ಸಪ್ತಸಾಗರ ವಾರ್ತೆ,ವಿಜಯಪುರ, ಮೇ 22:
ಮುಂಗಾರು ಮಳೆಗಾಲದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಸಂಭವಿಸಬಹುದಾದ ಪ್ರಕೃತಿ ವಿಕೋಪ ಹಾಗೂ ಪ್ರವಾಹ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ಜಿಲ್ಲಾಡಳಿತ ಸರ್ವಸನ್ನದ್ಧವಾಗಿದ್ದು, ಮಳೆಗಾಲದಲ್ಲಿ ಪ್ರಕೃತಿ ವಿಕೋಪ, ಪ್ರವಾಹದಲ್ಲಿ ಜೀವ ಹಾನಿಯಾಗದಂತೆ ನೋಡಿಕೊಳ್ಳುವುದು ಪ್ರತಿಯೊಬ್ಬ ಅಧಿಕಾರಿಗಳು ಮೊದಲ ಆದ್ಯತೆ ನೀಡುವುದರೊಂದಿಗೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳಾದ ಡಾ. ಆನಂದ ಕೆ. ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿಯ ಕೆಸ್ವಾನ್ ಸಭಾಂಗಣದಲ್ಲಿ ಶುಕ್ರವಾರ 2026-27 ನೇ ಸಾಲಿನ ಮುಂಗಾರು ಮಳೆ ಅವಧಿಯ ಪೂರ್ವಸಿದ್ಧತೆ ಕುರಿತ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ವಿಡಿಯೋ ಸಂವಾದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ತುರ್ತು ಪರಿಸ್ಥಿತಿಯ ನಿರ್ವಹಣೆಗಾಗಿ ಜಿಲ್ಲೆಯ ಎಲ್ಲಾ ಇಲಾಖೆಯ ಅಧಿಕಾರಿಗಳು ಕಡ್ಡಾಯವಾಗಿ ತಮ್ಮ ಕೇಂದ್ರಸ್ಥಾನದಲ್ಲೇ ಇರಬೇಕು ಎಂದು ಕಟ್ಟುನಿಟ್ಟಾಗಿ ಸೂಚನೆ ನೀಡಿದರು.
ಹೆಲ್ಪ್ ಲೈನ್ ಸ್ಥಾಪಿಸಿ:
ತಾಲೂಕಾ ಹಂತದಲ್ಲಿ ಸಂಭವಿಸುವ ಪ್ರಕೃತಿ ವಿಕೋಪ ಸಂದರ್ಭದಲ್ಲಿ ತಹಶೀಲ್ದಾರರು ಸ್ಥಳದಲ್ಲಿರಬೇಕು. ಅತ್ಯಂತ ಜವಾಬ್ದಾರಿಯಿಂದ ಹಾಗೂ ಅಚ್ಚುಕಟ್ಟಾಗಿ ತುರ್ತು ಸಂದರ್ಭದಲ್ಲಿ ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸಿ ಪರಿಹರಿಸಬೇಕು ಎಂದರು.
ಎಲ್ಲ ತಾಲೂಕಿನಲ್ಲಿ ದಿನದ ಇಪ್ಪತ್ಬಾಲ್ಕು ಗಂಟೆ ಹೆಲ್ಪಲೈನ್ ಸ್ಥಾಪಿಸಬೇಕು.
ಯಾವುದೇ ಘಟನೆ ಸಂಭವಿಸಿದ ತಕ್ಷಣ ಸ್ಪಂದಿಸಿ, ಸ್ಥಳಕ್ಕೆ ಧಾವಿಸಬೇಕು, ಪ್ರವಾಹ, ಕಲುಷಿತ ನೀರು, ಕೊಠಡಿ ಸ್ಥಳಾಂತರ ಇತ್ಯಾದಿ ಸಂದರ್ಭದಲ್ಲಿ ತಕ್ಷಣ ಸ್ಪಂದಿಸಬೇಕು. ಕಂಟ್ರೊಲ್ ರೂಂ ವ್ಯವಸ್ಥಿತವಾಗಿ ನಿರ್ವಹಿಸಬೇಕು. ಕಂಟ್ರೋಲ್ ರೂಂನಲ್ಲಿದ್ದವರು ಎಲ್ಲ ಇಲಾಖೆಯ ಸಂಪರ್ಕ ಸಂಖ್ಯೆ ಹೊಂದಿರಬೇಕು. ಅವರು ತಕ್ಷಣ ಸಂಬಂಧಿಸಿದವರಿಗೆ ತಿಳಿಸಬೇಕು ಎಂದರು.
