ಸಪ್ತಸಾಗರ ವಾರ್ತೆ,ವಿಜಯಪುರ, ಜು.11: ವಿಜಯಪುರ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಯಾವುದೇ ನೈಜ ಮತದಾರರು ಮತದಾರರ ಪಟ್ಟಿಯಿಂದ ಹೊರಗುಳಿಯದಂತೆ ಹಾಗೂ ಅನರ್ಹರು ಪಟ್ಟಿಗೆ ಸೇರ್ಪಡೆಯಾಗದಂತೆ ತಡೆಯಲು ಮಹಾನಗರ ಪಾಲಿಕೆ ವಿಶೇಷ ಕಾರ್ಯಾಚರಣೆ ಆರಂಭಿಸಿದೆ.
ಮಹಾನಗರ ಪಾಲಿಕೆ ಆಯುಕ್ತರು ಹಾಗೂ ವಿಜಯಪುರ ನಗರ ವಿಧಾನಸಭಾ ಕ್ಷೇತ್ರದ ಮತದಾರರ ನೋಂದಣಾಧಿಕಾರಿಗಳು ಈ ಕುರಿತು ಮಾಹಿತಿ ನೀಡಿ, ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಅಂಗವಾಗಿ ಜೂನ್ 30ರಿಂದ ಮನೆ-ಮನೆಗೆ ತೆರಳಿ ಗಣತಿ ನಮೂನೆಗಳನ್ನು ವಿತರಿಸುವ ಕಾರ್ಯ ನಡೆಯುತ್ತಿದ್ದು, ಇದುವರೆಗೆ 2,18,163 ಮತದಾರರಿಗೆ ಯಶಸ್ವಿಯಾಗಿ ನಮೂನೆಗಳನ್ನು ತಲುಪಿಸಲಾಗಿದೆ ಎಂದು ತಿಳಿಸಿದ್ದಾರೆ.
ಇನ್ನೂ ಗಣತಿ ನಮೂನೆ ತಲುಪದ ಹಾಗೂ ಸ್ಥಳಾಂತರಗೊಂಡಿರುವ ಅರ್ಹ ಮತದಾರರನ್ನು ಗುರುತಿಸಲು ಪಾಲಿಕೆಯ ಆರೋಗ್ಯ ವಿಭಾಗದ ಅಧಿಕಾರಿಗಳು, ಸಿಬ್ಬಂದಿ ಹಾಗೂ ಕಸದ ವಾಹನಗಳ ಚಾಲಕರ ಮೂಲಕ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಅವರು ಗಣತಿ ನಮೂನೆ ಸಿಗದ ಮತದಾರರ ಮತದಾರರ ಗುರುತಿನ ಚೀಟಿ ಸಂಖ್ಯೆ ಹಾಗೂ ಪ್ರಸ್ತುತ ಮೊಬೈಲ್ ಸಂಖ್ಯೆ ಸಂಗ್ರಹಿಸಲಿದ್ದು, ಬಳಿಕ ಸಂಬಂಧಿತ ಮತಗಟ್ಟೆ ಮಟ್ಟದ ಅಧಿಕಾರಿಗಳ (ಬಿಎಲ್ಒ) ಮೂಲಕ ನಮೂನೆಗಳನ್ನು ತಲುಪಿಸಿ, ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ವಿಜಯಪುರ ನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಸ್ಥಳಾಂತರಗೊಂಡು ಇನ್ನೂ ಗಣತಿ ನಮೂನೆ ಪಡೆಯದ ಮತದಾರರು 08352-200425 ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡುವಂತೆ ಮನವಿ ಮಾಡಲಾಗಿದೆ.
ಪಾಲಿಕೆ ಅಧಿಕಾರಿಗಳು ಅಥವಾ ಸಿಬ್ಬಂದಿ ಮನೆಗೆ ಭೇಟಿ ನೀಡಿದಾಗ ಮತದಾರರ ಗುರುತಿನ ಚೀಟಿ ಹಾಗೂ ಮೊಬೈಲ್ ಸಂಖ್ಯೆಯ ನಿಖರ ಮಾಹಿತಿ ನೀಡಿ ಸಹಕರಿಸಬೇಕು. ಸಾರ್ವಜನಿಕರು ಈ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಭಾಗವಹಿಸಿ, ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇರುವುದನ್ನು ಖಚಿತಪಡಿಸಿಕೊಳ್ಳುವಂತೆ ಪಾಲಿಕೆ ಆಯುಕ್ತರು ಪ್ರಕಟಣೆಯಲ್ಲಿ ಕೋರಿದ್ದಾರೆ.
ಸ್ಥಳಾಂತರಗೊಂಡ ಮತದಾರರ ಪತ್ತೆಗೆ ಪಾಲಿಕೆಯ ವಿಶೇಷ ಕಾರ್ಯಾಚರಣೆ


