ಜಲಶಕ್ತಿ ಅಭಿಯಾನ ಯೋಜನೆಯ ಅತ್ಯುತ್ತಮ ಅನುಷ್ಠಾನಕ್ಕೆ ರಾಷ್ಟ್ರೀಯ ಪುರಸ್ಕಾರ: ವಿಜಯಪುರ ಜಿಪಂ ಸಿಇಒ ರಿಷಿ ಆನಂದಗೆ ಸನ್ಮಾನ

ಸಪ್ತಸಾಗರ ವಾರ್ತೆ, ವಿಜಯಪುರ,ನ.18:
ಗ್ರಾಮೀಣ ಪ್ರದೇಶಗಳಲ್ಲಿ ನೀರಿನ ಸಂರಕ್ಷಣೆ, ಮಳೆ ನೀರು ಕೊಯ್ಲು, ಸಾಂಪ್ರದಾಯಿಕ ಮತ್ತು ಇತರ ಜಲಮೂಲಗಳ ಸಂರಕ್ಷಣೆ ಹಾಗೂ ಕುಡಿಯುವ ನೀರಿನ ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರದ ಜಲಶಕ್ತಿ ಅಭಿಯಾನ ಯೋಜನೆಯ ಅತ್ಯುತ್ತಮ ಅನುಷ್ಠಾನಕ್ಕೆ ರಾಷ್ಟ್ರಮಟ್ಟದ ದಕ್ಷಿಣದ ರಾಜ್ಯಗಳಲ್ಲಿ ವಿಜಯಪುರ ಜಿಲ್ಲಾ ಪಂಚಾಯತಿಗೆ ಪ್ರಶಸ್ತಿ ಲಭಿಸಿದ್ದು, ಮಂಗಳವಾರ ನವದೆಹಲಿಯ ವಿಜ್ಞಾನ ಭವನದಲ್ಲಿ ನಡೆದ “ರಾಷ್ಟ್ರೀಯ ಜಲ ಪ್ರಶಸ್ತಿ” ಪ್ರದಾನ ಸಮಾರಂಭದಲ್ಲಿ ಕೇಂದ್ರ ಜಲ ಶಕ್ತಿ ಸಚಿವರಾದ ಸಿ.ಆರ್.ಪಾಟೀಲ ಅವರು ಜಿಪಂ ಸಿಇಒ ರಿಷಿ ಆನಂದ. ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು.
ಈ ಸಂದರ್ಭದಲ್ಲಿ ಕೇಂದ್ರ ಜಲ ಶಕ್ತಿ ಮಂತ್ರಾಲಯದ ರಾಜ್ಯ ಸಚಿವರಾದ ವಿ. ಸೊಮಣ್ಣ ಹಾಗೂ ರಾಜ್ ಭೂಷಣ ಚೌಧರಿ ಉಪಸ್ಥಿತರಿದ್ದರು.