ಪ್ರವಾಹ ಪರಿಸ್ಥಿತಿ ಮಳೆಗಾಲ ಆರಂಭವಾಗುತ್ತಿದ್ದಂತೆಯೇ ಜಿಲ್ಲೆಯ ಕೃಷ್ಣಾ, ಭೀಮಾ ಮತ್ತು ದೋಣಿ ನದಿಗಳಿಗೆ ಯಾವುದೇ ಸಂದರ್ಭದಲ್ಲಿ ಪ್ರವಾಹ ಬರಬಹುದು. ಹಾಗಾಗಿ ನದಿ ಪಾತ್ರದಲ್ಲಿ ನಿರಂತರ ನಿಗಾ ಮತ್ತು ಪ್ರವಾಹ ಮುನ್ನೆಚ್ಚರಿಕೆ ವಹಿಸಬೇಕು. ಮಳೆ ಹಾಗೂ ಜಲಾಶಯಗಳಲ್ಲಿನ ನೀರಿನ ಲಭ್ಯತೆಯ ಮಾಹಿತಿಯನ್ನು ಪ್ರತಿದಿನ ಸಂಗ್ರಹಿಸಿ, ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ ಅವರು, ಪ್ರಕೃತಿ ವಿಕೋಪದಿಂದ ಉಂಟಾಗುವ ಹಾನಿಗಳಿಗೆ ನಿಯಮಾನುಸಾರ ತಕ್ಷಣವೇ ಪರಿಹಾರ ವಿತರಿಸಲು ಕ್ರಮ ವಹಿಸಬೇಕು ಎಂದರು.
ಭೀಮಾ ನದಿ ಸೇರಿದಂತೆ ಜಿಲ್ಲೆಯಲ್ಲಿ ಸಂಭವಿಸಬಹುದಾದ ಪ್ರವಾಹ ಪರಿಸ್ಥಿತಿ ಸಮರ್ಥವಾಗಿ ಎದುರಿಸಲು ಈಗಲೇ ಸಿದ್ಧತೆ ಮಾಡಿಕೊಳ್ಳಬೇಕು.
ತುರ್ತು ಸಂದರ್ಭದಲ್ಲಿ ರಕ್ಷಣಾ ಸಾಮಗ್ರಿ ಬೋಟ್ಸ್, ರೋಪ್ಸ್, ಲೈಫ್ ಜಾಕೆಟ್, ಇತ್ಯಾದಿ ಸಾಮಗ್ರಿಗಳನ್ನು ತಾಲೂಕಾ ಹಾಗೂ ಜಿಲ್ಲಾ ಮಟ್ಟದಲ್ಲಿ ಸುಸಜ್ಜಿತವಾಗಿಟ್ಟುಕೊಳ್ಳಬೇಕು ಎಂದರು.
ಕೃಷ್ಣಾ-ಭೀಮಾ ನದಿ ಒಳ ಹರಿವು ನಿರಂತರ ಸಾಧಿಸಿ ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು. ಆಗಾಗ ತಾಲೂಕಾ ಮಟ್ಟದಲ್ಲಿ ವಿಪತ್ತು ಸಭೆ ನಡೆಸಿ ಪ್ರವಾಹ ಎದುರಿಸಲು ತಡೆಗಟ್ಟಲು ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ಅಗತ್ಯ ಸಲಹೆ-ಸೂಚನೆಗಳನ್ನು ನೀಡಬೇಕು. ನದಿ ಪಾತ್ರದ ಜನರು ಮುನ್ನೆಚ್ಚರಿಕೆ ವಹಿಸಲು ಜಾಗೃತಿ ಮೂಡಿಸಬೇಕು ಎಂದು ಅವರು ಹೇಳಿದರು.
ರಾಜ ಕಾಲುವೆಗಳಲ್ಲಿ ಮೆತ್ತಿಕೊಂಡಿರುವ ಹೂಳನ್ನು ಸಂಪೂರ್ಣವಾಗಿ ತೆಗೆದು, ಅಲ್ಲಿ ನೀರು ಸರಳವಾಗಿ ಹರಿದು ಹೋಗುವಂತೆ ನೋಡಿಕೊಳ್ಳಬೇಕು. ಗ್ರಾಪಂ ಸ್ಥಳೀಯ ಆಡಳಿತ ಹಾಗೂ ಪಾಲಿಕೆ ಅಧಿಕಾರಿಗಳು ಒಂದು ವಾರದಲ್ಲಿ ಈ ಕಾರ್ಯ ಪೂರ್ಣಗೊಳಿಸಿ, ಮಳೆ ಬಂದ ನಂತರ ಪ್ರವಾಹ ಆಗದಂತೆ ನೋಡಿಕೊಳ್ಳಬೇಕು.
