ಸೆ.6ರಂದು ಆಲಮಟ್ಟಿಯಲ್ಲಿ ಸಿಎಂ ಸಿದ್ದರಾಮಯ್ಯ ಕೃಷ್ಣಗೆ ಬಾಗಿನ ಅರ್ಪಣೆ

ಸಪ್ತಸಾಗರ ವಾರ್ತೆ ವಿಜಯಪುರ, ಸೆ. 4: ಆಲಮಟ್ಟಿಯ ಲಾಲ್ ಬಹಾದ್ದೂರ್‌ಶಾಸ್ತ್ರಿ ಜಲಾಶಯ ಈಗ ಭರ್ತಿಯಾಗಿದ್ದು, ಹೀಗಾಗಿ ಉತ್ತರ ಕರ್ನಾಟಕದ ಜೀವನದಿ ಕೃಷ್ಣಗೆ ಸೆ.6ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಾಗಿನ ಅರ್ಪಿಸಲಿದ್ದಾರೆ ಎಂದು ಕೆಬಿಜೆಎನ್‌ಎಲ್ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಆಗಸ್ಟ್ ಎರಡನೆಯ ವಾರದವರೆಗೆ ಮಹಾರಾಷ್ಟ್ರದ ಪಶ್ಚಿಮ ಘಟ್ಟದಲ್ಲಿ ವ್ಯಾಪಕ ಮಳೆಯಾಗಿ ಕೃಷ್ಣೆಯ ಮುಖ್ಯ ಹರಿವು ಹಾಗೂ ಅದರ ಉಪನದಿಗಳಲ್ಲಿ ಅಪಾರ ಪ್ರಮಾಣದ ನೀರು ಬಂದಿರುವುದರಿಂದ ಪ್ರವಾಹ ಪರಿಸ್ಥಿತಿ ಉಂಟಾಗಿದೆ.
ಜನ, ಜಾನುವಾರಗಳಿಗೆ ಜೀವ ಹಾನಿಯಾಗದಿರಲಿ ಎನ್ನುವ ಉದ್ದೇಶದಿಂದ ಕರ್ನಾಟಕ ಹಾಗೂ ಮಹಾರಾಷ್ಟ್ರ ಸರ್ಕಾರಗಳು ಪರಸ್ಪರ ಮಾತುಕತೆ ನಡೆಸಿ ಪ್ರವಾಹ ಸಮಯದಲ್ಲಿ ಆಲಮಟ್ಟಿಯ ಜಲಾಶಯದಲ್ಲಿ 519.60 ಬದಲಾಗಿ 517 ಮೀಟರವರೆಗೆ ಮಾತ್ರ ನೀರು ಸಂಗ್ರಹಿಸಲು ಪರಸ್ಪರ ಸಹಮತ ಸೂಚಿಸಿವೆ. ಹೀಗಾಗಿ, ಕೃಷ್ಣಗೆ ಬಾಗಿನ ಅರ್ಪಿಸುವ ಕಾರ್ಯಕ್ರಮವನ್ನು ಸಾಮಾನ್ಯವಾಗಿ ಆಗಸ್ಟ್ ಕೊನೆಯ ಇಲ್ಲವೇ ಸೆಪ್ಟೆಂಬರ್‌ಮೊದಲ ವಾರದಲ್ಲಿ ನೆರವೇರಿಸಿಕೊಂಡು ಬರಲಾಗುತ್ತದೆ. ಸೆಪ್ಟಂಬರ್ 6ರಂದು ಮುಖ್ಯಮಂತ್ರಿಗಳು ಆಲಮಟ್ಟಿಯಲ್ಲಿ ಕೃಷ್ಣಗೆ ಬಾಗಿನ ಅರ್ಪಿಸಲು ಆಗಮಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

Share this