ಸಪ್ತಸಾಗರ ವಾರ್ತೆ, ವಿಜಯಪುರ, ಮಾ. 8:
ಶ್ರೀ ಶ್ರೀಶೈಲ ಜಗದ್ಗುರುಗಳು ಅವರ ದಿವ್ಯ ಸಾನ್ನಿಧ್ಯದಲ್ಲಿ ಭಾರತದ ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಅವರು ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಯಡೂರು ಶ್ರೀ ವೀರಭದ್ರೇಶ್ವರ ದೇವಸ್ಥಾನದಿಂದ ಚಾಲನೆ ನೀಡಿದ ನಂದಿ ಸೇನೆ ರಥಯಾತ್ರೆ ವಿಜಯಪುರ ನಗರಕ್ಕೆ ಅಗಮಿಸಿತು. ಶ್ರೀರಾಮ ನವಮಿ ಉತ್ಸವ ಸಮಿತಿ , ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಹಾಗೂ ವಿವಿಧ ಸಂಘಟನೆಗಳ ವತಿಯಿಂದ ನಗರಕ್ಕೆ ಸ್ವಾಗತಿಸಿ ಬೀಳ್ಕೊಡಲಾಯಿತು.
ಸಮಾಜ ಸೇವಕರು ಹಾಗೂ ಶ್ರೀರಾಮ ನವಮಿ ಉತ್ಸವ ಸಮಿತಿ ಸಂಸ್ಥಾಪಕ ಅಧ್ಯಕ್ಷ ಉಮೇಶ ವಂದಾಲ ಅವರು ಮಾತನಾಡಿ, ಯಡೂರದಿಂದ ಶ್ರೀಶೈಲದ ವರೆಗೆ ಜರಗುತ್ತಿರುವ ನಂದಿ ಸೇನೆ ರಥಯಾತ್ರೆಯ ಮೂಲ ಉದ್ದೇಶ ಜೋಡೆತ್ತಿನ ಕೃಷಿಕರ ಮೇಲೆ ದೇಶದ ಭವಿಷ್ಯ ನಿಂತಿದೆ ಎಂಬುದರ ಕುರಿತು ಜನಜಾಗೃತಿ ಮೂಡಿಸುವುದಾಗಿದೆ. ನಂದಿ ಕೃಷಿಕರ ಶ್ರಮಕ್ಕೆ ತಕ್ಕ ಬೆಲೆ ನೀಡುವ ಯೋಜನೆಗಳು ಜಾರಿ ಮಾಡುವ ಅವಶ್ಯಕತೆಯಿದೆ. ನಂದಿ ಸೇನೆ ಹಕ್ಕೊತ್ತಾಯದಂತೆ ಜೋಡೆತ್ತಿನ ಕೃಷಿಕರಿಗೆ ಪ್ರತಿ ತಿಂಗಳು ರೂ. 11000 ಪ್ರೋತ್ಸಾಹ ಧನ ನೀಡಬೇಕಾದ ಅವಶ್ಯಕತೆಯಿದೆ ಎಂದರು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾ ಉಪಾಧ್ಯಕ್ಷ ಎಸ್. ಜಿ. ನಾಡಗೌಡ ಅವರು ಮಾತನಾಡಿ, ಶ್ರೀ ಸಿದ್ಧೇಶ್ವರ ಶ್ರೀಗಳ ಪ್ರೇರಣೆಯಿಂದ ಕಳೆದ ಎರಡು ವರ್ಷಗಳಿಂದ ಜೋಡೆತ್ತಿನ ಕೃಷಿಕರ ಮಹತ್ವದ ಕುರಿತು ಜನಜಾಗೃತಿ ಮೂಡಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದರು.