ಕಳೆದ ಸಾಲಿನಲ್ಲಿ ಸಮಸ್ಯೆ ಎಲ್ಲಿ ಆಗಿದೆ. ಯಾವ ವಾರ್ಡಿನಲ್ಲಿ ಪ್ರವಾಹ ಸಾಧ್ಯತೆಯಿದೆ ಎನ್ನುವುದನ್ನು ಈಗಲೇ ಗೊತ್ತು ಮಾಡಿಕೊಂಡು, ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸಬೇಕು. ಈ ವಿಷಯದಲ್ಲಿ ಸ್ಥಳೀಯವಾಗಿ ಕ್ರಿಯಾ ಯೋಜನೆ ಸಿದ್ಧಪಡಿಸಿಕೊಂಡು, ಯಾವುದೇ ಸಮಸ್ಯೆಯಾಗದಂತೆ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು ಇಂದಿನಿಂದಲೇ ಕಾರ್ಯೋನ್ಮುಖರಾಗಬೇಕು ಎಂದು ಜಿಲ್ಲಾಧಿಕಾರಿಗಳು ಸೂಚಿಸಿದರು.
ಎಲ್ಲೆಲ್ಲಿ ಸಮಸ್ಯೆಯಾಗುತ್ತದೆ. ಅಲ್ಲಿ ಮೈಕ್ರೋ ಪ್ಲ್ಯಾನಿಂಗ್ ಮಾಡಿಕೊಂಡು ಕಾರ್ಯ ನಿರ್ವಹಿಸಿ, ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಕಾರ್ಯ ನಿರ್ವಹಿಸಬೇಕು. ತಾಲೂಕಾ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಮುಖ್ಯಾಧಿಕಾರಿಗಳು ಈಗಲೇ ಯೋಜನಾ ಬದ್ದವಾಗಿ ಕಾರ್ಯ ನಿರ್ವಹಿಸಬೇಕು ಎಂದರು.
ನಗರದಲ್ಲಿ ಪ್ರವಾಹ ಪರಿಸ್ಥಿತಿಯಾಗದಂತೆ ಕೈಗೊಂಡ ಕಾಮಗಾರಿ ಸಿಟಿ ರೌಂಡ್ಸ ಮಾಡಿ, ಪರಿಶೀಲನೆ ನಡೆಸಬೇಕು ಪಾಲಿಕೆ ಆಯುಕ್ತರಿಗೆ ಸೂಚಿಸಿದರು.
ಶಿಥಿಲಾವಸ್ಥೆ ಕಟ್ಟಡಗಳ ಬಗ್ಗೆ ಎಚ್ಚರಿಕೆ:
ಮಣ್ಣು ಹಾಗೂ ಕಟ್ಟಿಗೆ ಮನೆಗಳು ಶಿಥಿಲಾವಸ್ಥೆಯಲ್ಲಿರುವುದರ ಕುರಿತು ಗ್ರಾಮದಲ್ಲಿ ಡಂಗೂರ ಸಾರುವ ಮೂಲಕ ಸಾರ್ವಜನಿಕರಿಗೆ ತಿಳಿವಳಿಕೆ ಮೂಡಿಸಬೇಕು. ಶಿಥಿಲಾವಸ್ಥೆಯಲ್ಲಿರುವ ಮನೆಗಳ ಮಾಹಿತಿಯನ್ನು ತಕ್ಷಣವೇ ಕ್ರೋಢಿಕರಿಸುವುದರೊಟ್ಟಿಗೆ ಜನರಿಗೆ ಮುಂಜಾಗ್ರತೆ ವಹಿಸಲು ತಿಳಿಸಬೇಕು. ಆ ಮೂಲಕ ಜಿಲ್ಲೆಯಾದ್ಯಂತ ಜನ-ಜಾನುವಾರುಗಳ ಹಾನಿಯಾಗದಂತೆ ಮುನ್ನೆಚ್ಚರಿಕೆ ಕ್ರಮ ವಹಿಸಬೇಕು ಎಂದರು.
