ಸಪ್ತಸಾಗರ ವಾರ್ತೆ,ವಿಜಯಪುರ, ಅ. 12:
ನಗರದ ರಾಮಮಂದಿರ ರಸ್ತೆಯ ಶ್ರೀ ಸಿದ್ದೇಶ್ವರ ಆದಿಶಕ್ತಿ ತರುಣ ಮಂಡಳಿಯ ವತಿಯಿಂದ 2026ನೇ ಸಾಲಿನ ನಾಡದೇವಿ ದಸರಾ ಮಹೋತ್ಸವವನ್ನು ಅ.13ರಂದು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ.
ಮಂಗಳವಾರ ನಗರದ ಪ್ರಮುಖ ಬೀದಿಗಳಲ್ಲಿ ವಾದ್ಯಮೇಳದೊಂದಿಗೆ ನಾಡದೇವಿಯ ಮೆರವಣಿಗೆ ನಡೆಯಲಿದ್ದು, ಬಳಿಕ ರಾಮಮಂದಿರದಲ್ಲಿ ಪ್ರತಿಷ್ಠಾಪಿಸಲಾಗಿರುವ ಆಂಧ್ರಪ್ರದೇಶದ ತಿರುಪತಿ ಬಾಲಾಜಿ ದೇವಾಲಯದ ಗಾಳಿ ಗೋಪುರ ಮಾದರಿಯ ದೇವಾಲಯದಲ್ಲಿ ದೇವಿಯ ಪ್ರತಿಷ್ಠಾಪನೆ ನೆರವೇರಲಿದೆ.
ಮಂಡಳಿಯ ಸಂಸ್ಥಾಪಕ ದಿ. ಶ್ರೀಶೈಲ ಗಚ್ಚಿನಮಠ ಅವರು 1979ರಲ್ಲಿ ಮಂಡಳಿಯನ್ನು ಸ್ಥಾಪಿಸಿದ್ದು, ಇದೀಗ ಅವರ ಪುತ್ರ ಗುರುಪಾದಯ್ಯ (ಗುರು) ಗಚ್ಚಿನಮಠ ಅವರ ನೇತೃತ್ವದಲ್ಲಿ ದಸರಾ ಮಹೋತ್ಸವ ಮುಂದುವರಿದಿದೆ. ಪ್ರತಿವರ್ಷ ಉತ್ಸವದ ಅಂಗವಾಗಿ ಏಳು ದಿನಗಳ ಕಾಲ ಸಾಮೂಹಿಕ ವಿವಾಹ, ಅನ್ನಪ್ರಸಾದ, ಕ್ರೀಡಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ, ಪೂಜೆ ಮತ್ತು ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ.
ಈ ವರ್ಷವೂ ಸುಮಾರು 1,500 ಸುಮಂಗಲಿಯರಿಗೆ ಉಡಿ ತುಂಬುವ ಕಾರ್ಯಕ್ರಮ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಂಡಳಿಯ ಸಂಚಾಲಕ ಗುರುಪಾದಯ್ಯ ಗಚ್ಚಿನಮಠ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಸ್ತುತ ಸಾಲಿನ ಅಧ್ಯಕ್ಷರಾಗಿ ಗೋವಿಂದ ಪವಾರ ಹಾಗೂ ಉಪಾಧ್ಯಕ್ಷರಾಗಿ ಮಂಜುನಾಥ ಹಿರೇಮಠ ಆಯ್ಕೆಯಾಗಿದ್ದಾರೆ. ರಾಜು ಮಗಿಮಠ, ಅಪ್ಪು ಡೆಂಗಿ, ಬಾಬು ಬಕಾಲಿ, ರಮೇಶ ಜಾನಮಟ್ಟಿ, ಮುತ್ತು, ಗಂಗಾಧರ, ಬಾಗಪ್ಪ ಕನ್ನೊಳ್ಳಿ, ಮಹೇಶ ಅನಂತಪುರ, ಅರವಿಂದ, ವಿನೋದ, ಪಿಂಟು, ದತ್ತ ಹೊಸಮಠ, ಸಿದ್ದು ಹಿರೇಮಠ, ಬಸು, ಅನಿಲ, ಮಾಂತು, ರವಿ ಸೇರಿದಂತೆ ಮಂಡಳಿಯ ಕಾರ್ಯಕರ್ತರು, ನಗರದ ಗಣ್ಯರು, ವ್ಯಾಪಾರಸ್ಥರು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ನಾಡದೇವಿಯ ಭಕ್ತರು ಹಾಗೂ ಗಚ್ಚಿನಮಠ ಅಭಿಮಾನಿ ಬಳಗದವರು ಪಾಲ್ಗೊಳ್ಳಲಿದ್ದಾರೆ.
ಅ.13ರಂದು ನಾಡದೇವಿ ದಸರಾ ಮಹೋತ್ಸವದ ಮೆರವಣಿಗೆ