ಜಲಮೂಲಗಳ ಸಂರಕ್ಷಣೆ, ಅಂರ್ತಜಲ ವೃದ್ಧಿ ಹಾಗೂ ಕೃಷಿ ಚಟುವಟಿಕೆಗಳಿಗೆ ಅಗತ್ಯ ಪ್ರಮಾಣದ ನೀರು ಒದಗಿಸುವ ಹಾಗೂ ನೀರಿನ ಸಮಸ್ಯೆ ನಿವಾರಿಸಲು ಕೈಗೊಂಡ ಜಲಶಕ್ತಿ ಅಭಿಯಾನವನ್ನು ಪರಿಣಾಮಕಾರಿ ಅನುಷ್ಠಾನಗೊಳಿಸಿ ವಿಜಯಪುರ ಜಿಲ್ಲಾ ಪಂಚಾಯತಿ ರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆಯಾಗಿ 25 ಲಕ್ಷ ರೂ. ನಗದು ಬಹುಮಾನಕ್ಕೆ ಭಾಜನವಾಗಿದೆ. ನೀರಿನ ಮೂಲಗಳ ನವೀಕರಣ, ಕೊಳವೆಬಾವಿಗಳ ಮರುಬಳಕೆ ಮತ್ತು ಮರುಪೂರಣ, ಜಲಾನಯನ ಪ್ರದೇಶ ಅಭಿವೃದ್ಧಿ ಮತ್ತು ತೀವ್ರ ಅರಣ್ಯೀಕರಣ ಕುರಿತು ಈ ಅಭಿಯಾನದ ಮೂಲಕ ಭಾರಿ ಜಾಗೃತಿ ಮೂಡಿಸಲಾಗಿದ್ದು, ಇದರಿಂದ ಜೆ ಎಸ್ ಎ-1.0 ಫಲಿತಾಂಶವು ಸುಧಾರಿತ ನೀರಿನ ಸಂರಕ್ಷಣೆಯಾಗಿದೆ. ವಿಜಯಪುರ ಜಿಲ್ಲೆಯು ಜಲಶಕ್ತಿ ಅಭಿಯಾನ ಯೋಜನೆ ಯಶಸ್ವಿಯಾಗಿ ಅನುಷ್ಠಾನಗೊಳಿಸಿದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಪ್ರಶಸ್ತಿ ಜತೆಗೆ ಬೆಳಗಾವಿ ವಿಭಾಗದ ಜಿಲ್ಲೆಗಳಲ್ಲಿ ಪ್ರಥಮ ಸ್ಥಾನ ಗಳಿಸಿ ಇತರೆ ಜಿಲ್ಲೆಗಳಿಗೆ ಮಾದರಿಯಾಗಿದೆ.
ಗ್ರಾಮೀಣ ಭಾಗದ ಕೃಷಿ ಚಟುವಟಿಕೆಗಳಿಗೆ ಉತ್ತೇಜನ ನೀಡುವುದರ ಜತೆಗೆ ಗ್ರಾಮೀಣ ಆರ್ಥಿಕತೆಯ ಬೆಳವಣಿಗೆಗೆ ಪೂರಕ ವಾತಾವರಣ ನಿರ್ಮಾಣ ಮಾಡುವುದು. ಮುಂಗಾರು ಪೂರ್ವದ 100 ದಿನಗಳ ಅವಧಿಯಲ್ಲಿ ಪ್ರತಿ ಗ್ರಾಮದಲ್ಲಿ ಮಳೆ ನೀರು ಸಂರಕ್ಷಣೆಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳುವುದು, ಮಳೆ ನೀರು ಸಂರಕ್ಷಣೆ ಮಾಡಲು ವಿವಿಧ ಇಲಾಖೆಗಳ ಅನುದಾನ ಮತ್ತು ನರೇಗಾ ಯೋಜನೆಯಡಿ ಅವಕಾಶ ಕಲ್ಪಿಸಲಾಗಿದ್ದು, ಅಂತರ್ಜಲ ಸಂರಕ್ಷಣೆಗೆ ಅಗತ್ಯ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ ಎನ್ನುತ್ತಾರೆ ಅಧಿಕಾರಿಗಳು. ಜಿಲ್ಲೆಯ ಒಟ್ಟು 211 ಗ್ರಾಮ ಪಂಚಾಯತಿಗಳಲ್ಲಿ ಜಲ ಶಕ್ತಿ ಕಾಮಗಾರಿಗಳು ಕೈಗೊಳ್ಳಲಾಗಿದೆ. ಜಲ ಶಕ್ತಿ ಅಭಿಯಾನದಡಿ ಜಿಲ್ಲೆಗೆ ಒಟ್ಟು 10000 ಕಾಮಗಾರಿಗಳ ಗುರಿ ನೀಡಲಾಗಿತ್ತು. ಆದರೆ ಗುರಿಗಿಂತ ಅಧಿಕ 11453 ಕ್ಕೂ ಅಧಿಕ ಕಾಮಗಾರಿಗಳನ್ನು ಗ್ರಾಮ ಪಂಚಾಯತಿ, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ಅರಣ್ಯ ಇಲಾಖೆ, ಸಣ್ಣ ನೀರಾವರಿ ಸೇರಿದಂತೆ ವಿವಿಧ ಅನುಷ್ಠಾನ ಇಲಾಖೆಗಳ ಮೂಲಕ ಜಿಲ್ಲೆಯಾದ್ಯಂತ ಅನುಷ್ಠಾನ ಮಾಡಲಾಗಿದೆ. ಕೆರೆ ಅಭಿವೃದ್ಧಿ, ಕೃಷಿ ಹೊಂಡ, ಬದು ನಿರ್ಮಾಣ, ತೆರೆದ ಬಾವಿ, ನಾಲಾ ಹೂಳೆತ್ತುವುದು, ಮಳೆ ನೀರು ಕೊಯ್ಲು ಮತ್ತು ಇತರೆ ನೀರಿನ ಸಂರಕ್ಷಣೆ ಕಾಮಗಾರಿ ಸೇರಿದಂತೆ ವೈಯಕ್ತಿಕ ಕಾಮಗಾರಿಗಳನ್ನು ಈ ಅಭಿಯಾನದಡಿ ಕೈಗೆತ್ತಿಕೊಳ್ಳಲಾಗಿದೆ.
2024ರ ಸೆಪ್ಟೆಂಬರ್ 6ರಂದು ರಾಷ್ಟ್ರವ್ಯಾಪಿ ಆರಂಭವಾದ ಈ “ಜಲ ಸಂಚಯ–ಜನ ಭಾಗಿದಾರಿ”ಅಭಿಯಾನದ ಉದ್ದೇಶ ಭೂಗರ್ಭ ಜಲ ಸಂರಕ್ಷಣೆ, ಮಳೆ ನೀರಿನ ಸಂಗ್ರಹಣೆ ಹಾಗೂ ಸಮುದಾಯದ ಭಾಗವಹಿಸುವಿಕೆಯನ್ನು ಬಲಪಡಿಸುವುದಾಗಿದೆ. ಜನರಿಗೆ ನೀರಿನ ಮಹತ್ವ, ನೀರಿನ ಸಂರಕ್ಷಣೆ ವಿಧಾನಗಳ ಬಗ್ಗೆ ಅರಿವು ಮೂಡಿಸುದಾಗಿದೆ.ಜೆ ಎಸ್ ಜೆಬಿ ಅಭಿಯಾನದಡಿ ಜಿಲ್ಲೆಯು ಉತ್ತಮ ಸಾಧನೆ ಮಾಡಿದೆ. ಈ ಹಂತದಲ್ಲಿ ಸಹಕರಿಸಿದ ಸಂಘ ಸಂಸ್ಥೆಗಳು, ಅಧಿಕಾರಿಗಳ ಕಾರ್ಯ ಶ್ಲಾಘನೀಯ. JSJB ಅಭಿಯಾನದಡಿ ವಿಜಯಪುರ ಜಿಲ್ಲೆಗೆ ರೂ.25 ಲಕ್ಷ ಅನುದಾನವನ್ನು ಬಹುಮಾನದ ರೂಪದಲ್ಲಿ ಘೋಷಿಸಿರುವುದಕ್ಕೆ ಜಿಲ್ಲೆಯ ಎಲ್ಲಾ ತಾಲೂಕಾ ಪಂಚಾಯತಿಯ ಕಾರ್ಯ ನಿರ್ವಾಹಕ ಅಧಿಕಾರಿಗಳು,ಸಹಾಯಕ ನಿರ್ದೇಶಕರು, ಪಿಡಿಒಗಳು ಮತ್ತು ನರೇಗಾ ತಂಡದ ಎಲ್ಲರ ಸಹಕಾರದಿಂದ ಇದು ಸಾಧ್ಯವಾಗಿದೆ ಎಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಿಷಿ ಆನಂದ್ ಸರ್ ಅವರು ಹೇಳಿದ್ದಾರೆ.

Share this