ಜಿಲ್ಲೆಯ ಆಲಮೇಲ ತಾಲೂಕಿನ ಮೋರಟಗಿ ಹಾಗೂ ನಿಡಗುಂದಿಯಲ್ಲಿ ಮನೆ ಕುಸಿದು ಜೀವ ಹಾನಿಯಾಗಿದ್ದು, ರಾಜ್ಯ ಮಟ್ಟದಲ್ಲಿ ಗಂಭೀರ ಚರ್ಚೆಯಾಗಿದೆ. ಹಾಗಾಗಿ ಇವೆರಡೂ ಘಟನೆಗಳನ್ನು ಗಂಭೀರವಾಗಿ ಪರಿಗಣಿಸಿ ಅವಶ್ಯಕ ಮುಂಜಾಗ್ರತಾ ಕ್ರಮ ವಹಿಸಲು ಅಧಿಕಾರಿಗಳು ಈಗಿನಿಂದಲೇ ಸಜ್ಜಾಗಬೇಕು ಎಂದರು.
ಶಿಥಿಲಾವಸ್ಥೆಯಲ್ಲಿರುವ ಅಂಗನವಾಡಿ, ಆಸ್ಪತ್ರೆ , ವಸತಿ ನಿಲಯದ
ಕಟ್ಟಡಗಳ ಮಾಹಿತಿ ಕ್ರೋಢಿಕರಿಸಬೇಕು. ಅಲ್ಲೆಲ್ಲ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು. ಇಲ್ಲೆಲ್ಲ ಮಕ್ಕಳ ಹಿತ ಮುಖ್ಯ.ವಾಗಿದೆ. ಹಾಗಾಗಿ ಎಲ್ಲ ಶಿಕ್ಷಕರು ಹಾಗೂ ಮುಖ್ಯ ಶಿಕ್ಷಕರು ತಕ್ಷಣ ಶಾಲೆಗಳಿಗೆ ಭೇಟಿ ನೀಡಿ ಈಗಿನಿಂದಲೇ ಎಚ್ಚರಿಕೆ ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಪಿಆರ್ ಇಡಿ ಅಂಗನವಾಡಿ ಶಾಲಾ ಕಟ್ಟಡಗಳನ್ನು ಒಂದು ರೌಂಡ್ ಹೋಗಿ ಪರಿಶೀಲಿಸಬೇಕು. ಕಟ್ಟಡ, ಕಂಪೌಂಡ ವಾಲ್ ಬಗ್ಗೆ ಗಮನ ಹರಿಸಬೇಕು. ಈ ಪ್ರಕ್ರಿಯೆ ತಾಲೂಕು ಮಟ್ಟದ ಮೇಲುಸ್ತುವಾರಿಯಲ್ಲಿ ನಡೆಯಬೇಕು ಎಂದರು.
ತಾಲೂಕಾ ಮಟ್ಟದಲ್ಲಿ ಪರಿಶೀಲನೆಯಾಗಿಲ್ಲ ಎಂದಾದರೆ, ಎಲ್ಲಾ ಕಟ್ಟಡಗಳನ್ನು ಭೌತಿಕವಾಗಿ ಪರಿಶೀಲನೆ ನಡೆಸಬೇಕು. ಒಂದು ವೇಳೆ ಕಟ್ಟಡ ಶಿಥಿಲಾವಸ್ಥೆಯಲ್ಲಿದ್ದರೆ, ಮಕ್ಕಳನ್ನು ತಾತ್ಕಾಲಿಕವಾಗಿ ಬೇರೆ ಕಟ್ಟಡಗಳಿಗೆ ಸ್ಥಳಾಂತರಿಸುವ ಕೆಲಸ ಮಾಡಬೇಕು ಎಂದರು. ಈ ವಿಷಯವನ್ನು ಗಂಭೀರವಾಗಿ ಪರಿಣಿಸಿ, ಜಿಲ್ಲೆಯ ಎಲ್ಲ ಗ್ರಾಮೀಣ ಹಾಗೂ ನಗರ ಪ್ರದೇಶದ ಶಾಲಾ ಕೊಠಡಿ ಅಂಗನವಾಡಿ, ವಸತಿ ನಿಲಯ, ಆಸ್ಪತ್ರೆಗಳ ಕಟ್ಟಡದ ಸ್ಥಿತಿಗತಿ ಖುದ್ದು ಪರಿಶೀಲನೆ ನಡೆಸಬೇಕು ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ ಅವರು, ಈ ವಿಷಯದಲ್ಲಿ ವೈದ್ಯಾಧಿಕಾರಿಗಳು, ಅಂಗನವಾಡಿ ಮಹಿಳಾ ಮೇಲ್ವಿಚಾರಕರು, ವಾರ್ಡನ್ ಗಳು ಸೂಕ್ತ ಸಲಹೆ ಸೂಚನೆ ನೀಡಿ ನಿಗಾವಹಿಸಬೇಕು ಎಂದರು.
