ಎ.2ರಂದು “ನಾನು ಕರುಣಾಕರ” ಚಲನಚಿತ್ರ ಬಿಡುಗಡೆ

ಸಪ್ತಸಾಗರ ವಾರ್ತೆ, ವಿಜಯಪುರ, ಫೆ. 7: ಮಕ್ಕಳು ನೋಡಬೇಕಾದ ಹಾಗೂ ಮಗನ ಆಸೆ ಪೂರೈಸಲು ತಂದೆ ಯಾವ ರೀತಿ ಪ್ರಯತ್ನಿಸುತ್ತಾನೆ ಎಂಬ ಕಥಾ ಹಂದರವುಳ್ಳ ಸದಭಿರುಚಿಯ `ನಾನು ಕರುಣಾಕರ’ ಎಂಬ ಚಲನಚಿತ್ರ ಫೋಸ್ಟ್ ಪ್ರೊಡೆಕ್ಷನ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಎಪ್ರಿಲ್ 2 ರಂದು ಬಿಡುಗಡೆಗೊಳ್ಳಲಿದೆ ಎಂದು ಚಲನಚಿತ್ರದ ನಿರ್ಮಾಪಕ ನಮನ್ ನಾರಾಯಣ ಸಂತೋಷ್ ಹೇಳಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಕ್ಕಳ ಸಿನೆಮಾಗಳು ಇತ್ತೀಚಿಗೆ ಬರುತ್ತಿಲ್ಲ ಎಂಬ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ ಈ ಹೊಸ ಪ್ರಯತ್ನಕ್ಕೆ ಕೈ ಹಾಕಲಾಗಿದೆ, ಮಧ್ಯಮ ವರ್ಗದ ಕುಟುಂಬದ ಮಗುವಿನ ಆಸೆಯನ್ನು ಈಡೇರಿಸುವ ನಿಟ್ಟಿನಲ್ಲಿ ಓರ್ವ ತಂದೆ ಶ್ರಮಿಸುವ ಪರಿ ಕಥಾ ವಸ್ತು ಹೊಂದಿದೆ. ಕುಟುಂಬ ಸದಸ್ಯರು ಒಟ್ಟಿಗೆ ಕುಳಿತು ನೋಡುವ ಸದಭಿರುಚಿಯ ಚಿತ್ರ ಇದಾಗಿದ್ದು, ಚಿತ್ರ ಫೋಸ್ಟರ್ ಮೆಚ್ಚಿ ಸ್ವಯಂ ಪ್ರೇರಿತವಾಗಿ ಖ್ಯಾತ ಪತ್ರಕರ್ತೆ ಹಾಗೂ ’ಹಾಯ್ ಬೆಂಗಳೂರು ’ ಸಂಪಾದಕಿ ಭಾವನಾ ಬೆಳೆಗೆರೆ ಅವರು ಚಿತ್ರ ತಂಡಕ್ಕೆ ಬೆನ್ನೆಲುಬಾಗಿ ನಿಂತಿದ್ದಾರೆ. ತಂದೆ ಪ್ರೀತಿ, ಮಗನ ಆಸೆ ಮೊದಲಾದ ಕಥಾವಸ್ತುವನ್ನು ಇರಿಸಿಕೊಂಡು ಕಥೆ ಮಾಡಿದ್ದಕ್ಕೆ ಅಭಿನಂದನೆಯ ಜೊತೆಗೆ ಸಹಾಯ ಸಹಕಾರ ನೀಡುತ್ತಿದ್ದಾರೆ ಎಂದರು.
ನಾಡಿನ ಅನೇಕ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ಉಚಿತವಾಗಿ ಈ ಸಿನೆಮಾ ಪ್ರದರ್ಶನಕ್ಕೆ ಮುಂದಾಗಿದ್ದಾರೆ ಎಂದರು.
ತಾರಾಗಣದಲ್ಲಿ ಆರ್ಯನ್ ತೇಜಸ್, ರಾಧಾ ಭಾಗವತಿ, ಕು.ರವೀಶಗೌಡ ಸೇರಿದಂತೆ ಅನೇಕರು ನಟಿಸಿದ್ದಾರೆ, ಕಾಮಿಡಿ ಕಿಲಾಡಿ ಖ್ಯಾತಿಯ ಮುತ್ತುರಾಜ್, ಬಿ.ಎಂ. ವೆಂಕಟೇಶ ಸೇರಿದಂತೆ ಅನೇಕರು ನಟಿಸಿದ್ದು, ರೋಹಿತ್ ಅವರು ಸಂಗೀತ ನಿರ್ದೇಶಿಸಿದ್ದು, ಚಿತ್ರದಲ್ಲಿ ಆರು ಮಧುರ ಹಾಡುಗಳಿವೆ ಎಂದರು.
