ಹೊಸ ಬೀಟ್ ವ್ಯವಸ್ಥೆ ಜಾರಿ : ಮನೆ ಸುರಕ್ಷತೆಗೆ `ಆರಕ್ಷಕರ ಹೊಸ ಸೂತ್ರ

ಸಪ್ತಸಾಗರ ವಾರ್ತೆ,ವಿಜಯಪುರ, ಮೇ. 11 :
ಬೇಸಿಗೆ ರಜೆ, ಮದುವೆ ಮೊದಲಾದ ಶುಭ ಸಮಾರಂಭ, ಪ್ರವಾಸ ಹೀಗೆ ಅನೇಕ ಸಂದರ್ಭಗಳಲ್ಲಿ ಮನೆಗಳಿಗೆ ಕೀಲಿ ಹಾಕಿ ಹೋಗಬೇಕಾದ ಪ್ರಸಂಗ ಬರುತ್ತದೆ. ಇದನ್ನು ಬಳಸಿ ಕಳ್ಳರು ತಮ್ಮ ಕೈಚಳಕ ಪ್ರದರ್ಶಿಸುವುದುಂಟು. ಆದರೆ ಈಗ ಹೆದರಬೇಕಿಲ್ಲ. ಈ ಸಂದರ್ಭದಲ್ಲಿ ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಆರಕ್ಷಕ ಇಲಾಖೆ ಹೊಸ ಸೂತ್ರ ಅನುಸರಿಸಿದ್ದು, ಲಾಕ್ಡ್ ಹೌಸ್ ಬೀಟ್ ಸಿಸ್ಟಂ ಎನ್ನುವ ಹೊಸ ಯೋಜನೆಯನ್ನು ರೂಪಿಸಿದೆ.
ಈ ನೂತನ ಯೋಜನೆ ಮೂಲಕ ವಿಶೇಷ ಸಹಾಯವಾಣಿ ಸಂಖ್ಯೆಯಾದ 8277970747 ಸಂಖ್ಯೆಗೆ ತಮ್ಮ ಹೆಸರು, ವಿಳಾಸ, ಜಿಪಿಎಸ್ ವಿವರ ಹಾಗೂ ಮನೆಯಿಂದ ಹೊರಗೆ ಹೋಗುವ ಅವಧಿಯನ್ನು ದಾಖಲಿಸಿದರೆ ಸಾಕು, ಅಷ್ಟು ದಿನ ಪೊಲೀಸ್ ಸಿಬ್ಬಂದಿನಿಮ್ಮ ಮನೆಯ ಸುರಕ್ಷತೆಯ ಮೇಲೆ ಕಣ್ಗಾವಲು ಇರಿಸುವ ವ್ಯವಸ್ಥೆ ಜಾರಿಗೆ ತರಲಾಗಿದೆ.
ಈ ಯೋಜನೆಯ ಕುರಿತು ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ ನಿಂಬರಗಿ ವಿವರಣೆ ನೀಡಿ, ಪೊಲೀಸ ಇಲಾಖೆಯು ಕಳ್ಳತನ ತಡೆಗಟ್ಟುವ ಕುರಿತು ಹಲವು ರೀತಿಯ ಕ್ರಮಗಳನ್ನು ಕೈಕೊಳ್ಳುತ್ತಾ ಬಂದಿದ್ದು, ಪೊಲೀಸ ಇಲಾಖೆಯು ಗಮನಿಸಿದಂತೆ ಸಾರ್ವಜನಿಕರು ವಿವಿಧ ಕಾರಣಗಳಿಗಾಗಿ ತಮ್ಮ ಮನೆಯನ್ನು ಕೀಲಿ ಹಾಕಿಕೊಂಡು ಹೋದ ಸಂದರ್ಭದಲ್ಲಿ ಅಪರಾಧಿಗಳು ಕೀಲಿ ಹಾಕಿದ ಮನೆಗಳನ್ನು ಗುರುತಿಸಿ, ಕಳ್ಳತನ ಕೃತ್ಯಗಳನ್ನು ಎಸಗುತ್ತಿರುವ ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತವೆ. ಇದನ್ನು ತಪ್ಪಿಸಲು ತಂತ್ರಜ್ಞಾನವನ್ನು ಬಳಸಿಕೊಂಡು ಹೊಸ ವಿಧಾನವನ್ನು ಜಾರಿಗೆ ತರಲಾಗುತ್ತಿದೆ ಎಂದರು.