ಈ ವಿಷಯದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ತಮ್ಮ ತಾಲೂಕಿನ ಮುಖ್ಯ ಶಿಕ್ಷಕರಿಗೆ ಎಚ್ಚರಿಕೆ ನೀಡುವ ಮೂಲಕ ಒಂದು ವಾರದಲ್ಲಿ ಕಟ್ಟಡ ಮಾಹಿತಿ ಕ್ರೋಢಿಕರಿಸಬೇಕು ಎಂದು ಬಿಇಒಗಳಿಗೆ ಎಚ್ಚರಿಕೆ ನೀಡಿದರು.
ಮಹಿಳಾ ಮತ್ತು ಮಕ್ಕಳ ಇಲಾಖೆ, ಆರೋಗ್ಯ ಇಲಾಖೆ, ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಅಲ್ಪಸಂಖ್ಯಾತರ ಇಲಾಖೆಯಡಿ ಬರುವ ಕಟ್ಟಡದಲ್ಲಿನ ಶಿಥಿಲಾವಸ್ಥೆಯಲ್ಲಿರುವ ವಿದ್ಯುತ್ ಕಂಬಗಳು ಹಾಗೂ ವಿದ್ಯುತ್ ಪರಿವರ್ತಕಗಳಮಾಹಿತಿಯನ್ನು ಆಯಾ
ತಹಶೀಲ್ದಾರ್ ರು ಸಮನ್ವಯತೆಯಲ್ಲಿ ನಿಮ್ಮ ಹಂತದಲ್ಲಿ ನಿವಾರಿಸಿಕೊಳ್ಳಬೇಕು ಎಂದರು.
ವಿದ್ಯುತ್ ಅವಘಡಗಳಾದಂತೆ ಎಲ್ಲ ಇಲಾಖೆಗಳು ಗಮನಹರಿಸಬೇಕು. ರಸ್ತೆ ಪಕ್ಕದ ಬೃಹದಾಕಾರದ ಮರದ ಕೊಂಬೆಗಳು ಬೀಳುವಂತಿದ್ದರೆ, ಅವುಗಳನ್ನು ತಕ್ಷಣ ಕಟಾವು ಮಾಡಿಸಬೇಕು. ಖಾಸಗಿ ವ್ಯಾಪ್ತಿಯಲ್ಲೂ ಈ ತರಹದ ಪರಿಸ್ಥಿತಿಯಿದ್ದರೆ, ಕ್ರಮವಹಿಸಿ ಸಾರ್ವಜನಿಕ ಆರೋಗ್ಯ ಮುಖ್ಯವಾಗಿದ್ದು, ಸ್ಥಳೀಯ ಆಡಳಿತ ನಿಗಾವಹಿಸಬೇಕು. ಯಾವುದೇ ಅವಘಡಗಳಾಗದಂತೆ ತುಂಬಾ ಮುತುವರ್ಜಿಯಿಂದ ಕೆಲಸ ಮಾಡಬೇಕು ಎಂದರು.
ತಹಶೀಲ್ದಾರ್‌ರೇ ಹೊಣೆಗಾರರು:
ಶಿಥಿಲಾವಸ್ಥೆಯ ಸೇತುವೆಗಳಿದ್ದರೆ ಅವುಗಳನ್ನು ಗುರುತಿಸಿ. ಅಂತಹವುಗಳಿಗೆ ಬ್ಯಾರಿಕೇಡಿಂಗ್ ಹಾಕಿ ಆ ಪ್ರದೇಶದಲ್ಲಿ ಮಾಹಿತಿ ಫಲಕ ಅಳವಡಿಸಬೇಕು. ಸಂಪೂರ್ಣವಾಗಿ ಪಟ್ಟಿ ಮಾಡಿಕೊಳ್ಳಿ ಎಂದು ಅಧಿಕಾರಿಗಳಿಗೆ ಸಲಹೆ ಮಾಡಿದ ಜಿಲ್ಲಾಧಿಕಾರಿಗಳು, ಮಳೆ ಜಾಸ್ತಿಯಾದ ಸಂದರ್ಭದಲ್ಲಿ ಸಂಚಾರಕ್ಕೆ ಸಮಸ್ಯೆಯಾಗುವುದಿದ್ದರೆ ಮುಂಜಾಗ್ರತೆ ಕ್ರಮ ವಹಿಸಬೇಕು. ಸಬ್ ಮರ್ಜ ಆದ ಬ್ರಿಡ್ಜ್ ಯಾವುದೇ ಘಟನೆ ಜರುಗಿದರೆ ತಹಶೀಲ್ದಾರ್ ಅವರನ್ನು ಹೊಣೆಗಾರರನ್ನಾಗಿ ಮಾಡಲಾಗುವುದು. ಹಾಗಾಗಿ ಸಂಬಂಧಿಸಿದ ಸಿಬ್ಬಂದಿಗೆ ಸೂಕ್ತ ನಿರ್ದೇಶನ ನೀಡಬೇಕು..ಅಪಾಯಕಾರಿ ಬ್ರಿಡ್ಜ್ ತುಂಬಿ ಹರಿಯುವಾಗ ಸೂಕ್ತ ಮುನ್ಸೂಚನೆ ನೀಡಬೇಕು ಎಂದರು.