ನಿವೃತ್ತ ಕೃಷಿ ಅಧಿಕಾರಿ ಬಾಳಾಸಾಹೇಬ ಈಶ್ವರಗೊಂಡ ಅವರು ಮಾತನಾಡಿ, ಕೃಷಿ ಪದವೀಧರರ ನೇತೃತ್ವದಲ್ಲಿ ಪ್ರಾರಂಭಿಸಿದ ನಂದಿ ಕೂಗು ಅಭಿಯಾನ ಉದ್ದೇಶ ಬಹು ಜನರಿಗೆ ಅರ್ಥವಾಗಿ ಕೈ ಜೋಡಿಸುತ್ತಿರುವುದು ಸಂತಸದ ಸಂಗತಿಯಾಗಿದೆ. ಜೋಡೆತ್ತಿನ ಕೃಷಿಕರನ್ನು ಉಳಿಸಿ ಬೆಳೆಸಲು ಸರ್ವರೂ ಒಗ್ಗೂಡುವ ಅವಶ್ಯಕತೆಯಿದೆ ಎಂದರು.
ನಂದಿ ಕೂಗು ಅಭಿಯಾನದ ರೂವಾರಿಗಳಾದ ಬಸವರಾಜ ಬಿರಾದಾರ ಅವರು ಮಾತನಾಡಿ, ತೈಲ ಶಕ್ತಿಯ ಬಳಕೆ ಹೆಚ್ಚಾದಂತೆ ರೈತರು, ರಾಜ್ಯ ಹಾಗೂ ದೇಶ ಸಾಲಗಾರ ಆಗುತ್ತಿರುವುದನ್ನು ತಡೆಯಲು ನಂದಿ ಶಕ್ತಿಯನ್ನು ಸಮರ್ಥವಾಗಿ ಬಳಸಿಕೊಳ್ಳುವುದು ಮಾತ್ರ ಪರಿಹಾರ. ನಂದಿ ವಿದ್ಯುತ್, ನಂದಿ ಗ್ಯಾಸ್, ನಂದಿ ಅಡುಗೆ ಎಣ್ಣೆ ಹಾಗೂ ಅರೋಗ್ಯ ವರ್ಧಕಗಳನ್ನು ಉತ್ಪಾದಿಸಲು ಪ್ರೋತ್ಸಾಹ ನೀಡಿ ಸ್ವಾವಲಂಬಿ ರಾಷ್ಟ್ರ ನಿರ್ಮಿಸಲು ನಾವೆಲ್ಲರೂ ಒಗ್ಗೂಡಬೇಕಾದ ಅವಶ್ಯಕತೆಯಿದೆ ಎಂದರು.
ಕಾರ್ಯಕ್ರಮದಲ್ಲಿ ಶಿವಾನಂದ ಭುಯ್ಯಾರ, ಬಸವರಾಜ ಮಾಳಗೊಂಡ, ಅಭಿಷೇಕ ಬಿರಾದಾರ, ಬಸವರಾಜ ಕೋನರಡ್ಡಿ, ಅರವಿಂದ ಕವಲಗಿ, ಮಂಜುನಾಥ ಹಿರೇಮಠ, ಓಂಕಾರ ಅಥರ್ಗಾ, ಭಾರತಿ ಭುಯ್ಯಾರ, ದಾನಯ್ಯ ಹಿರೇಮಠ, ಸಚಿನ್ ಸವನಹಳ್ಳಿ, ಸಂಪತ್ ರಾವ್ ಕುಲಕರ್ಣಿ, ರಾಜು ಮುಚ್ಚಂಡಿ, ಅಶೋಕ್ ಪೆದ್ದಿ, ಅರ್ಜುನ್ ಕವಟೆಕರ್, ಸಂಗಮೇಶ ಉಕ್ಕಲಿ ಹಾಗೂ ಇತರರು ಭಾಗವಹಿಸಿದ್ದರು.
ಶ್ರೀಶೈಲಕ್ಕೆ ತೆರಳುತ್ತಿರುವ ನಂದಿ ಸೇನೆ ರಥಯಾತ್ರೆ ವಿಜಯಪುರಕ್ಕೆ ಆಗಮನ


