ನವಜಾತ ಶಿಶು ಪುನರುಜ್ಜೀವನ ತರಬೇತಿ ಅತ್ಯಂತ ಅಗತ್ಯ: ಡಾ. ಇನಾಮದಾರ

ಸಪ್ತಸಾಗರ ವಾರ್ತೆ,ವಿಜಯಪುರ, ಮೇ. 11:
ನವಜಾತ ಶಿಶುಗಳ ಜೀವಿತಾವಧಿ ಹೆಚ್ಚಿಸಲು ಮತ್ತು ಗುಣಮಟ್ಟದ ಆರೋಗ್ಯ ಸೇವೆಯನ್ನು ಮತ್ತಷ್ಟು ಬಲಪಡಿಸಲು ಸಂರಚಿತ ನವಜಾತ ಶಿಶು ಪುನರುಜ್ಜೀವನ ತರಬೇತಿ ಅತ್ಯಂತ ಅಗತ್ಯವಾಗಿದೆ ಎಂದು ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯ ಕುಲಪತಿ ಡಾ.‌ಅರುಣ ಚಂ. ಇಮಾಮದಾರ ಹೇಳಿದ್ದಾರೆ.
ರವಿವಾರ ನಗರದ ಬಿ.ಎಲ್‌.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದಲ್ಲಿ‌ ನಡೆದ ರಾಷ್ಟ್ರವ್ಯಾಪಿ ನವಜಾತ ಶಿಶು ಪುನರುಜ್ಜೀವನ ತರಬೇತಿ ದಿನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳಶಾಸ್ತ್ರ ವಿಭಾಗದ ಸೇವಾ ಮನೋಭಾವ ಮತ್ತು ಶೈಕ್ಷಣಿಕ ಕಾರ್ಯಚಟುವಟಿಕೆಗಳು‌ ಈ ನಿಟ್ಟಿನಲ್ಲಿ ಪ್ರಮುಖವಾಗಿವೆ ಎಂದು ಅವರು ತಿಳಿಸಿದರು.
ಬಿ.ಎಲ್‌.ಡಿ.ಇ ಡೀಮ್ಡ್ ವಿವಿಯ ಶ್ರೀ ಬಿ. ಎಂ . ಪಾಟೀಲ ವೈದ್ಯಕೀಯ ಮಹಾವಿದ್ಯಾಲಯ, ಆಸ್ಪತ್ರೆ ಮತ್ತು ಸಂಶೋಧನ ಕೇಂದ್ರದ ಮಕ್ಕಳ ಶಾಸ್ತ್ರ ವಿಭಾಗ, ಭಾರತೀಯ ಮಕ್ಕಳವೈದ್ಯರ ಅಕಾಡೆಮಿ(ಐಎಪಿ) ವಿಜಯಪುರ ಶಾಖೆ ಹಾಗೂ ರಾಷ್ಟ್ರೀಯ ನವಜಾತ ಶಿಶು ತಜ್ಞರ ವೇದಿಕೆ(ಎನ್‌ಎನ್‌ಎಫ್) ಸಹಯೋಗದಲ್ಲಿ, ತರಬೇತಿ ಸಂಖ್ಯೆ 234 ಅಡಿಯಲ್ಲಿ ರಾಷ್ಟ್ರವ್ಯಾಪಿ ಈ ನವಜಾತ ಶಿಶು ಪುನರುಜ್ಜೀವನ ತರಬೇತಿ ದಿನಾಚರಣೆ ನಡೆಯಿತು.
ಈ ಕಾರ್ಯಕ್ರಮವು ಎನ್‌.ಎನ್‌.ಎಫ್ ಭಾರತದ ಐತಿಹಾಸಿಕ ರಾಷ್ಟ್ರವ್ಯಾಪಿ ಉಪಕ್ರಮದ ಭಾಗವಾಗಿದ್ದು, ದೇಶದಲ್ಲಿ ಒಂದೇ ದಿನದಲ್ಲಿ 1,100ಕ್ಕೂ ಅಧಿಕ ನವಜಾತ ಶಿಶು ಪುನರುಜ್ಜೀವನ ತರಬೇತಿ ಕಾರ್ಯಾಗಾರಗಳನ್ನು ಆಯೋಜಿಸುವ ಮೂಲಕ, 35 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ವ್ಯಾಪ್ತಿಯಲ್ಲಿ 23,000ಕ್ಕೂ ಹೆಚ್ಚು ವೈದ್ಯರು ಹಾಗೂ ದಾದಿಯರಿಗೆ ತರಬೇತಿ ನೀಡಲಾಯಿತು.