ಮಳೆಯಾಗುವ ಸಂದರ್ಭದಲ್ಲಿ ಜನರ ಜೀವನ ಮುಖ್ಯವಾಗಿದ್ದು, ಯಾವ ಪ್ರದೇಶದಲ್ಲಿ ಸಮಸ್ಯೆಯಾದರೆ ಡಿಡಿಪಿಐ ತಹಶೀಲ್ದಾರ್ ಅವರೊಂದಿಗೆ ಸಮನ್ವಯ ಮಾಡಿಕೊಂಡು ಅಲ್ಲಿನ ಶಾಲೆಗಳಿಗೆ ರಜೆ ಕೊಡಬಹುದು. ತುರ್ತು ಸಂದರ್ಭದಲ್ಲಿ ಈ ನಿರ್ಣಯ ಮಹತ್ತರವಾದುದು. ಮುಂಗಾರು ಪೂರ್ಣ ಅವಧಿಗೆ ಈ ನಿರ್ಣಯ ತೆಗೆದುಕೊಳ್ಳಬೇಕು ಎಂದರು.
ಲೋಕೋಪಯೋಗಿ ಇಲಾಖೆ ಡೇಂಜರ್ ರಸ್ತೆ, ಸೇತುವೆ, ಹೆದ್ದಾರಿ ಮೇಜರ್ ರಸ್ತೆ ಸ್ಥಿತಿ-ಗತಿಗಳನ್ನು ಗಂಭೀರವಾಗಿ ಗಮನಿಸಬೇಕು. ನಿಗದಿತ ಅವಧಿಯಲ್ಲಿ ಪರಿಹಾರ ಒದಗಿಸಲು ಎಲ್ಲ ತಹಶೀಲ್ದಾರ್ ಗಳು ಕ್ರಮ ಕೈಗೊಳ್ಳಬೇಕು ಎಂದರು.
48 ಗಂಟೆಯಲ್ಲಿ ಪರಿಹಾರ:
ಒಂದು ವೇಳೆ ಕುರಿ ಶೆಡ್ ಸೇರಿದಂತೆ ಜಾನುವಾರುಗಳ ಹಾನಿಯಾದರೆ 48 ಗಂಟೆಗಳ ಅವಧಿಯಲ್ಲಿ ಪರಿಹಾರ ಒದಗಿಸಬೇಕು. ಮನೆ ಹಾನಿಯಾದರೆ 72 ಗಂಟೆಗಳ ಅವಧಿಯಲ್ಲಿ ಕೆಲಾಮಿಟಿ ನಿರ್ದೇಶಾನುಸಾರ ಪರಿಹಾರ ಒದಗಿಸಬೇಕು. ಯಾವುದೇ ಕಾರಣಕ್ಕೂ ವಿಳಂಬ ಆಗಬಾರದು.
ಈ ಅಧಿಕಾರಗಳನ್ನು ಎಲ್ಲ ತಹಶೀಲ್ದಾರ್ ಪ್ರದತ್ತಗೊಳಿಸಲಾಗಿದೆ ಎಂದರು.
ಸಿಡಿಲಿನಿಂದ ಜೀವ ಜನವಾರು ಹಾನಿಯಾಗದಂತೆ ನೋಡಿಕೊಳ್ಳಬೇಕು.
ಸಿಡಿಲು ಆಪ್ ಹಾಗೂ ಸಚೇತ ಆಪ್ ಡೌನಲೋಡ ಮಾಡಿಕೊಳ್ಳಲು ಸಾರ್ವಜನಿಕರಿಗೆ ತಿಳಿವಳಿಕೆ ನೀಡಬೇಕು. ಜೊತೆಗೆ ಸಿಡಿಲಿನಿಂದಾಗುವ ಪರಿಣಾಮಗಳ ಬಗ್ಗೆ ತಿಳಿಸಿಕೊಡಬೇಕು. ಮರದ ಕೆಳಗೆ ನಿಲ್ಲಬಾರದು. ಎಷ್ಟು ಸಾಧ್ಯವೋ ಅಷ್ಟು ಮುಂಗಾರು ಮುಂಜಾಗ್ರತೆ ವಹಿಸಬೇಕು ಎಂದು ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ಸೂಚಿಸಿದರು.
