‘ನಾನು’ ಕನ್ನಡ ವೆಬ್ ಸರಣಿಗೆ ಮುಹೂರ್ತ

ಸಪ್ತಸಾಗರ ವಾರ್ತೆ,ಮೈಸೂರು, ಜು.17: ಜೆ.ಕೆ. ಪ್ರೊಡಕ್ಷನ್, ಮೈಸೂರು ನಿರ್ಮಿಸುತ್ತಿರುವ ‘ನಾನು’ ಕನ್ನಡ ವೆಬ್ ಸರಣಿಯ ಚಿತ್ರೀಕರಣಕ್ಕೆ ನಗರದ ಬಂಬು ಬಜಾರ್ ರಸ್ತೆಯ ಶ್ರೀ ಸತ್ಯನಾರಾಯಣ ಸ್ವಾಮಿ ದೇವಸ್ಥಾನದಲ್ಲಿ ಸರಳವಾಗಿ ಮುಹೂರ್ತ ನೆರವೇರಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಹಿರಿಯ ಛಾಯಾಗ್ರಾಹಕ ಸದಾಶಿವ ಹಿರೇಮಠ ಅವರು ವೆಬ್ ಸರಣಿಗೆ ಶುಭ ಹಾರೈಸಿ, ಉತ್ತಮ ಕಥಾಹಂದರದೊಂದಿಗೆ ಪ್ರೇಕ್ಷಕರ ಮನಗೆಲ್ಲಲಿ ಎಂದು ಆಶಿಸಿದರು.
ನಿರ್ದೇಶಕ ಕಲಿ ಮಾತನಾಡಿ, ಇಂದಿನ ಸಮಾಜದಲ್ಲಿ ಯುವಜನರ ಮೇಲೆ ಸಾಮಾಜಿಕ ಜಾಲತಾಣಗಳ ಪ್ರಭಾವ, ಅವರ ಜೀವನದಲ್ಲಿ ನಡೆಯುತ್ತಿರುವ ಬದಲಾವಣೆಗಳು ಹಾಗೂ ಸಮಕಾಲೀನ ಸಮಸ್ಯೆಗಳನ್ನು ಈ ವೆಬ್ ಸರಣಿಯ ಮೂಲಕ ಅರ್ಥಪೂರ್ಣವಾಗಿ ಪ್ರಸ್ತುತಪಡಿಸಲಾಗುವುದು ಎಂದು ತಿಳಿಸಿದರು. ಜುಲೈ 19ರಿಂದ ಮೈಸೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚಿತ್ರೀಕರಣ ಆರಂಭವಾಗಲಿದೆ ಎಂದರು.
ವೆಬ್ ಸರಣಿಯಲ್ಲಿ ಕಲಿ, ದಿಶಾ, ಪ್ರಿಯಾಂಕಾ, ಮಹೇಶ್, ರೋಹಿತ್, ಸಿದ್ದು ಮತ್ತು ರವಿ ಸೇರಿದಂತೆ ಹಲವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.
ಛಾಯಾಗ್ರಹಣವನ್ನು ನಿರೀಕ್ಷಿತ್ ತಂಡ ನಿರ್ವಹಿಸಲಿದ್ದು, ಪತ್ರಿಕಾ ಸಂಪರ್ಕವನ್ನು ಡಾ. ಪ್ರಭು ಗಂಜಿಹಾಳ ಹಾಗೂ ಡಾ. ವೀರೇಶ್ ಹಂಡಿಗಿ ವಹಿಸಿಕೊಂಡಿದ್ದಾರೆ. ಕಥೆ, ಚಿತ್ರಕಥೆ, ಸಂಭಾಷಣೆ ಮತ್ತು ನಿರ್ದೇಶನದ ಜವಾಬ್ದಾರಿಯನ್ನು ಕಲಿ ನಿರ್ವಹಿಸಿದ್ದು, ನಿರ್ಮಾಪಕರಾಗಿ ಜಯಮ್ಮ ಕಾಂತರಾಜ್ ಕಾರ್ಯನಿರ್ವಹಿಸುತ್ತಿದ್ದಾರೆ.

Share this