ಅಂಬಾ ಭವಾನಿ ದೇವಸ್ಥಾನದಲ್ಲಿ ನವರಾತ್ರೋತ್ಸವ ಸಂಪನ್ನ

ಸಪ್ತಸಾಗರ ವಾರ್ತೆ, ವಿಜಯಪುರ, ಅ.7 : ವಿಜಯಪುರ ನಗರದ ಕವತಾಳ ಲೇಔಟ್‌ನ ಶ್ರೀ ಅಂಬಾ ಭವಾನಿ ದೇವಸ್ಥಾನದಲ್ಲಿ ನವರಾತ್ರೋತ್ಸವ ಭಕ್ತಿಭಾವದಿಂದ ಮತ್ತು ವೈಭವೋಪೇತವಾಗಿ ನೆರವೇರಿತು. ಕೊಜಾಗರಿ ಪೂರ್ಣಿಮೆಯ ದಿನದಂದು ಬೆಳಿಗ್ಗೆ ದೇವಿಗೆ ಮಹಾಪೂಜೆ ಹಾಗೂ ಅಲಂಕಾರ ಕಾರ್ಯಕ್ರಮವನ್ನು ಅದ್ಧೂರಿಯಾಗಿ ನಡೆಸಲಾಯಿತು.
ನಂತರ ಋತ್ವಿಜ ಗಣದ ನೇತೃತ್ವದಲ್ಲಿ ಚಂಡಿ ಹವನವನ್ನು ವೈದಿಕ ಪದ್ದತಿಯ ಪ್ರಕಾರ ಸಂಪನ್ನಗೊಳಿಸಲಾಯಿತು. ಮಧ್ಯಾಹ್ನ 1 ಗಂಟೆಗೆ ಪೂರ್ಣಾಹುತಿ ನಡೆದಿದ್ದು, ನಂತರ ಮಧ್ಯಾಹ್ನ 1.30ಕ್ಕೆ ಭಕ್ತರಿಗಾಗಿ ಅನ್ನಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ರಾತ್ರಿ 11 ಗಂಟೆಗೆ ಗೊಂಧಳ ಕಾರ್ಯಕ್ರಮವೂ ಭಕ್ತಿ ಮತ್ತು ಸಂಭ್ರಮದ ವಾತಾವರಣದಲ್ಲಿ ನಡೆಯಿತು. ಒಂಬತ್ತು ದಿನಗಳ ಈ ನವರಾತ್ರೋತ್ಸವವು ಧಾರ್ಮಿಕ ಕೀರ್ತನೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ವಿಶೇಷ ಪೂಜೆಗಳೊಂದಿಗೆ ಭಕ್ತಿಯಿಂದ ಪೂರ್ಣಗೊಂಡಿತು. ಈ ಎಲ್ಲ ಕಾರ್ಯಕ್ರಮಗಳು ದೇವಸ್ಥಾನದ ಮುಖ್ಯ ಅರ್ಚಕರಾದ ಕಲ್ಯಾಣಿ ಸಂಗಮ ಆಚಾರ ಅವರ ನೇತೃತ್ವದಲ್ಲಿ ನೆರವೇರಿದವು. ಸ್ಥಳೀಯ ಭಕ್ತರು ಹಾಗೂ ಅತಿಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ದೇವಿಯ ಆಶೀರ್ವಾದ ಪಡೆದರು.

Share this