ಅಧಿಕಾರಿಗಳು ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು: ಸಚಿವ ಎಂ. ಬಿ. ಪಾಟೀಲ

ಸಪ್ತಸಾಗರ ವಾರ್ತೆ ವಿಜಯಪುರ, ಆ. 31: ಗ್ರಾಮ ಪಂಚಾಯಿತಿಗಳು ದೇವಾಲಯಗಳಿದ್ದಂತೆ. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಇಲ್ಲಿಗೆ ಬರುವ ಜನರ ಸ್ಥಳೀಯ ಸಮಸ್ಯೆಗಳನ್ನು ಆಲಿಸಿ ಸೂಕ್ತವಾಗಿ ಸ್ಪಂದಿಸಬೇಕು ಎಂದು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಕರೆ ನೀಡಿದ್ದಾರೆ.
ರವಿವಾರ ತಿಕೋಟಾ ತಾಲೂಕಿನ ಸಿದ್ದಾಪುರ ಕೆ. ಗ್ರಾಮದಲ್ಲಿ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ನಿರ್ಮಿಸಿದ! ಅಮೃತ ಗ್ರಾಮ ಪಂಚಾಯತ ನೂತನ ಕಚೇರಿಯ ಕಟ್ಟಡ ಹಾಗೂ ಗೋದಾಮು ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಜನರ ಸೇವೆ ದೇವರ ಸೇವೆ ಎಂದು ನಾವು ನಂಬಿದ್ದೇವೆ. ಇಲ್ಲಿನ ಗ್ರಾ. ಪಂ. ಕಟ್ಟಡವನ್ನು ಸುಂದರ ಮತ್ತು ಸುವ್ಯವಸ್ಥಿತವಾಗಿ ನಿರ್ಮಿಸಲಾಗಿದೆ. ಅಲ್ಲದೇ, ತಂತ್ರಜ್ಞಾನದ ಸದ್ಭಳಕೆ ಮಾಡಲಾಗಿದೆ. ಇದೇ ರೀತಿ ಗ್ರಾಮಸ್ಥರ ಸಮಸ್ಯೆಗಳಿಗೆ ಸೂಕ್ತವಾಗಿ ಸ್ಪಂದಿಸಿ ಮಾದರಿಯಾಗಬೇಕು. ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳ ಆಶಯದಂತೆ ನೈರ್ಮಲ್ಯಕ್ಕೆ ಒತ್ತು ಕೊಡಬೇಕು. ಮತ್ತಷ್ಟು ಜನಸ್ನೇಹಿಯಾಗಿ ಕೆಲಸ ಮಾಡಬೇಕು ಎಂದು ಅವರು ಹೇಳಿದರು.
ಇಲ್ಲಿ ಮಾಡಿರುವ ನೀರಾವರಿ ಕೆಲಸದಿಂದಾಗಿ ರೈತರು ಆರ್ಥಿಕವಾಗಿ ಸದೃಢರಾಗಿದ್ದು, ಕಾರ್ಯಕ್ರಮಕ್ಕೆ ಬರುವಾಗ ಮಾರ್ಗ ಮಧ್ಯದಲ್ಲಿ ಲೋಹಗಾಂವದಲ್ಲಿ ಗ್ರಾಮಸ್ಥರು ನಮ್ಮನ್ನು ತಡೆದರು. ತಮ್ಮ ಊರಿನಲ್ಲಿ ನಿರ್ಮಿಸಲಾಗುತ್ತಿರುವ ದೇವಸ್ಥಾನಕ್ಕೆ ಒಂದು ಕೋಟಿ ರೂಪಾಯಿ ವೆಚ್ಚವಾಗಲಿದೆ. ಇದಕ್ಕೆ ತಗಲುವ ಸಂಪೂರ್ಣ ಹಣವನ್ನು ಗ್ರಾಮಸ್ಥರೆಲ್ಲರೂ ಸೇರಿಕೊಂಡು ಸಂಗ್ರಹಿಸಿ ಕಾಮಗಾರಿ ಕೈಗೊಂಡಿದ್ದೇವೆ. ಇದಕ್ಕೆ ತಾವು ಮಾಡಿರುವ ನೀರಾವರಿ ಯೋಜನೆಗಳೇ ಕಾರಣ ಎಂದು ಹೇಳಿದರು. ಈ ಮಾತು ಕೇಳಿ ಬಹಳ ಸಂತೋಷವಾಯಿತು. ಶ್ರಿ ಸಿದ್ಧೇಶ್ವರ ಸ್ವಾಮೀಜಿ ನನ್ನನ್ನು ಜಲನಾಯಕ ಎಂದು ಕರೆದ ಮಾತುಗಳು ನನಗೆ ನೆನಪಿಗೆ ಬಂದವು. ಬಾಬಾನಗರ ಬಳಿ ಡ್ಯಾಂ‌ ನಿರ್ಮಿಸಲಾಗುತ್ತಿದ್ದು, ಅದು ಪೂರ್ಣಗೊಂಡ ನಂತರ ಈ ಭಾಗದಲ್ಲಿ ಬೇಸಿಗೆಯಲ್ಲೂ ನೀರು ಸಿಗಲಿದೆ. ಭೂಮಿ ಬಂಗಾರವಿದ್ದಂತೆ. ಯಾರೂ ಮಾರಾಟ ಮಾಡಬಾರದು ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ತಿಕೋಟಾ ವಿರಕ್ತಮಠದ ಶ್ರೀ ಚನ್ನಮಲ್ಲಿಕಾರ್ಜುನ ಸ್ವಾಮೀಜಿ, ಜಿ. ಪಂ. ಸಿಇಒ ರಿಷಿ ಆನಂದ, ಸಿದ್ದಾಪುರ ಕೆ. ಗ್ರಾ. ಪಂ. ಅಧ್ಯಕ್ಷೆ ಶಿಲ್ಪಾ ಹೊಸಮನಿ, ಉಪಾಧ್ಯಕ್ಷ ಮಾರುತಿ ಸಮಗಾರ, ತಿಕೋಟಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿದ್ದು ಗೌಡನವರ, ಮುಖಂಡರಾದ ಸೋಮನಾಥ ಬಾಗಲಕೋಟ, ಬಸವರಾಜ ತೇಲಿ, ಮಧುಕರ ಜಾಧವ, ರಾಜು ಜೋರಾಪುರ, ಗ್ರಾ. ಪಂ. ಪಿಡಿಒ ಪದ್ಮಿನಿ ಬಿರಾದಾರ, ಗ್ರಾ. ಪಂ. ಸದಸ್ಯರು, ತಾ. ಪಂ. ಅಧಿಕಾರಿಗಳು, ಸಿದ್ದಾಪುರ ಕೆ., ಮಲಕನದೇವರಹಟ್ಟಿ, ಧನರ್ಗಿ, ಸೋಮದೇವರಹಟ್ಟಿ ಗ್ರಾಮಸ್ಥರು ಉಪಸ್ಥಿತರಿದ್ದರು.

Share