ಗಳಿಸಿದರು.
ಪ್ರೊಫೆಷನಲ್ ವಿಭಾಗದ ವುಮೆನ್ಸ್ ಎಲೈಟ್ ಸ್ಪರ್ಧೆಯಲ್ಲಿ ಗಂಗಾ ದಂಡಿ ಪ್ರಥಮ, ಪಾಯಲ್ ಚವ್ಹಾಣ ದ್ವಿತೀಯ ಹಾಗೂ ಸವಿತಾ ಆಡಗಲ್ ತೃತೀಯ ಸ್ಥಾನ ಪಡೆದರು. 18 ವರ್ಷದ ವಯೋಮಿತಿ ವಿಭಾಗದಲ್ಲಿ ಜ್ಯೋತಿ ರಾಠೋಡ ಪ್ರಥಮ, ದಿವ್ಯಶ್ರೀ ಲೋಣಿ ದ್ವಿತೀಯ ಹಾಗೂ ಸಂಗವ್ವ ಬನಸೋಡೆ ತೃತೀಯ ಸ್ಥಾನ ಪಡೆದರು. 16 ವರ್ಷದ ವಯೋಮಿತಿ ವಿಭಾಗದಲ್ಲಿ ವರ್ಷಾ ಚವ್ಹಾಣ ಪ್ರಥಮ, ಕೌಶಲ್ಯ ರಾಮಗೊಂಡ ದ್ವಿತೀಯ ಹಾಗೂ ಭೂಮಿಕಾ ಬೂದಿಹಾಳ ತೃತೀಯ ಸ್ಥಾನ ಪಡೆದು ಗಮನ ಸೆಳೆದರು.
ಮಹಾನಗರ ಪಾಲಿಕೆ ಸದಸ್ಯೆಯರಾದ ಆರತಿ ಶಹಾಪುರ, ಸ್ವಪ್ನಾ ಕಣಮುಚನಾಳ ಹಾಗೂ ಸುನೀತಾ ಮಹೇಶ ಒಡೆಯರ್ ಅವರು ವಿಜೇತರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಈ ವೇಳೆ ಮಾತನಾಡಿದ ಸ್ವಪ್ನಾ ಕಣಮುಚನಾಳ, ವಿಜಯಪುರ ಜಿಲ್ಲೆಯಲ್ಲಿ ಕ್ರೀಡೆಗೆ ಉತ್ತಮ ಪ್ರೋತ್ಸಾಹ ದೊರೆಯುತ್ತಿದ್ದು, ಮುಂದಿನ ದಿನಗಳಲ್ಲಿ ಇಲ್ಲಿಂದ ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡುವ ಸೈಕ್ಲಿಂಗ್ ಪಟುಗಳು ಹೊರಹೊಮ್ಮಲಿ ಎಂದು ಆಶಿಸಿದರು. ಇದೇ ಸಂದರ್ಭದಲ್ಲಿ ಎರಡನೇ ಬಾರಿಗೆ ರಾಜ್ಯ ಅಮೆಚೂರ್ ಸೈಕ್ಲಿಂಗ್ ಅಸೋಸಿಯೇಷನ್ನ ಅಧ್ಯಕ್ಷರಾಗಿ ಆಯ್ಕೆಯಾದ ರಾಜು ಬಿರಾದಾರ ಅವರಿಗೆ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಮಹಾಪೌರ ಮಡಿವಾಳಪ್ಪ ಕರಡಿ, ಸೈನಿಕ ಶಾಲೆಯ ಪ್ರಾಂಶುಪಾಲೆ ರಾಜಲಕ್ಷ್ಮಿ ಪೃಥ್ವಿರಾಜ, ಮಹಾನಗರ ಪಾಲಿಕೆ ಸದಸ್ಯರಾದ ರಾಹುಲ್ ಜಾಧವ, ಶಿವರುದ್ರ ಬಾಗಲಕೋಟ, ಆಸೀಫ್ ಶ್ಯಾನವಾಲೆ, ಅಷ್ಪಾಕ್ ಮನಗೂಳಿ, ವಿಸಿಜಿ ಗ್ರೂಪ್ನ ಶಿವನಗೌಡ ಪಾಟೀಲ, ವಿಶಾಲ್ ಸೈಕಲ್ ಮಾಲ್ನ ವಿಶಾಲ ಹಿರಜಕರ, ಡಿವೈಎಸ್ಪಿ ನಾಗರಾಜ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಅಧಿಕಾರಿ ರಾಜಶೇಖರ ದೈವಾಡಿ ಸೇರಿದಂತೆ ಅನೇಕ ಗಣ್ಯರು, ಕ್ರೀಡಾಭಿಮಾನಿಗಳು ಹಾಗೂ ಹಿರಿಯ ಸೈಕ್ಲಿಸ್ಟ್ಗಳು ಉಪಸ್ಥಿತರಿದ್ದರು.
ಜಿಲ್ಲಾ ಮಟ್ಟದ ಆಸ್ಮಿತಾ ವುಮೆನ್ಸ್ ಸೈಕ್ಲಿಂಗ್ ಲೀಗ್ಗೆ ಸಂಸದ ರಮೇಶ ಜಿಗಜಿಣಗಿ ಚಾಲನೆ


