ಸಪ್ತಸಾಗರ ವಾರ್ತೆ, ವಿಜಯಪುರ, ಡಿ. 2:
ನಗರದ ಬಸ್ ನಿಲ್ದಾಣದ ಬಳಿ ಇರುವ ಪುರಾತನ ಶ್ರೀ ನರಸಿಂಹ ದೇವಾಲಯದಲ್ಲಿ ಡಿ.೪ ಹಾಗೂ ೫ ರಂದು ಎರಡು ದಿನಗಳ ಕಾಲ ಶ್ರೀ ದತ್ತ ಜಯಂತಿ ಉತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಗುವುದು. ಶ್ರೀ ದತ್ತ ಜಯಂತಿ ಉತ್ಸವ ಮಂಡಳ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿದೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಮಂಡಳ, ಡಿ.೪ ರಂದು ಬೆಳಿಗ್ಗೆ ಶ್ರೀ ಗುರುಚರಿತ್ರ ಪಾರಾಯಣ ನಡೆಯಲಿದ್ದು, ಸಂಜೆ ೪-೩೦ಕ್ಕೆ ಶ್ರೀ ಉಮೇಶ ಉಪಾಧ್ಯಾಯ ಇವರಿಂದ ಕೀರ್ತನ ಸೇವೆ, ಸಂಜೆ ೫-೫೫ಕ್ಕೆ ಶ್ರೀ ದತ್ತ ಜನ್ಮ ಹಾಗೂ ಸಂಜೆ ೬-೩೦ಕ್ಕೆ ಔರಂಗಾಬಾದ ಇವರಿಂದ ಸಂಗೀತ ಸೇವೆ ನಡೆಯಲಿದೆ. ರಾತ್ರಿ ೭-೩೦ಕ್ಕೆ ಶ್ರೀಗಳ ಪಾಲಕಿ ಸೇವೆ ಹಾಗೂ ತೇಲಿ ಸಮಾಜ ವಾಟರಕರ ಇವರಿಂದ ಸಂಗೀತ ಸೇವೆ ಜರುಗಲಿದೆ.
ಡಿ.೫ ರಂದು ಬೆಳಿಗ್ಗೆ ೯ ಘಂಟೆಗೆ ಶ್ರೀ ರುದ್ರಾಭಿಷೇಕ, ಮಧ್ಯಾನ್ಹ ೧೨ರಿಂದ ೩ ಘಂಟೆವರೆಗೆ ಮಹಾಪ್ರಸಾದ ನಡೆಯಲಿದೆ. ರಾತ್ರಿ ೭-೧೫ಕ್ಕೆ ಶ್ರೀಗಳ ಪಾಲಕಿ ಸೇವೆ ಇದ್ದು ರಾತ್ರಿ ೧೦ ಕ್ಕೆ ಕಾರ್ತಿಕ ಸಮಾಪ್ತಿ ಆಗಲಿದೆ. ಈಗಾಗಲೇ ಉತ್ಸವದ ಪೂರ್ವಭಾವಿಯಾಗಿ ಡಿ.೨೮ರಿಂದ ಹಲವಾರು ಕಾರ್ಯಕ್ರಮಗಳು ಜರುಗಿದ್ದು, ಅದರಲ್ಲಿ ಶ್ರೀ ಗುರುಚರಿತ್ರ ಪಾರಾಯಣ, ಸತ್ಯ ನಾರಾಯಣ ಪೂಜೆ, ಮೃತ್ಯುಂಜಯ ಹೋಮ ಸೇರಿದಂತೆ ಅನೇಕ ಕಾರ್ಯಕ್ರಮಗಳು ಸಾಂಗವಾಗಿ ನೆರವೇರಿವೆ.
ಶ್ರೀ ದತ್ತ ಜಯಂತಿ ಕಾರ್ಯಕ್ರಮದಲ್ಲಿ ಸಕಲ ಸದ್ಭಕ್ತರು ಆಗಮಿಸಿ ತನುಮನಧನದಿಂದ ಸಹಾಯ ಮಾಡುವಂತೆ ಪ್ರಕಟಣೆ ತಿಳಿಸಿದೆ.
ಡಿ.೪, ೫ರಂದು ಎರಡು ದಿನಗಳ ಕಾಲಶ್ರೀ ದತ್ತ ಜಯಂತಿ ಆಚರಣೆ