ಪಿಡಿಒಗಳಿಗೆ ಸೂಚನೆ
ಸ್ಥಳೀಯ ಸಮಸ್ಯೆಗಳಿಗೆ ಆಯಾ ಪಿಡಿಒಗಳು ವಿಪತ್ತು ನಿರ್ವಹಣೆ ಸಭೆ ನಡೆಸಬೇಕು. ಏನೇ ಸಮಸ್ಯೆಗಳಿದ್ದರೆ, ಗ್ರಾಮಗಳಲ್ಲಿ ಡಂಗೂರ ಸಾರುವ ಮೂಲಕ ಸ್ಥಳೀಯವಾಗಿ ಮಾಹಿತಿ ನೀಡಬೇಕು. ಈ ಕಾರ್ಯ ಗ್ರಾಮ ಪಂಚಾಯತಿ ಮಟ್ಟದಲ್ಲಿ ನಿರ್ವಹಿಸಬೇಕು ಎಂದು ಪಿಡಿಒಗಳಿಗೆ ಸೂಚಿಸಿದರು.
ಆರೋಗ್ಯಾಧಿಕಾರಿಗಳಿಗೆ ಸೂಚನೆ
ಮಳೆಗಾಲದಲ್ಲಿ ಸಾಂಕ್ರಾಮಿಕ ರೋಗ ಹರಡದಂತೆ ಆರೋಗ್ಯ ಇಲಾಖೆ ಅಧಿಕಾರಿಗಳು ಮುಂಜಾಗ್ರತೆ ಕ್ರಮ ವಹಿಸಬೇಕು. ಫಾಗಿಂಗ್ ಮಾಡಿಸಬೇಕು. ಕ್ಲೋರಿನೇಶನ್ ಮಾಡಬೇಕು. ಕುಡಿಯುವ ನೀರಿನ ಬಗ್ಗೆ ಸದಾ ಎಚ್ಚರವಿರಬೇಕು ಎಂದು ಎಚ್ಚರಿಕೆ ನೀಡಿದ ಜಿಲ್ಲಾಧಿಕಾರಿಗಳು, ಕಲುಷಿತ ನೀರು, ಕುಡಿಯುವ ನೀರಿನಲ್ಲಿ ಸೇರದಂತೆ ನೋಡಿಕೊಳ್ಳಬೇಕು. ಗ್ರಾಪಂ ಮಟ್ಟದಲ್ಲಿ ನೀರು ಪರೀಕ್ಷಿಸಿ, ನೀರು ಪೂರೈಸಬೇಕು ಎಂದರು.
ಕುಡಿಯಲು ಯೋಗ್ಯವಲ್ಲದ ನೀರನ್ನು ಪೂರೈಸಬಾರದು. ಕಲುಷಿತ ನೀರು ಪೂರೈಕೆಯಾಗಿ ಏನಾದರೂ ಸಮಸ್ಯೆಯಾದರೆ ಸಂಬಂಧಿಸಿದವರನ್ನು ಹೊಣೆಗಾರರನ್ನಾಗಿಸಲಾಗುವುದು. ಸಾರ್ವಜನಿಕ ಕುಡಿಯುವ ನೀರು ಗುಣಮಟ್ಟದಿಂದ ಇರಬೇಕು. ದೂರು ಬಂದರೆ ತಕ್ಷಣ ಅಟೆಂಡ್ ಮಾಡಿ, ಸಾರ್ವಜನಿಕರಿಂದ ದೂರು ಬಾರದಂತೆ ಕ್ರಮವಹಿಸಬೇಕು. ಒಟ್ಟಾರೆ ಪ್ರಕೃತಿ ವಿಕೋಪದಲ್ಲಿ ತುಂಬಾ ಜಾಗೃತಿಯಿಂದ ಇರಬೇಕು ಎಂದು ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಕುಡಿಯುವ ನೀರಿನ ಸ್ವಚ್ಛತೆ ಮತ್ತು ಆರೋಗ್ಯ ರಕ್ಷಣೆ ತೀರಾ ಅಗತ್ಯವಾಗಿದೆ.