ಖ್ಯಾತ ಪತ್ರಕರ್ತೆ ಭಾವನಾ ಬೆಳಗೆರೆ ಮಾತನಾಡಿ, ನಾನು ಕರುಣಾಕರ ಬಗ್ಗೆ ತಿಳಿದುಕೊಂಡಾಗ ಸಂತೋಷವಾಯಿತು. ಚಿತ್ರ ತಂಡದ ಪರಿಚಯವೇ ನನಗೆ ಇರಲಿಲ್ಲ, ಚಿತ್ರದ ಬಗ್ಗೆ ತಿಳಿದುಕೊಂಡು ನಾನೇ ಸ್ವತ: ಚಿತ್ರತಂಡವನ್ನು ಸಂಪರ್ಕಿಸಿ ಅವರಿಗೆ ನನ್ನ ಕಚೇರಿಗೆ ಆಹ್ವಾನಿಸಿದೆ. ತಂದೆ-ಮಗನ ಹಾಡೇ ಅದ್ಭುತ. ಈ ರೀತಿಯ ಮೌಲ್ಯಾಧಾರಿತ ಚಿತ್ರಗಳು ಬರಬೇಕಿದೆ. ಕೇವಲ ಫೈಟಿಂಗ್, ರೋಮ್ಯಾನ್ಸ್ ಗಳಿಗೆ ಕಟ್ಟು ಬೀಳುವ ಕಥೆಗಳ ನಡುವೆ ಈ ರೀತಿಯ ಸದಭಿರುಚಿಯ ಚಿತ್ರ ಬರಬೇಕು ಎನ್ನುವ ಕಾರಣಕ್ಕೆ ಇದನ್ನು ಪ್ರೋತ್ಸಾಹಿಸುತ್ತಿರುವೆ ಎಂದರು.
ಇತ್ತೀಚಿಗೆ ಹೀರೋ ಅಷ್ಟೇ ಪ್ರದಾನವಾಗುತ್ತಿದ್ದಾನೆ. ಪ್ರೋಡ್ಯೂಸರ್ ಹಾಗೂ ಡೈರೆಕ್ಟರ್ ಆತನಿಗೆ ತಲೆ ಬಾಗುವಂತಹ ಪರಿಸ್ಥಿತಿ ಇದೆ. ಆದರೆ ಕ್ರಿಯಾಶೀಲತೆ ಡೈರೆಕ್ಟರ್ ಗೆ ಮಾತ್ರ ಇರುತ್ತದೆ. ಹೀಗಾಗಿ ಈ ವ್ಯವಸ್ಥೆ ಕೊನೆಗಾಣಬೇಕು. ಹೀರೋ ಅಷ್ಟೇ ಪ್ರಮುಖವಲ್ಲ ಎನ್ನುವ ಮನೋಭಾವ ದೂರವಾಗಬೇಕು ಎಂದರು.
ಚಿತ್ರದ ನಟಿ ರಾಧಾ ಭಾಗವತಿ ಮಾತನಾಡಿ, ತಾಯಿ ಯಾವ ರೀತಿ ಮಗು ನೋಡಿಕೊಳ್ಳೋತ್ತಾಳೋ ಅದೇ ರೀತಿ ತಂದೆ ತನ್ನ ಮಗುವಿಗೆ ತೋರುವ ಕಾಳಜಿ, ಪ್ರೀತಿ ಇದರಲ್ಲಿ ವ್ಯಕ್ತವಾಗಿದ್ದು, ಪತಿ-ಪತ್ನಿಯ ಬಾಂಧವ್ಯವೂ ಕಥೆಯಲ್ಲಿದ್ದು ಎಲ್ಲರಿಗೂ ಈ ಕಥೆ ಆಪ್ತವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಚಲನಚಿತ್ರವನ್ನು ತಮ್ಮ ವಿದ್ಯಾರ್ಥಿಗಳಿಗೆ ತೋರಿಸಲಿಚ್ಛಿಸುವ ಶಿಕ್ಷಣ ಸಂಸ್ಥೆಗಳು (ಮೊಬೈಲ್)63665 90969 ಈ ಮೊ.ನಂಬರಿಗೆ ಸಂಪರ್ಕಿಸಬಹುದು ಎಂದು ನಿರ್ಮಾಪಕರು ತಿಳಿಸಿದರು.

Share this