ಒಂದು ದಿನ-ಒಂದು ರಾಷ್ಟ್ರ- ಒಂದು ಧ್ಯೇಯ: ಪ್ರತಿಯೊಂದು ಉಸಿರಿನೊಂದಿಗೆ ನವಜಾತ ಶಿಶುಗಳ ಜೀವ ರಕ್ಷಣೆ ಎಂಬ ಧ್ಯೇಯವಾಕ್ಯದಡಿ ಈ ಕಾರ್ಯಕ್ರಮ ನಡೆಯಿತು.
ಈ ತರಬೇತಿ ಕಾರ್ಯಕ್ರಮದಲ್ಲಿ ಸುಮಾರು 50 ಮಂದಿ ಆರೋಗ್ಯ ಸೇವಾ ವೃತ್ತಿಪರರು, ವೈದ್ಯರು ಹಾಗೂ ದಾದಿಯರು ಭಾಗವಹಿಸಿದ್ದರು. ಕಾರ್ಯಾಗಾರದಲ್ಲಿ ಪರಿಣಾಮಕಾರಿ ಉಸಿರಾಟ ನೆರವು ವಿಧಾನಗಳು, ನವಜಾತ ಶಿಶುಗಳ ತುರ್ತು ಸ್ಥಿರೀಕರಣ ಕ್ರಮಗಳು ಹಾಗೂ ಮಾದರಿ ಆಧಾರಿತ ತಂಡ ತರಬೇತಿ ಸೇರಿದಂತೆ ನಾನಾ ಅಗತ್ಯ ಕೌಶಲ್ಯಗಳಿಗೆ ವಿಶೇಷ ಮಹತ್ವ ನೀಡಲಾಯಿತು.
ಜನನದ ತಕ್ಷಣ ಉಸಿರಾಟದ ನೆರವು ಅಗತ್ಯವಿರುವ ನವಜಾತ ಶಿಶುಗಳಿಗೆ ತ್ವರಿತ ಮತ್ತು ಪರಿಣತ ಆರೈಕೆ ಒದಗಿಸುವ ಅಗತ್ಯತೆಯನ್ನು ಈ ಕಾರ್ಯಕ್ರಮದಲ್ಲಿ ಅರಿವು ಮೂಡಿಸಲಾಯಿತು.
ಈ ಸಂದರ್ಭದಲ್ಲಿ ವೈದ್ಯಕೀಯ ವಿಭಾಗದ ಡೀನ ಮತ್ತು ಪ್ರಾಚಾರ್ಯೆ ಡಾ. ತೇಜಸ್ವಿನಿ ವಲ್ಲಭ, ಅಲೈಡ್ ಹೆಲ್ತ್ ಸೈನ್ಸಸ್ ವಿಭಾಗದ ಡೀನ್ ಡಾ. ಎಸ್. ವಿ. ಪಾಟೀಲ, ಮಕ್ಕಳ ವಿಭಾಗದ ಮುಖ್ಯಸ್ಥರಾದ ಪ್ರೊ. ಡಾ. ಎಂ. ಎಂ. ಪಾಟೀಲ, ನವಜಾತ ಶಿಶು ತಜ್ಞರು ಹಾಗೂ ಮಕ್ಕಳ ಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ. ಸಿದ್ದು ಚರ್ಕಿ, ಐಎಪಿ ವಿಜಯಪುರ ಘಟಕದ ಅಧ್ಯಕ್ಷ ಡಾ. ಎಸ್. ಎಸ್. ಕಲ್ಯಾಣಶೆಟ್ಟರ, ಡಾ. ಸುಧೀರ ಚವ್ಹಾಣ, ಡಾ. ರವಿಕುಮಾರ ಬರಡೋಲ, ಡಾ. ಆರ್. ಎಚ್. ಗೊಬ್ಬೂರು, ಡಾ. ವಿಜಯಕುಮಾರ ಬಿರಾದಾರ, ಡಾ. ಅತುಲ ಥೊಬ್ಬಿ, ಎನ್.ಎನ್.ಎಫ್ ಭಾರತ, ಐಎಪಿ ವಿಜಯಪುರ, ಪ್ರತಿನಿಧಿಗಳು, ಅಧ್ಯಾಪಕರು ಹಾಗೂ ಸಹಾಯಕ ಸಿಬ್ಬಂದಿಗೆ ಉಪಸ್ಥಿತರಿದ್ದರು.

Share this