25ನೇ ವರ್ಷದ ಗಂಗಾಪೂಜೆಗೆ ಮಹಾಬಳೇಶ್ವರದತ್ತ ಉತ್ತರ ಕರ್ನಾಟಕದ ರೈತರ ಮಹಾಯಾತ್ರೆ

ಸಪ್ತಸಾಗರ ವಾರ್ತೆ,ವಿಜಯಪುರ, ಜು. 28: ಉತ್ತರ ಕರ್ನಾಟಕದ ಜೀವನಾಡಿಯಾದ ಕೃಷ್ಣಾ ನದಿಯ ಉಗಮಸ್ಥಳ ಮಹಾರಾಷ್ಟ್ರದ ಮಹಾಬಳೇಶ್ವರದಲ್ಲಿ ಬುಧವಾರ ನಡೆಯಲಿರುವ 25ನೇ ವರ್ಷದ ನಿರಂತರ ಗಂಗಾಪೂಜೆ ಹಾಗೂ ಬಾಗಿನ ಅರ್ಪಣೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳ 100ಕ್ಕೂ ಅಧಿಕ ರೈತರು, ರೈತ ಮಹಿಳೆಯರು ಹಾಗೂ ವಿವಿಧ ಸಂಘಟನೆಗಳ ಮುಖಂಡರು ಮಂಗಳವಾರ ಮಹಾಬಳೇಶ್ವರದತ್ತ ಪ್ರಯಾಣ ಬೆಳೆಸಿದರು.
ವಿಜಯಪುರ ನಗರದ ಹೊಸ ಪ್ರವಾಸಿ ಮಂದಿರದಿಂದ ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ ಅವರ ನೇತೃತ್ವದಲ್ಲಿ ವಿಶೇಷ ವಾಹನಗಳಲ್ಲಿ ರೈತರ ತಂಡವನ್ನು ಬೀಳ್ಕೊಡಲಾಯಿತು. ಬುಧವಾರ ಮಹಾಬಳೇಶ್ವರದ ಐತಿಹಾಸಿಕ ಪಂಚಗಂಗಾ ದೇವಸ್ಥಾನದಲ್ಲಿ ಕೃಷ್ಣಾ ಮಾತೆಗೆ ವಿಶೇಷ ಗಂಗಾಪೂಜೆ ಸಲ್ಲಿಸಿ, ಸಂಪ್ರದಾಯಬದ್ಧವಾಗಿ ಬಾಗಿನ ಅರ್ಪಣೆ ನೆರವೇರಿಸಲಾಗುತ್ತದೆ.
ಉತ್ತರ ಕರ್ನಾಟಕದ ವಿಜಯಪುರ, ಬಾಗಲಕೋಟೆ, ಕಲಬುರಗಿ, ಯಾದಗಿರಿ ಹಾಗೂ ರಾಯಚೂರು ಜಿಲ್ಲೆಗಳ ಲಕ್ಷಾಂತರ ರೈತರ ಬದುಕಿಗೆ ಕೃಷ್ಣಾ ನದಿಯೇ ಜೀವಾಳವಾಗಿದೆ. ಈ ವರ್ಷ ಉತ್ತರ ಕರ್ನಾಟಕದಲ್ಲಿ ಮಳೆ ಕೊರತೆ ಕಂಡುಬಂದಿದ್ದರೂ, ಪಶ್ಚಿಮ ಘಟ್ಟದಲ್ಲಿ ಸುರಿಯುವ ಮಳೆಯಿಂದ ಕೃಷ್ಣಾ ನದಿ ಹರಿದು ಕೃಷಿ ಹಾಗೂ ಕುಡಿಯುವ ನೀರಿನ ಪ್ರಮುಖ ಆಸರೆಯಾಗಿ ನಿಂತಿದೆ. ಈ ಹಿನ್ನೆಲೆಯಲ್ಲಿ ಕೃಷ್ಣಾ ಮಾತೆಯ ಮೇಲಿನ ಕೃತಜ್ಞತೆಯ ಸಂಕೇತವಾಗಿ ಕಳೆದ 25 ವರ್ಷಗಳಿಂದ ಗಂಗಾಪೂಜೆ ಮತ್ತು ಬಾಗಿನ ಅರ್ಪಣೆ ಕಾರ್ಯಕ್ರಮವನ್ನು ನಿರಂತರವಾಗಿ ನಡೆಸಿಕೊಂಡು ಬರಲಾಗುತ್ತಿದೆ.
ಈ ವರ್ಷದ ಯಾತ್ರೆಯಲ್ಲಿ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಜಿ.ಡಿ. ಅಂಗಡಿ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಬಿರಾದಾರ, ರಾಮಣ್ಣ ಬಾಟಿ, ವಿಜಯ ಪೂಜಾರಿ, ಶ್ರೀಶೈಲ ಒಡಗಲ್, ಅಶೋಕ ಗಿಡ್ಡಪಗೋಳ, ಶೇಕು ಗಾಣಿಗೇರ, ಆನಂದ ಬಿಸ್ಟಗೊಂಡ, ಈರಪ್ಪ ಜಿದ್ದಿಬಾಗಿಲ, ಪುಟ್ಟು ತೇಲಿ, ಕಸ್ತೂರಿ ಬೆಳ್ಳುಬ್ಬಿ, ರೇಣುಕಾ ಅಂಥನಿ, ಮಲ್ಲು ಕಲಾದಗಿ ಸೇರಿದಂತೆ 100ಕ್ಕೂ ಅಧಿಕ ರೈತರು ಹಾಗೂ ಮಹಿಳೆಯರು ಪಾಲ್ಗೊಂಡಿದ್ದಾರೆ.
ಸಾತಾರ ಜಿಲ್ಲೆಯ ಮಹಾಬಳೇಶ್ವರದಲ್ಲಿ ಇರುವ ಪಂಚಗಂಗಾ ಕ್ಷೇತ್ರವು ಕೃಷ್ಣಾ ಸೇರಿದಂತೆ ಐದು ಪವಿತ್ರ ನದಿಗಳ ಉಗಮಸ್ಥಳವಾಗಿ ಪ್ರಸಿದ್ಧಿ ಪಡೆದಿದೆ. ಇದೇ ಪವಿತ್ರ ಕ್ಷೇತ್ರದಲ್ಲಿ ಉತ್ತರ ಕರ್ನಾಟಕದಲ್ಲಿ ಉತ್ತಮ ಮಳೆ, ಸಮೃದ್ಧ ಕೃಷಿ, ರೈತರ ಸುಭಿಕ್ಷ ಹಾಗೂ ಜನಕಲ್ಯಾಣಕ್ಕಾಗಿ ವಿಶೇಷ ಪೂಜೆ, ಗಂಗಾಪೂಜೆ ಮತ್ತು ಬಾಗಿನ ಅರ್ಪಣೆ ನೆರವೇರಿಸಲಾಗುತ್ತದೆ.

Share this