ಮಳೆಗಾಲದಲ್ಲಿ ಹರಡುವ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಲು ಕುಡಿಯುವ ನೀರಿನ ಮೂಲಗಳ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಜಿಲ್ಲೆಯಾದ್ಯಂತ ಕುಡಿಯುವ ನೀರಿನ ಜೈವಿಕ ಹಾಗೂ ರಾಸಾಯನಿಕ ತಪಾಸಣೆಯನ್ನು ಕಡ್ಡಾಯವಾಗಿ ನಡೆಸಬೇಕು ಎಂದರು.
ಬೀಜ, ಗೊಬ್ಬರ ದಾಸ್ತಾನಿರಲಿ
ಮುಂಗಾರು ಬಿತ್ತನೆಗೆ ಅವಶ್ಯಕವಾದ ಬೀಜ ಹಾಗೂ ರಸಗೊಬ್ಬರ ಪಡೆಯಲು ರೈತರಿಗೆ ತೊಂದರೆಯಾಗಬಾರದು. ಕೃಷಿ ಕೇಂದ್ರ ಸೇರಿದಂತೆ ಅಂಗಡಿ ಮುಂಗಟ್ಟುಗಳಲ್ಲಿ ಯಾವುದೇ ಸಮಸ್ಯೆಯಾಗದಂತೆ
ಸಾಕಷ್ಟು ಬೀಜ ಹಾಗೂ ರಸಗೊಬ್ಬರ ದಾಸ್ತಾನು ಮಾಡಿಕೊಳ್ಳಲು ಜಿಲ್ಲಾಧಿಕಾರಿಗಳು ಕೃಷಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ಗ್ರಾಮ ಪಂಚಾಯತ್ ಮಟ್ಟದಲ್ಲಿ ‘ವಿಪತ್ತು ನಿರ್ವಹಣಾ ಸಮಿತಿ’ಗಳನ್ನು ನಡೆಸಬೇಕು.
ಮೂಲಸೌಕರ್ಯ ಹಾಗೂ ಕಟ್ಟಡಗಳ ತಪಾಸಣೆ ಜಿಲ್ಲೆಯಲ್ಲಿರುವ ಶಾಲಾ, ಕಾಲೇಜು ಹಾಗೂ ಅಂಗನವಾಡಿ ಕಟ್ಟಡಗಳ ಸುವ್ಯವಸ್ಥೆಯನ್ನು ಪರಿಶೀಲಿಸಬೇಕು. ಹಳೆಯ ಹಾಗೂ ಶಿಥಿಲಗೊಂಡಿರುವ ಖಾಸಗಿ ಮತ್ತು ಸಾರ್ವಜನಿಕ ಕಟ್ಟಡಗಳನ್ನು ಗುರುತಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.
ಮಳೆಗಾಲದ ಅಪಾಯಗಳ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಡಂಗುರ, ಜಿಂಗಲ್ಸ್, ರೇಡಿಯೋ ಹಾಗೂ ಇತರೆ ಜನಪ್ರಿಯ ಮಾಧ್ಯಮಗಳ ಮೂಲಕ ವ್ಯಾಪಕ ಪ್ರಚಾರ ಕೈಗೊಳ್ಳಬೇಕು ಎಂದರು. ವಿದ್ಯುತ್ ಸುರಕ್ಷತೆ: ವಿದ್ಯುತ್ ಕಂಬ ಹಾಗೂ ಲೈನ್‌ಗಳಿಂದಾಗುವ ಅವಘಡಗಳನ್ನು ತಪ್ಪಿಸಲು ಹೆಸ್ಕಾಂ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುವುದು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಷಿ ಆನಂದ, ಪಾಲಿಕೆ ಆಯುಕ್ತ ವಿಜಯ ಮೆಕ್ಕಳಕಿ, ಯೋಜನಾ ನಿರ್ದೇಶಕ ಬದ್ರುದ್ದಿನ್ ಸೌದಾಗರ್, ಜಿಲ್ಲಾ ಶಸ್ತ್ರಚಿಕಿತ್ಸಕ ಶಿವಾನಂದ ಮಾಸ್ತಿಹೊಳಿ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಶಿವಾನಂದ ಪಾಟೀಲ, ತೋಟಗಾರಿಕಾ ಜಂಟಿ ನಿರ್ದೇಶಕ ರಾಹುಲ್ ಬಾವಿದೊಡ್ಡಿ, ಆರೋಗ್ಯಮತ್ತು ಕುಟುಂಬ ಕಲ್ಯಾಣಾಣಧಿಕಾರಿ ಡಾ. ಸಂಪತ್ ಗುಣಾರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಕೆ.ಕೆ ಚವ್ಹಾಣ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.