ಸಾರ್ವಜನಿಕರು ವಿವಿಧ ಕಾರಣಗಳಿಗಾಗಿ ತಮ್ಮ ಮನೆಯನ್ನು ಕೀಲಿ ಹೋಗಬೇಕಾದ ಸಂದರ್ಭದಲ್ಲಿ ಕಳ್ಳತನದಂತಹ ಕೃತ್ಯಗಳನ್ನು ಪರಿಣಾಮಕಾರಿಯಾಗಿ ತಡೆಗಟ್ಟಿ ಸಾರ್ವಜನಿಕರಲ್ಲಿ ವಿಶ್ವಾಸ ಮೂಡಿಸುವದು ಇದರ ಮೂಲ ಉದ್ದೇಶವಾಗಿದೆ ಎಂದರು.
ಈ ವಿನೂತನ ತಂತ್ರಜ್ಞಾನವನ್ನು ವಿಜಯಪುರ ಜಿಲ್ಲೆಯಲ್ಲಿಯೂ ಸಹ ಇಂದಿನಿಂದ ಪ್ರಾರಂಭಿಸಲಾಗಿದ್ದು, ಜಿಲ್ಲೆಯ ಸಾರ್ವಜನಿಕರು ವಿವಿಧ ಕಾರಣಗಳಿಗಾಗಿ ತಮ್ಮ ಮನೆಯನ್ನು ಕೀಲಿ ಹಾಕಿಕೊಂಡು ಹೋಗುವ ಸಂದರ್ಭದಲ್ಲಿ ಈ ಕೆಳಗಿನ ಮಾಹಿತಿಯನ್ನು ಜಿಲ್ಲಾ ನಿಸ್ತಂತು ಕೋಣೆಯ 8277970747 ನೇದ್ದಕ್ಕೆ ಮಾಹಿತಿ ವಿನಿಯಮ ಮಾಡಿಕೊಳ್ಳಿ ಎಂದು ಕೋರಿದರು.
ಈ ಮೇಲಿನಂತೆ ವಿವರವನ್ನು ಸಾರ್ವಜನಿಕರು ತಿಳಿಸಿದ ನಂತರ ಈ ವಿವರವನ್ನು ಜಿಲ್ಲಾ ನಿಸ್ತಂತು ಕೋಣಿಯ ಮೊಬೈಲ್ ನಂ. 8277970747 ನೇದ್ದರ ಮುಖಾಂತರ ಪಡೆದುಕೊಂಡು ಸಂಬಂಧಪಟ್ಟ ಠಾಣೆಗೆ ಮಾಹಿತಿ ರವಾನಿಸಿ, ಬೀಟ್ ಸಿಬ್ಬಂದಿ ಮೂಲಕ ಮಾಹಿತಿ ನೀಡಿದ ಮನೆಗಳಿಗೆ ಭೇಟಿ ನೀಡಿ ಪರಿಶೀಲನೆ ಕೈಕೊಂಡು ವಿವರವನ್ನು ಜಿಲ್ಲಾ ನಿಸ್ತಂತು ಕೋಣೆಗೆ ರವಾನಿಸುತ್ತಾರೆ.
ಸಾರ್ವಜನಿಕರು ಈ ರೀತಿ ಹಂಚಿಕೊಂಡ ಮಾಹಿತಿಯ ವಿವರವನ್ನು ಗೌಪ್ಯತೆಯನ್ನು ಕಾಪಾಡಲಾಗುತ್ತದೆ ಎಂದರು.

Share this